ಸಾಂದರ್ಭಿಕ ಚಿತ್ರ  
ದೇಶ

ಇಂದಿನಿಂದ ದೆಹಲಿಯಲ್ಲಿ ಈ ಕಾರುಗಳಿಗೆ ಪೆಟ್ರೋಲ್​ ಬಂಕ್​ನಲ್ಲಿ ಇಂಧನ ಸಿಗಲ್ಲ: ಜಾರಿಯಾಯ್ತು ಕಟ್ಟನಿಟ್ಟಿನ ಕ್ರಮ! No Fuel

ಪ್ರಮುಖ ಮುಖ್ಯಾಂಶಗಳು

  • ವಾಯು ಮಾಲಿನ್ಯ ಕಾರಣದಿಂದಾಗಿಯೇ ಹೆಚ್ಚು ಸುದ್ದಿಯಾಗುತ್ತಿದೆ ರಾಷ್ಟ್ರ ರಾಜಧಾನಿ ದೆಹಲಿ
  • ದಿನದಿಂದ ದಿನಕ್ಕೆ ದೆಹಲಿಯ ವಾಯು ಗುಣಮಟ್ಟ ಕಡಿಮೆಯಾಗುತ್ತಿದೆ
  • ವಾಯು ಮಾಲಿನ್ಯ ತಗ್ಗಿಸಲು ಅಲ್ಲಿನ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದೆ
  • ಮಾಲಿನ್ಯ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್​ ಬಂಕ್​ಗಳಲ್ಲಿ ಇಂಧನ ದೊರೆಯುವುದಿಲ್ಲ
ನವದೆಹಲಿ: ದೇಶದ ಆಡಳಿತ ಕೇಂದ್ರವಾಗಿರುವ ರಾಷ್ಟ್ರ ರಾಜಧಾನಿ ದೆಹಲಿ ಇತ್ತೀಚೆಗೆ ತನ್ನ ವಾಯು ಮಾಲಿನ್ಯ ಕಾರಣದಿಂದಾಗಿಯೇ ಹೆಚ್ಚು ಸುದ್ದಿಯಾಗುತ್ತಿದೆ. ದಿನದಿಂದ ದಿನಕ್ಕೆ ಅಲ್ಲಿನ ವಾಯು ಗುಣಮಟ್ಟ ಕಡಿಮೆಯಾಗುತ್ತಿದೆ. ಹೀಗಾಗಿ ವಾಯು ಮಾಲಿನ್ಯ ತಗ್ಗಿಸಲು ಅಲ್ಲಿನ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದೆ. ಇದೀಗ ಮಹತ್ವದ ಕ್ರಮ ತೆಗೆದುಕೊಂಡಿರುವ ದೆಹಲಿ ಸರ್ಕಾರ, ಇಂದಿನಿಂದ ಬಿಎಸ್-VI ಎಂಜಿನ್ ಹೊಂದಿರದ ವಾಹನಗಳು ರಾಜಧಾನಿಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ ಮತ್ತು ಮಾಲಿನ್ಯ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್​ ಬಂಕ್​ಗಳಲ್ಲಿ ( No Fuel ) ಯಾವುದೇ ಸೇವೆ ದೊರೆಯುವುದಿಲ್ಲ.
ಬಿಎಸ್-VI ಎಂಜಿನ್ ಹೊಂದಿರುವ ಕಾರುಗಳಿಗೆ ಮಾತ್ರ ದೆಹಲಿಗೆ ಅವಕಾಶ ನೀಡುವ ಸರ್ಕಾರದ ಕ್ರಮದಿಂದ ಪಕ್ಕದ ಗುರುಗ್ರಾಮ್, ಗಾಜಿಯಾಬಾದ್, ಫರಿದಾಬಾದ್ ಮತ್ತು ನೋಯ್ಡಾದಿಂದ ದೆಹಲಿಗೆ ಪ್ರವೇಶಿಸುವ ಸುಮಾರು 12 ಲಕ್ಷ ವಾಹನಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ನೋಯ್ಡಾದಿಂದ ನಾಲ್ಕು ಲಕ್ಷಕ್ಕೂ ಹೆಚ್ಚು, ಗುರಗಾಂವ್‌ನಿಂದ ಎರಡು ಲಕ್ಷ ಮತ್ತು ಗಾಜಿಯಾಬಾದ್‌ನಿಂದ 5.5 ಲಕ್ಷ ವಾಹನಗಳು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ಇದೀಗ ನಿಷೇಧಿಸಿದಂತಾಗಿದೆ.
ಇನ್ನು ವಾಹನ ತಪಾಸಣೆಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ದೆಹಲಿ ಸರ್ಕಾರ, 580 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. 126 ಚೆಕ್‌ಪೋಸ್ಟ್‌ಗಳಲ್ಲಿ 37 ಎನ್‌ಫೋರ್ಸ್‌ಮೆಂಟ್ ವ್ಯಾನ್‌ಗಳನ್ನು ತಪಾಸಣೆಗಾಗಿ ನಿಯೋಜಿಸಲಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಸಾರಿಗೆ ಇಲಾಖೆ, ಮಹಾನಗರ ಪಾಲಿಕೆ ಮತ್ತು ಆಹಾರ ಇಲಾಖೆಯ ಸಿಬ್ಬಂದಿಯನ್ನು ಸಹ ತಪಾಸಣೆಗಾಗಿ ನಿಯೋಜಿಸಲಾಗಿದೆ. ದೆಹಲಿಯಲ್ಲಿ ಈಗಾಗಲೇ ಪೆಟ್ರೋಲ್ ಬಂಕ್​ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು ಮಾನ್ಯ ಪಿಯುಸಿ ಪ್ರಮಾಣಪತ್ರಗಳಿಲ್ಲದ ವಾಹನಗಳನ್ನು ಗುರುತಿಸುತ್ತದೆ.
