ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳ ಹರಿದ್ವಾರ
- ದೇವಭೂಮಿ ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳ ಹರಿದ್ವಾರ
- ಉತ್ತರಾಖಂಡ ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆ
- ಹರಿದ್ವಾರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಅನ್ಯಧರ್ವಿುಯರ ನಿರ್ಬಂಧ
ಡೆಹ್ರಾಡೂನ್: ದೇವಭೂಮಿ ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳ ಹರಿದ್ವಾರ ( Haridwar ) ದಲ್ಲಿ ಧಾರ್ವಿುಕ ಪಾವಿತ್ರ್ಯತೆವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ.
ಹರಿದ್ವಾರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಅನ್ಯಧರ್ವಿುಯರ (ಹಿಂದೂಯೇತರರ) ಪ್ರವೇಶವನ್ನು ನಿರ್ಬಂಧಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಅವರು, ಹರಿದ್ವಾರವು ಅತ್ಯಂತ ಪವಿತ್ರ ನಗರ. ಇದರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸ್ವರೂಪವನ್ನು ಉಳಿಸಿಕೊಳ್ಳುವುದು ನಮ್ಮ ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಹಳೆಯ ಕಾಯಿದೆಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕುಂಭಮೇಳ ಹಿನ್ನೆಲೆ: ಮುಂಬರುವ ಕುಂಭಮೇಳಕ್ಕೆ ಸಿದ್ಧತೆಗಳು ತೀವ್ರಗೊಳ್ಳುತ್ತಿವೆ. ಪ್ರಸ್ತುತ ಹರಿದ್ವಾರದ ಹರ್ ಕಿ ಪೌರಿ ಸೇರಿದಂತೆ ಪ್ರಮುಖ ಘಾಟ್ಗಳಲ್ಲಿ ಅನ್ಯಧರ್ವಿುಯರ ಪ್ರವೇಶಕ್ಕೆ ಈಗಾಗಲೇ ನಿರ್ಬಂಧವಿದೆ. ಇದನ್ನು ಹರಿದ್ವಾರದಿಂದ ಋಷಿಕೇಶದವರೆಗಿನ ಎಲ್ಲಾ 105 ಗಂಗಾ ಘಾಟ್ಗಳಿಗೂ ವಿಸ್ತರಿಸುವ ಬಗ್ಗೆ ಸಾಧು-ಸಂತರು ಮತ್ತು ಶ್ರೀ ಗಂಗಾ ಸಭಾ ಜೊತೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಐತಿಹಾಸಿಕ ಹಿನ್ನೆಲೆ: 1916ರಲ್ಲಿ ಭಾರತ ರತ್ನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಬ್ರಿಟಿಷ್ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಅನ್ವಯ, ಹರಿದ್ವಾರ ಮತ್ತು ಋಷಿಕೇಶದ ಧಾರ್ವಿುಕ ಘನತೆಯನ್ನು ಕಾಪಾಡಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದನ್ನು ನಂತರ ಪೌರಸಭೆಯ ಬೈಲಾಗಳಲ್ಲಿ ಅಳವಡಿಸಿಕೊಳ್ಳಲಾಗಿತ್ತು.
ಸಂತರಿಂದ ಸ್ವಾಗತ
ಸರ್ಕಾರದ ಈ ಕ್ರಮವನ್ನು ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಸಾನಂದ ಗಿರಿ ಅವರು ಸ್ವಾಗತಿಸಿದ್ದಾರೆ. ನಗರದ ಪಾವಿತ್ರ್ಯತೆಯನ್ನು ಕಾಪಾಡಲು ಇಂತಹ ನಿರ್ಧಾರ ಅಗತ್ಯ. ಹರಿದ್ವಾರಕ್ಕೆ ‘ಪವಿತ್ರ ನಗರ’ ಎಂಬ ಸ್ಥಾನಮಾನ ನೀಡಬೇಕು ಎಂಬುದು ನಮ್ಮ ಬಹುಕಾಲದ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ, (ಏಜೆನ್ಸೀಸ್).