ಚಾಲಕನಿಲ್ಲದೆ ರಸ್ತೆಗಿಳಿದು ಅಪಘಾತಕ್ಕೀಡಾದ ಎಲೆಕ್ಟ್ರಿಕ್ ಕಾರಿನ ವೈರಲ್ ವಿಡಿಯೋ ದೃಶ್ಯ 
ದೇಶ

ಚಾಲಕನೇ ಇಲ್ಲ... ರಸ್ತೆಗಿಳಿದ ಎಲೆಕ್ಟ್ರಿಕ್ ಕಾರು! ಹಣ್ಣಿನ ಗಾಡಿಗೆ, ಮರಕ್ಕೆ ಡಿಕ್ಕಿ; ವಿಡಿಯೋ ವೈರಲ್! Electric Car Accident

ಪಂಜಾಬ್​: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟೇ ಬೆಳೆದರೂ, ಕೆಲವೊಮ್ಮೆ ಅದರಿಂದ ಎದುರಾಗುವ ಅಚಾತುರ್ಯಗಳು ಜನರನ್ನು ಬೆಚ್ಚಿಬೀಳಿಸುತ್ತವೆ. ಪಂಜಾಬ್‌ನಲ್ಲಿ ನಡೆದ ಇಂತಹದ್ದೇ ಒಂದು ವಿಚಿತ್ರ ಘಟನೆ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್ ಸದ್ದು ಮಾಡುತ್ತಿದೆ. ತಾನಾಗಿಯೇ ಚಲಿಸಲು ಶುರುಮಾಡಿದ ಎಲೆಕ್ಟ್ರಿಕ್ ಕಾರೊಂದನ್ನು (Electric Car Accident) ನಿಲ್ಲಿಸಲು ಮಾಲೀಕರು ಮತ್ತು ಸಾರ್ವಜನಿಕರು ಪರದಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಸ್ತೆಯಲ್ಲಿ ನುಗ್ಗಿದ ಚಾಲಕನಿಲ್ಲದ ಕಾರು!

ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಒಳಗೆ ಯಾರೂ ಇಲ್ಲದಿದ್ದರೂ ಎಲೆಕ್ಟ್ರಿಕ್ ಕಾರೊಂದು ರಸ್ತೆಯಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ಮಾಲೀಕರು ಕಾರಿನಿಂದ ಹೊರಗಿದ್ದಾಗ ವಾಹನವು ತಾನಾಗಿಯೇ ಲಾಕ್ ಆಗಿತ್ತಂತೆ. ಆದರೆ ಕೆಲವೇ ಕ್ಷಣಗಳಲ್ಲಿ ಅದು ಯಾರ ನಿಯಂತ್ರಣಕ್ಕೂ ಸಿಗದೆ ತಾನಾಗಿಯೇ ಮುಂದಕ್ಕೆ ಚಲಿಸಲು ಶುರುಮಾಡಿದೆ.
ಗಾಬರಿಗೊಂಡ ಮಾಲೀಕರು ಕಾರಿನ ಹಿಂದೆ ಓಡಿ ಹೋಗಿ, ದಾರಿಯಲ್ಲಿ ಹೋಗುವ ಇತರ ವಾಹನ ಸವಾರರಿಗೆ ಹಾಗೂ ಜನರಿಗೆ ಎಚ್ಚರಿಕೆ ನೀಡಲು ಹರಸಾಹಸ ಪಟ್ಟಿದ್ದಾರೆ. ವಾಹನದ ವೇಗ ಹೆಚ್ಚುತ್ತಿದ್ದಂತೆ ದಾರಿಯಲ್ಲಿ ಹೋಗುತ್ತಿದ್ದ ಹಣ್ಣಿನ ವ್ಯಾಪಾರಿಯೊಬ್ಬರ ತಳ್ಳುಗಾಡಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ತಳ್ಳುಗಾಡಿಯಲ್ಲಿದ್ದ ಹಣ್ಣುಗಳೆಲ್ಲ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದರೆ, ತಳ್ಳುಗಾಡಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಆದರೂ ನಿಲ್ಲದ ಎಲೆಕ್ಟ್ರಿಕ್​ ಕಾರು, ಸ್ವಲ್ಪ ದೂರ ಮುಂದೆ ಸಾಗಿದ ಕೊನೆಗೆ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಮರಕ್ಕೆ ಡಿಕ್ಕಿ ಹೊಡೆದ ನಂತರವೂ ಕಾರಿನ ಚಕ್ರಗಳು ಸ್ವಲ್ಪ ಸಮಯದವರೆಗೆ ತಿರುಗುತ್ತಲೇ ಇದ್ದದ್ದು ವಿಷೇಶವಾಗಿತ್ತು.

ಇದರ ಹಿಂದಿನ ಅಸಲಿ ಕಾರಣವೇನು?

ಹಾಗಾದರೆ ಕಾರು ತಾನಾಗಿಯೇ ಓಡಲು ಕಾರಣವೇನು? ಎಂಬುದಕ್ಕೆ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ನಡೆದಿದೆ. ಕೆಲವರು ಇದು ತಾಂತ್ರಿಕ ದೋಷ ಅಥವಾ ಆಟೋ-ಪಾರ್ಕಿಂಗ್ ಸಮಸ್ಯೆಯಿರಬಹುದು ಎಂದಿದ್ದಾರೆ. ಆದರೆ ಬಹುತೇಕ ನೆಟ್ಟಿಗರು ಮಾಲೀಕರೇ ತಪ್ಪು ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಅವರು ಕಾರನ್ನು ಸರಿಯಾಗಿ ಪಾರ್ಕಿಂಗ್ ಮೋಡ್‌ಗೆ ಹಾಕದೆ ಕೆಳಗಿಳಿದಿರಬಹುದು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕಾರು ಡ್ರೈವ್ ಮೋಡ್‌ನಲ್ಲಿದ್ದಾಗ ಮತ್ತು ಸೀಟ್‌ಬೆಲ್ಟ್ ಹಾಕಿಕೊಂಡಿದ್ದಾಗ ಇವಿ ಕಾರುಗಳು ಹೀಗೆಯೇ ಮುಂದಕ್ಕೆ ಸಾಗುತ್ತವೆ. ತಂತ್ರಜ್ಞಾನದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಕಾರು ಚಲಾಯಿಸಿದರೆ ಹೀಗೇ ಆಗುತ್ತದೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸ್ಮಾರ್ಟ್ ಕಾರುಗಳನ್ನು ಮಾಡುವುದು ಒಳ್ಳೆಯದೇ, ಆದರೆ ತಂತ್ರಜ್ಞಾನದ ಅರಿವಿಲ್ಲದವರಿಗೆ ಇಂತಹ AI ಕಾರುಗಳನ್ನು ಮಾರಬಾರದು, ಹಾಗೂ ಮಾಹಿತಿ ಇಲ್ಲದವರು ಇದನ್ನು ಖರೀದಿಸಬಾರದೆಂದು ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).