Trinamool Congress | ಅಭಿಷೇಕ್ ಬ್ಯಾನರ್ಜಿಗೆ ಬಂದ ಇ-ಮೇಲ್ ಟೈಮಿಂಗ್ ವಿರುದ್ಧ ಟಿಎಂಸಿ ಆಕ್ರೋಶ 
ದೇಶ

ಉತ್ತರಿಸಲು ಅವಕಾಶವೇ ಸಿಗಲಿಲ್ಲ!...ಅಭಿಷೇಕ್ ಬ್ಯಾನರ್ಜಿಗೆ ಬಂದ ಇ-ಮೇಲ್ ಟೈಮಿಂಗ್ ವಿರುದ್ಧ ಟಿಎಂಸಿ ಆಕ್ರೋಶ | Abhishek Banerjee

ಕೋಲ್ಕತ್ತಾ: ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ, ಸಂಸದ ಅಭಿಷೇಕ್ ಬ್ಯಾನರ್ಜಿಗೆ (Abhishek Banerjee) ಲೋಕಸಭಾ ಸಚಿವಾಲಯ ಕಳುಹಿಸಿರುವ ಇ-ಮೇಲ್‌ನ ಸಮಯವನ್ನು ಟಿಎಂಸಿ ತೀವ್ರವಾಗಿ ಪ್ರಶ್ನಿಸಿದೆ. ಸಹಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದ ಸಮಯದಲ್ಲೇ ಈ ಇ-ಮೇಲ್ ಬಂದಿದ್ದು, ಅದಕ್ಕೆ ಪ್ರತಿಕ್ರಿಯಿಸಲು ಅವರಿಗೆ ಕನಿಷ್ಠ ಸಮಯವನ್ನೂ ನೀಡಿಲ್ಲ ಎಂದು ಪಕ್ಷ ಆಕ್ಷೇಪಿಸಿದೆ.
ಸೋಮವಾರ ಬೆಳಗ್ಗೆಯೇ ಈ ಇ-ಮೇಲ್ ಅಭಿಷೇಕ್ ಬ್ಯಾನರ್ಜಿ ಅವರ ಇನ್‌ಬಾಕ್ಸ್ ತಲುಪಿತ್ತು. ಪಕ್ಷವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿರುವ 19 ಬಂಡಾಯ ನಾಯಕರ ಅರ್ಜಿಗೆ ಉತ್ತರಿಸಲು ಅದೇ ದಿನ ಸಂಜೆ 4 ಗಂಟೆಯವರೆಗೆ ಮಾತ್ರ ಅವರಿಗೆ ಗಡುವು ನೀಡಲಾಗಿತ್ತು. ಆದರೆ, ಟಿಎಂಸಿ ನಾಯಕ ಕೀರ್ತಿ ಆಜಾದ್ ಅವರು ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಗೆ ಬರೆದಿರುವ ಪತ್ರದ ಪ್ರಕಾರ, ಅಭಿಷೇಕ್ ಬ್ಯಾನರ್ಜಿ ಅವರು ಸೋಮವಾರ ತಡರಾತ್ರಿ 11 ಗಂಟೆಯವರೆಗೆ ಕೋಲ್ಕತ್ತಾದ ಇಡಿ ಕಚೇರಿಯಲ್ಲೇ ವಿಚಾರಣೆಯಲ್ಲಿದ್ದರಿಂದ ಅವರಿಗೆ ತಮ್ಮ ಇ-ಮೇಲ್ ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇಡಿ ವಿಚಾರಣೆ ಮುಗಿದು ಹೊರಬಂದ ನಂತರವೇ ಅವರಿಗೆ ಈ ಇ-ಮೇಲ್ ಬಂದಿರುವ ವಿಷಯವನ್ನು ತಿಳಿಸಲಾಗುವುದು ಎಂದು ಪಕ್ಷ ಸ್ಪಷ್ಟಪಡಿಸಿದೆ.
ಮೂಲಗಳ ಪ್ರಕಾರ, ಬಂಡಾಯ ಸಂಸದರು ಪಶ್ಚಿಮ ಬಂಗಾಳ ಮೂಲದ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಎಂಬ ಅಷ್ಟಾಗಿ ಪರಿಚಿತವಲ್ಲದ ಪಕ್ಷದೊಂದಿಗೆ ವಿಲೀನಗೊಳ್ಳಲು ಸಲ್ಲಿಸಿದ್ದ ಅರ್ಜಿಯನ್ನು ಸಚಿವಾಲಯ ಪರಿಶೀಲಿಸಿದ ಬೆನ್ನಲ್ಲೇ ಈ ಇ-ಮೇಲ್ ಕಳುಹಿಸಲಾಗಿದೆ. ಈ ವಿಲೀನ ಪ್ರಕ್ರಿಯೆಯು ಮುಂದಿನ ಒಂದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೀನಾಯ ಸೋಲು ಕಂಡಾಗಿನಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಬಣ ರಾಜಕೀಯ ಮತ್ತು ಭಿನ್ನಾಭಿಪ್ರಾಯಗಳು ತಲೆದೂರಿವೆ.
ಕಳೆದ ವಾರ, ಕಾಕೋಲಿ ಘೋಷ್ ದಸ್ತಿದಾರ್, ಶತಬ್ದಿ ರಾಯ್ ಮತ್ತು ಸಾಯೋನಿ ಘೋಷ್ ಸೇರಿದಂತೆ ಪಕ್ಷದ 28 ಲೋಕಸಭಾ ಸಂಸದರ ಪೈಕಿ 19 ಸಂಸದರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಾವು ಟಿಎಂಸಿಯಿಂದ ದೂರ ಸರಿದು ಬಿಜೆಪಿ ನೇತೃತ್ವದ ಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳುವುದಾಗಿ ತಿಳಿಸಿದ್ದರು. ಪಕ್ಷಾಂತರ ನಿಷೇದ ಕಾಯ್ದೆಯಿಂದ ಬಚಾವಾಗಲು ಬೇಕಾದ ಮೂರನೇ ಎರಡರಷ್ಟು (2/3) ಸಂಸದರ ಸಂಖ್ಯೆಗಿಂತ ಈ ಬಂಡಾಯ ಸಂಸದರ ಸಂಖ್ಯೆ ಹೆಚ್ಚಿರುವುದು ಇಲ್ಲಿ ಗಮನಾರ್ಹವಾಗಿದೆ.
ಇತ್ತ, ಇಡಿ ವಿಚಾರಣೆ ಮುಗಿಸಿ ಹೊರಬಂದ ಅಭಿಷೇಕ್ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮತ್ತೆ ಸಮನ್ಸ್ ನೀಡಿದರೆ ನಾನು ಖಂಡಿತ ಬರುತ್ತೇನೆ, ಆದರೆ ನಮ್ಮ ಗಂಟಲು ಸೀಳಿದರೂ ನಾವು ಶರಣಾಗುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

