ಪ್ರಧಾನಿ ಮೋದಿಗೆ ನಿಂದನೆ ಪ್ರಕರಣ
- ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ
- ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಭ್ಯ ಪದಗಳಿಂದ ಬಾಲಕಿ ನಿಂದನೆ
- ಅಪ್ರಾಪ್ತೆಯ ವಿರುದ್ಧ ಯಾವುದೇ ದೂರು ದಾಖಲಿಸದಿರಲು ದೆಹಲಿ ಪೊಲೀಸ್ ನಿರ್ಧಾರ
ನವದೆಹಲಿ: ಇತ್ತೀಚೆಗಷ್ಟೇ, ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ವೇಳೆ ಪ್ರಧಾನಿಯನ್ನು ನಿಂದಿಸಿದ ಅಪ್ರಾಪ್ತೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಿರಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಾಲಕಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಭ್ಯ ಪದಗಳಿಂದ ನಿಂದಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರತೀಯರ ಆಕ್ರೋಶ, ಛೀಮಾರಿಗೆ ಕಾರಣವಾಗಿತ್ತು. ತನ್ನ ತಪ್ಪಿನ ಅರಿವಾದ ಕೂಡಲೇ ವಿಡಿಯೋ ಮೂಲಕ ಬಹಿರಂಗವಾಗಿ ಬಾಲಕಿ ಕ್ಷಮೆ ಕೋರಿದ ಬೆನ್ನಲ್ಲೇ ಆಕೆಯ ತಾಯಿ ಕೂಡ ಪ್ರಧಾನಿಗೆ ಕ್ಷಮೆಯಾಚಿಸಿದ್ದರು.
ಅಪ್ರಾಪ್ತೆಯ ಕ್ಷಮಾಪಣೆ ಏನು?
ಆರಂಭದಲ್ಲಿ ನೋಯ್ಡಾ ಪೊಲೀಸರು ಈ ಬಾಲಕಿಯನ್ನು 25 ವರ್ಷದ ಯುವತಿ ಎಂದು ಗುರುತಿಸಿ 'ಝೀರೋ ಎಫ್‌ಐಆರ್' (Zero FIR) ದಾಖಲಿಸಿದ್ದರು. ಆದರೆ, ನಂತರ ಕ್ಷಮಾಪಣೆಯ ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ ಬಾಲಕಿ, ತನಗೆ ಇನ್ನೂ 15 ವರ್ಷ ವಯಸ್ಸಾಗಿದ್ದು, ಇತರರ ಪ್ರಚೋದನೆಗೆ ಒಳಗಾಗಿ ಈ ರೀತಿ ಮಾತನಾಡಿರುವುದಾಗಿ ಸ್ಪಷ್ಟನೆ ನೀಡಿದಳು. "ನನಗೆ ಕೇವಲ 15 ವರ್ಷ ವಯಸ್ಸು. ನನ್ನಿಂದ ಆಗಿರುವ ತಪ್ಪಿಗೆ ನಾನು ಕ್ಷಮೆಗೂ ಅರ್ಹವಲ್ಲ. ಇದೇ ನನ್ನ ಮೊದಲ ಹಾಗೂ ಕೊನೆಯ ತಪ್ಪೆಂದು ಇಡೀ ದೇಶದ ಮುಂದೆ ಕೇಳಿಕೊಳ್ಳುತ್ತೇನೆ" ಎಂದು ಭಾವುಕಳಾಗಿ ಮನವಿ ಮಾಡಿಕೊಂಡಿದ್ದಳು.
ತಪ್ಪುದಾರಿ ತುಳಿದ ಮಕ್ಕಳನ್ನು ಕ್ಷಮಿಸುವೆ
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಗೆ ಕ್ಷಮೆ ನೀಡುವಂತೆ ಮನವಿಗಳು ಹರಿದುಬಂದ ಬೆನ್ನಲ್ಲೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ರೀಲ್ಸ್ ಮೂಲಕ ಪ್ರತಿಕ್ರಿಯಿಸಿದರು. ಆಕೆಯನ್ನು ಕೋರ್ಟ್‌ಗೆ ಎಳೆಯುವುದು ಅಥವಾ ಶಿಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ. ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದವರನ್ನು ಕ್ಷಮಿಸುವೆ. ನಮ್ಮ ಕೆಲಸ ಅವರನ್ನು ತಿದ್ದುವುದಷ್ಟೇ ಎಂದು ಹೇಳಿದರು,(ಏಜೆನ್ಸೀಸ್).