Anil Kumble | ಅನಿಲ್ ಕುಂಬ್ಳೆ 
ದೇಶ

ಆ ತಪ್ಪು ನಿರ್ಧಾರದಿಂದ ಚಾಂಪಿಯನ್ ಪಟ್ಟ ಕಳೆದುಕೊಂಡಿತು; ಕೆಕೆಆರ್​ನ ಅತಿ ಬುದ್ಧಿವಂತಿಕೆಗೆ ಅನಿಲ್ ಕುಂಬ್ಳೆ ಟೀಕೆ | Anil Kumble

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಟ್ರೋಫಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ತನ್ನ ಆಟಗಾರರನ್ನು ಉಳಿಸಿಕೊಳ್ಳುವ ವಿಷಯದಲ್ಲಿ ದೊಡ್ಡ ತಪ್ಪು ಮಾಡಿದೆ ಎಂದು ಭಾರತದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅಭಿಪ್ರಾಯಪಟ್ಟಿದ್ದಾರೆ.
2024ರಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ಕೆಕೆಆರ್, 2025ರ ಮೆಗಾ ಹರಾಜಿಗೆ ಮುನ್ನ ಕೈಗೊಂಡ ನಿರ್ಧಾರಗಳು ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎನ್ನುವುದು ಕುಂಬ್ಳೆ ವಾದ.

ಗೆಲುವಿನ ರೂವಾರಿಗಳನ್ನೇ ಕೈಬಿಟ್ಟ ಕೆಕೆಆರ್

2024ರಲ್ಲಿ ಕೆಕೆಆರ್ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಪಾತ್ರ ನಿರ್ಣಾಯಕವಾಗಿತ್ತು. ಶ್ರೇಯಸ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರೆ, ಸಾಲ್ಟ್ 12 ಪಂದ್ಯಗಳಲ್ಲಿ 182.01ರ ಸ್ಟ್ರೈಕ್ ರೇಟ್‌ನಲ್ಲಿ 435 ರನ್ ಸಿಡಿಸಿ ಅಬ್ಬರಿಸಿದ್ದರು. ಆದರೆ, ಮೆಗಾ ಹರಾಜಿಗೂ ಮುನ್ನ ಈ ಇಬ್ಬರೂ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದ್ದು ತಂಡಕ್ಕೆ ಭಾರಿ ಹೊಡೆತ ನೀಡಿತು.
ಇದರ ಫಲವಾಗಿ 2025ರ ಋತುವಿನಲ್ಲಿ ಕೆಕೆಆರ್ ಕೇವಲ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್‌ಗೆ ತೆರಳಿ ಆ ತಂಡವನ್ನು ಫೈನಲ್‌ಗೆ ಕೊಂಡೊಯ್ದರೆ, ಫಿಲ್ ಸಾಲ್ಟ್ ಆರ್ ಸಿಬಿಗೆ ಮೊದಲ ಟ್ರೋಫಿ ಗೆದ್ದುಕೊಡುವಲ್ಲಿ ನೆರವಾದರು.

ನಾಯಕನಾಗಿ ಅಜಿಂಕ್ಯ ರಹಾನೆ

ರಹಾನೆ ದೇಶೀಯ ಕ್ರಿಕೆಟ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದರೂ, ನಾಯಕನಾಗಿ ಐಪಿಎಲ್ ಟ್ರೋಫಿ ಗೆದ್ದ ಇತಿಹಾಸ ಅವರಿಗಿಲ್ಲ. ಐಪಿಎಲ್ ಗೆದ್ದ ನಾಯಕನನ್ನು ತಂಡದಲ್ಲಿ ಹೊಂದುವುದು ಒಂದು ದೊಡ್ಡ ಅಡ್ವಾಂಟೇಜ್. ಆದರೆ ಕೆಕೆಆರ್ ಆ ಪ್ರಯೋಜನವನ್ನು ಕಳೆದುಕೊಂಡಿದೆ ಎಂದು ಕುಂಬ್ಳೆ ಹೇಳಿದ್ದಾರೆ. ತನ್ನ ಪ್ರಮುಖ ಆಟಗಾರರನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಕಲೆ ಕೆಕೆಆರ್ ಮ್ಯಾನೇಜ್‌ಮೆಂಟ್‌ಗೆ ಗೊತ್ತಿಲ್ಲ ಎಂದು ಕನ್ನಡಿಗ ಕುಟುಕಿದ್ದಾರೆ.

2026ರ ಸಮರಕ್ಕೆ ಮುಹೂರ್ತ ಫಿಕ್ಸ್

ಮತ್ತೊಂದೆಡೆ, ಐಪಿಎಲ್ 2026ರ ವೇಳಾಪಟ್ಟಿ ಪ್ರಕಟಗೊಂಡಿದ್ದು, ಕೆಕೆಆರ್ ತನ್ನ ಅಭಿಯಾನವನ್ನು ಮಾರ್ಚ್ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಏಪ್ರಿಲ್ ತಿಂಗಳಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಸತತ ಮೂರು ಪಂದ್ಯಗಳು ನಡೆಯಲಿದ್ದು, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಕೆಕೆಆರ್ ಎದುರಿಸಲಿದೆ(ಏಜೆನ್ಸೀಸ್​).