ಈ ಕ್ರಮ ತೆಗೆದುಕೊಳ್ಳುವುದಾಗಿ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಮಂಗಳವಾರ (ಡಿ.16) ಘೋಷಣೆ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಗ್ರೇಡ್​ ರೆಸ್ಪಾನ್ಸ್​ ಆ್ಯಕ್ಷನ್​ ಪ್ಲಾನ್​ (GRAP) ಹಂತ IV ಜಾರಿಯಲ್ಲಿರುವವರೆಗೆ ಈ ಕ್ರಮಗಳು ಜಾರಿಯಲ್ಲಿರುತ್ತವೆ ಎಂದು ಸಿರ್ಸಾ ಅವರು ತಿಳಿಸಿದ್ದಾರೆ. ಚಳಿಗಾಲದಲ್ಲಿ ವಾಹನಗಳು PM 10 ಮಾಲಿನ್ಯದ ಶೇಕಡ 19.7 ಮತ್ತು PM 2.5 ಮಾಲಿನ್ಯದ ಶೇಕಡ 25.1 ರಷ್ಟಿಗೆ ಕಾರಣವಾಗಿವೆ ಎಂದು ಅಧ್ಯಯನಗಳು ತಿಳಿಸಿದ ಬಳಿಕ ದೆಹಲಿ ಸರ್ಕಾರ ಈ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಈಗಾಗಲೇ ಗುರುತು ಮಾಡಿರುವ 100 ಹಾಟ್‌ಸ್ಪಾಟ್‌ಗಳಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಮತ್ತು ಟ್ರಾಫಿಕ್​ ಲೈಟ್​ಗಳಲ್ಲಿ ಸಮಯ ಮತ್ತು ಮಾಲಿನ್ಯ ಕಡಿಮೆ ಮಾಡುವ ಸಮಗ್ರ ಸಂಚಾರ ವ್ಯವಸ್ಥೆಯನ್ನು ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಲೋಕಸಭೆಯಲ್ಲಿ ಇಂದು ನಿಯಮ 193 ರ ಅಡಿಯಲ್ಲಿ ಮಾಲಿನ್ಯದ ಕುರಿತು ಚರ್ಚೆ ನಡೆಯಲಿದೆ. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಈ ಚರ್ಚೆಗೆ ಒತ್ತಾಯಿಸುತ್ತಿವೆ. ವಿಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಚರ್ಚೆಗೆ ಪದೇಪದೆ ಒತ್ತಾಯಿಸುತ್ತಿದ್ದು, ಇಂದು ಚರ್ಚೆ ನಡೆಯಲಿದೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಅಥವಾ AQI ನವೆಂಬರ್‌ನಿಂದ ತುಂಬಾ ಕಳಪೆ ಮಟ್ಟದಲ್ಲಿದೆ. ಬುಧವಾರ ಸಂಜೆ 4 ಗಂಟೆಗೆ, ನಗರದ 24-ಗಂಟೆಗಳ ಸರಾಸರಿ AQI 334 ರಷ್ಟಿದ್ದು, ಮಂಗಳವಾರದ 354 ಕ್ಕಿಂತ ಸ್ವಲ್ಪ ಉತ್ತಮವಾಗಿದ್ದರೂ ಇದನ್ನು ತುಂಬಾ ಕಳಪೆ ವರ್ಗದಲ್ಲೇ ಇರಿಸಲಾಗಿದೆ. ಇನ್ನು ವಾಯು ಮಾಲಿನ್ಯ ಮಿತಿಮೀರಿರುವುದರಿಂದ ರಾಜಧಾನಿಯಲ್ಲಿ ಪ್ರಾಥಮಿಕ ಶಾಲೆಗಳ ದೈಹಿಕ ತರಗತಿಗಳನ್ನು ನಿಲ್ಲಿಸಲಾಗಿದ್ದು ಆನ್​ಲೈನ್​ನಲ್ಲಿ ತರಗತಿಗಳು ನಡೆಯುತ್ತಿವೆ. ಅಲ್ಲದೆ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿಗೆ ಆನ್‌ಲೈನ್ ಅಥವಾ ದೈಹಿಕ ತರಗತಿಗಳಲ್ಲಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕಚೇರಿಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ, (ಏಜೆನ್ಸೀಸ್​).