Nitin Gadkari | ಕೇಂದ್ರ ಸಚಿವ ನಿತಿನ್ ಗಡ್ಕರಿ 
ದೇಶ

ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಇನ್ನು ಭವಿಷ್ಯವಿಲ್ಲ; ಕೇಂದ್ರ ಸಚಿವ ಗಡ್ಕರಿ ಶಾಕಿಂಗ್ ಅಪ್‌ಡೇಟ್! | Nitin Gadkari

ನವದೆಹಲಿ: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳಿಂದ ಕಾರ್ಯನಿರ್ವಹಿಸುವ ವಾಹನಗಳಿಗೆ ದೀರ್ಘಾವಧಿಯಲ್ಲಿ ಭವಿಷ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಡೆದ ಬಸ್‌ವರ್ಲ್ಡ್ ಇಂಡಿಯಾ ಕಾನ್ಕ್ಲೇವ್​​ನಲ್ಲಿ ಮಾತನಾಡಿದ ಸಚಿವ ಗಡ್ಕರಿ, ಪರಿಸರ ಮಾಲಿನ್ಯ ಮತ್ತು ಆಮದು ವೆಚ್ಚದ ದೃಷ್ಟಿಯಿಂದ ಈ ಇಂಧನಗಳು ಗಂಭೀರ ಸವಾಲುಗಳನ್ನು ಒಡ್ಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಆಟೋಮೊಬೈಲ್ ತಯಾರಕರು ಇನ್ನು ಮುಂದಾದರೂ ಜೈವಿಕ ಇಂಧನಗಳು, ಸಿಎನ್‌ಜಿ (CNG), ಎಲ್‌ಎನ್‌ಜಿ (LNG) ಮತ್ತು ವಿದ್ಯುತ್ ಚಾಲಿತ ವಾಹನಗಳತ್ತ (Electric Powertrains) ಗಮನ ಹರಿಸಬೇಕು ಎಂದು ಗಡ್ಕರಿ ಒತ್ತಾಯಿಸಿದ್ದು, ಈ ಬದಲಾವಣೆಯು ಕೇವಲ ಪರಿಸರ ರಕ್ಷಣೆಯಷ್ಟೇ ಅಲ್ಲದೆ, ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ದೊಡ್ಡ ಕೊಡುಗೆ ನೀಡಲಿದೆ ಎಂದರು. ನಾವು ಪ್ರಸ್ತುತ ಹೈಡ್ರೋಜನ್ ಟ್ರಕ್‌ಗಳು ಮತ್ತು ಬಸ್‌ಗಳನ್ನು ಓಡಿಸಲು 10 ಮಾರ್ಗಗಳನ್ನು ಗುರುತಿಸಿದ್ದು, ಹೈಡ್ರೋಜನ್ ಮುಂದಿನ ದಿನಗಳ ಭವಿಷ್ಯದ ಇಂಧನವಾಗಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಮೋಟಾರ್ಸ್, ವೋಲ್ವೋ, ಅಶೋಕ್ ಲೇಲ್ಯಾಂಡ್ ಮತ್ತು ಮಹೀಂದ್ರಾದಂತಹ ಪ್ರಮುಖ ಕಂಪನಿಗಳು ಈಗಾಗಲೇ ಈ ತಂತ್ರಜ್ಞಾನದ ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂಬ ಮಾಹಿತಿ ನೀಡಿದರು.
ಭಾರತವು ವಿವಿಧ ಮೂಲಗಳಿಂದ ಎಥೆನಾಲ್ ಉತ್ಪಾದಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿದ್ದು, ಹೀಗಾಗಿ ಉದ್ಯಮವು ಫ್ಲೆಕ್ಸ್ ಇಂಧನ ಎಂಜಿನ್‌ಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ ಮತ್ತು ವಾಹನಗಳು E20 ಇಂಧನದಲ್ಲಿ ಕಾರ್ಯನಿರ್ವಹಿಸುವತ್ತ ಹೆಜ್ಜೆ ಇಡುತ್ತಿವೆ ಎಂದು ತಿಳಿಸಿದರು.

ಎಲೆಕ್ಟ್ರಿಕ್ ಬಸ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ

ಮುಂದಿನ ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬೇಡಿಕೆಯು 1,50,000 ಯೂನಿಟ್‌ಗಳಿಗೆ ತಲುಪುವ ನಿರೀಕ್ಷೆಯಿದೆ. ಆದರೆ ಪ್ರಸ್ತುತ ದೇಶದ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ ಸುಮಾರು 70,000 ಬಸ್‌ಗಳಷ್ಟಿದ್ದು, ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ

ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷತೆಯ ಬಗ್ಗೆ ಮಾತನಾಡಿದ ಗಡ್ಕರಿ, ಇನ್ನು ಮುಂದೆ ಬಸ್ ತಯಾರಕರಿಗೆ ಸ್ವಯಂ ಪ್ರಮಾಣೀಕರಣದ ಬದಲು, ವಾಹನ್ ಪೋರ್ಟಲ್‌ನಲ್ಲಿ ಭೌತಿಕ ಮತ್ತು ವಿಡಿಯೋ ಅನುಮೋದನೆಗಳೊಂದಿಗೆ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು. ಎಲ್ಲಾ ಬಸ್ ಬಾಡಿ ತಯಾರಕರು ಕೇವಲ ವೆಚ್ಚವನ್ನು ಕಡಿಮೆ ಮಾಡುವುದರತ್ತ ಗಮನ ಕೊಡದೆ ಗುಣಮಟ್ಟ, ಸುರಕ್ಷತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು(ಏಜೆನ್ಸೀಸ್​​).