VBSA Bill | ವಿಬಿಎಸ್‌ಎ ಮಸೂದೆ ವಿರುದ್ಧ ಜೈರಾಮ್ ರಮೇಶ್ ಕಿಡಿ  
ದೇಶ

ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರದ 'ಮಹಾ' ನಿಯಂತ್ರಣಕ್ಕೆ ಸ್ಕೆಚ್..? ವಿಬಿಎಸ್‌ಎ ಮಸೂದೆ ವಿರುದ್ಧ ಜೈರಾಮ್ ರಮೇಶ್ ಕಿಡಿ | VBSA Bill

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ (VBSA Bill) ಮಸೂದೆ 2025 ಈಗ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಉನ್ನತ ಶಿಕ್ಷಣದ ಸಂಪೂರ್ಣ ನಿಯಂತ್ರಣವನ್ನು ಕೇಂದ್ರವು ತನ್ನ ಕೈಗೆ ತೆಗೆದುಕೊಳ್ಳಲು ಹೊರಟಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಈ ಮಸೂದೆಯು ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ ಮೂಲಕ ಭಾರತದ ಫೆಡರಲ್ ರಚನೆಗೆ ಧಕ್ಕೆ ತರಲಿದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯಗಳೊಂದಿಗೆ ಸಮಾಲೋಚನೆಯೇ ಇಲ್ಲ

ಮಸೂದೆಯ ಕರಡು ರಚನೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಯಾವುದೇ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿಲ್ಲ ಎಂದಿರುವ ರಮೇಶ್, ಇದು ಕೇವಲ ಮಸೂದೆಯಲ್ಲ, ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಹತ್ತಿಕ್ಕುವ ಮತ್ತು ಕೇಂದ್ರೀಕರಣಗೊಳಿಸುವ ಹುನ್ನಾರ. ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಂತಹ ಪ್ರಮುಖ ಸಂಸ್ಥೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವಾಗ, ನಿಯಂತ್ರಕ ಚೌಕಟ್ಟನ್ನು ಬದಲಿಸಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನ ಅಧಿಕಾರ ವ್ಯಾಪ್ತಿ ಮೀರುತ್ತಿದೆಯೇ ಕೇಂದ್ರ?

ಸಂವಿಧಾನದ ಕೇಂದ್ರ ಪಟ್ಟಿಯ ನಮೂದು 66ರ ಅಡಿಯಲ್ಲಿ ಸಂಸತ್ತಿಗೆ ಇರುವ ಅಧಿಕಾರವನ್ನು ಈ ಮಸೂದೆ ಮೀರಿದೆ ಎಂದು ಮಾಜಿ ಕೇಂದ್ರ ಸಚಿವರು ಪ್ರತಿಪಾದಿಸಿದರು. ಕೇಂದ್ರದ ಕೆಲಸ ಶಿಕ್ಷಣದಲ್ಲಿ ಸಮನ್ವಯ ಮತ್ತು ಮಾನದಂಡಗಳನ್ನು ನಿರ್ಧರಿಸುವುದಷ್ಟೇ. ಆದರೆ ಈ ಮಸೂದೆಯು ರಾಜ್ಯಗಳ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯಗಳ ಸಂಯೋಜನೆ ಮತ್ತು ನಿಯಂತ್ರಣದಂತಹ ಕ್ಷೇತ್ರಗಳಲ್ಲೂ ಮೂಗು ತೂರಿಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವಾಲಯದ ಕೈಗೆ ಅನುದಾನದ ಪವರ್?

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ನಾಲ್ಕು ಪ್ರತ್ಯೇಕ ಮಂಡಳಿಗಳನ್ನು ಶಿಫಾರಸು ಮಾಡಿದ್ದರೂ, ಪ್ರಸ್ತುತ ಮಸೂದೆಯಲ್ಲಿ ಕೇವಲ ಮೂರು ಮಂಡಳಿಗಳನ್ನು ಮಾತ್ರ ಒದಗಿಸಲಾಗಿದೆ. ಪ್ರತ್ಯೇಕ ಹಣಕಾಸು ಮಂಡಳಿ ಇಲ್ಲದಿರುವುದರಿಂದ, ಅನುದಾನ ನೀಡುವ ಸಂಪೂರ್ಣ ಅಧಿಕಾರವು ಸ್ವತಂತ್ರ ಸಂಸ್ಥೆಗಳಿಂದ ನೇರವಾಗಿ ಶಿಕ್ಷಣ ಸಚಿವಾಲಯದ ಕೈಗೆ ವರ್ಗಾವಣೆಯಾಗಲಿದೆ. ಇದು ಶಿಕ್ಷಣ ಸಂಸ್ಥೆಗಳು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಬಹುದು ಎಂಬುದು ಕಾಂಗ್ರೆಸ್ ನಾಯಕರ ವಾದ.

ಶಿಕ್ಷಣ ತಜ್ಞರ ಬದಲು ಅಧಿಕಾರಿಗಳ ದರ್ಬಾರ್

ಪ್ರಸ್ತುತ ಯುಜಿಸಿ ಮತ್ತು ಎಐಸಿಟಿಇಯಂತಹ ಸಂಸ್ಥೆಗಳನ್ನು ಹಿರಿಯ ಶಿಕ್ಷಣ ತಜ್ಞರು ಮುನ್ನಡೆಸುತ್ತಿದ್ದಾರೆ. ಆದರೆ ಪ್ರಸ್ತಾವಿತ ಮಸೂದೆಯು ಕಾರ್ಯಕಾರಿ ಅಧಿಕಾರಗಳನ್ನು ಸದಸ್ಯ ಕಾರ್ಯದರ್ಶಿಗಳಂತಹ ನೇಮಕಗೊಂಡ ಅಧಿಕಾರಿಗಳಿಗೆ ನೀಡಲಿದೆ. ಇದರಿಂದ ಶೈಕ್ಷಣಿಕ ನಿರ್ಧಾರಗಳಲ್ಲಿ ಅಧಿಕಾರಿಶಾಹಿ ಹಸ್ತಕ್ಷೇಪ ಹೆಚ್ಚಾಗಲಿದೆ ಎಂದು ಜೈರಾಮ್​ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಐಐಟಿ, ಐಐಎಂ ಸ್ವಾಯತ್ತತೆಗೆ ಕತ್ತರಿ?

ದೇಶದ ಹೆಮ್ಮೆಯ ಐಐಟಿಗಳು, ಐಐಎಂಗಳು ಮತ್ತು ಎನ್ಐಟಿಗಳಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ಮೇಲೆ ಈ ಮಸೂದೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಶೈಕ್ಷಣಿಕ ವಿಷಯಗಳಲ್ಲಿ ಇವುಗಳಿಗೆ ಇರುವ ಸ್ವಾಯತ್ತತೆಯನ್ನು ಮಸೂದೆಯ ಕೆಲವು ಕಠಿಣ ಷರತ್ತುಗಳು ದುರ್ಬಲಗೊಳಿಸಬಹುದು ಎಂದು ಎಚ್ಚರಿಸಿದ್ದಾರೆ. ಹೊಸ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಮಂಡಳಿಯಿಂದ ಅನುಮೋದನೆ ಪಡೆಯಬೇಕೆಂಬ ಕಡ್ಡಾಯ ನಿಯಮವು ಉನ್ನತ ಶಿಕ್ಷಣದ ವಿಸ್ತರಣೆಗೆ ಅಡ್ಡಿಯಾಗಬಹುದು ಎಂದಿದ್ದಾರೆ(ಏಜೆನ್ಸೀಸ್​).