ಟಿಎಂಸಿಯಲ್ಲಿ ಬಂಡಾಯ!..

ಪಕ್ಷ ಮತ್ತು ರಾಜ್ಯದ ತಳಮಟ್ಟದ ಪರಿಸ್ಥಿತಿಯೊಂದಿಗೆ ಮಮತಾ ಬ್ಯಾನರ್ಜಿ ಅವರಿಗೆ ಈಗ ಯಾವುದೇ ಸಂಪರ್ಕ ಉಳಿದಿಲ್ಲ ಹಾಗೂ ಅವರು ಎರಡೂ ಕಡೆ ಭ್ರಷ್ಟಾಚಾರ ಬೆಳೆಯಲು ಬಿಟ್ಟಿದ್ದಾರೆ ಎನ್ನುವುದು ಬಂಡಾಯ ನಾಯಕರ ಮುಖ್ಯ ಆರೋಪವಾಗಿದೆ. 2009ರಿಂದಲೂ ದೀದಿ ಜೊತೆಗಿದ್ದ ನಾಲ್ಕು ಬಾರಿಯ ಸಂಸದೆ ಶತಬ್ದಿ ರಾಯ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಗ ಮೊದಲಿನಂತಿಲ್ಲ, ತುಂಬಾ ಬದಲಾಗಿದ್ದಾರೆ. ಹೀಗಾಗಿ ನಾವು ಬಿಜೆಪಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್​).