Chatra Air Ambulance Crash | ಛಾತ್ರಾ ಜಿಲ್ಲೆಯಲ್ಲಿ ನಡೆದ ಭೀಕರ ವಿಮಾನ ದುರಂತ 
ದೇಶ

ನಿಯಮಗಳ ಗಾಳಿಗೆ ತೂರಿ ಹಾರಾಟ ನಡೆಸಿತ್ತೇ ಏರ್ ಆಂಬ್ಯುಲೆನ್ಸ್?: ಛಾತ್ರಾ ದುರಂತದ ಸುತ್ತ ಅನುಮಾನದ ಹುತ್ತ! | Chatra Air Ambulance Crash

ರಾಂಚಿ: ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ನಡೆದ ಭೀಕರ ದುರಂತದಲ್ಲಿ ( Chatra Air Ambulance Crash) ಏಳು ಜನರನ್ನು ಬಲಿತೆಗೆದುಕೊಂಡ ಏರ್ ಆಂಬ್ಯುಲೆನ್ಸ್ ಅಪಘಾತದ ಸುತ್ತಲಿನ ನಿಗೂಢತೆ ಇನ್ನಷ್ಟು ಆಳವಾಗುವ ಸಾಧ್ಯತೆ ಇದ್ದು, ವಿಮಾನದಲ್ಲಿನ ಬ್ಲ್ಯಾಕ್​ ಬಾಕ್ಸ್ ಇರಲಿಲ್ಲ ಎಂದು ಆರಂಭಿಕ ತನಿಖೆಯಲ್ಲಿ ಕಂಡುಬಂದಿದೆ.
ರೆಡ್‌ಬರ್ಡ್‌ನ ಬೀಚ್‌ಕ್ರಾಫ್ಟ್ C90 (VT-AJV), ಅವಳಿ-ಟರ್ಬೊಪ್ರೊಪ್ ವಿಮಾನವನ್ನು ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಈ ವಿಮಾನವು ಗರಿಷ್ಠ ಟೇಕ್-ಆಫ್ ತೂಕ 4,583 ಕೆಜಿ ಹೊಂದಿದ್ದು, 1987 ರಲ್ಲಿ ತಯಾರಿಸಲಾಗಿದೆ.

ತನಿಖೆಗೆ ಹಿನ್ನಡೆ

ಯಾವುದೇ ವಿಮಾನ ಅಪಘಾತ ಸಂಭವಿಸಿದಾಗ, ಪೈಲಟ್‌ಗಳ ಸಂಭಾಷಣೆ ಮತ್ತು ವಿಮಾನದ ತಾಂತ್ರಿಕ ಸ್ಥಿತಿಗತಿಗಳನ್ನು ತಿಳಿಯಲು ಬ್ಲ್ಯಾಕ್ ಬಾಕ್ಸ್ ಅತ್ಯಂತ ಪ್ರಮುಖ ಪುರಾವೆಯಾಗಿರುತ್ತದೆ. ಸಣ್ಣ ಗಾತ್ರದ ವಿಮಾನಗಳು ಅಥವಾ ಹಳೆಯ ಮಾದರಿಯ ಚಾರ್ಟರ್ಡ್ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅಳವಡಿಕೆ ಕಡ್ಡಾಯವೇ ಎಂಬ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆ ನಡೆಸುತ್ತಿದೆ.
ಬ್ಲ್ಯಾಕ್ ಬಾಕ್ಸ್ ಇಲ್ಲದ ಕಾರಣದಿಂದಲೇ ವಿಮಾನವು ಪತನಗೊಳ್ಳುವ ಕೊನೆಯ ಕ್ಷಣಗಳಲ್ಲಿ ಪೈಲಟ್ ಎದುರಿಸಿದ ಸಮಸ್ಯೆಗಳೇನು ಎಂಬುದು ತಿಳಿಯುವುದು ಕಷ್ಟವಾಗಿದೆ ಎನ್ನಲಾಗಿದ್ದು, ವಿಮಾನವು ರೇಡಾರ್‌ನಿಂದ ಕಣ್ಮರೆಯಾಗುವ ಮೊದಲು ಯಾವುದೇ ತುರ್ತು ಸಂದೇಶವನ್ನು ಕಳುಹಿಸಿರಲಿಲ್ಲ ಎನ್ನುವುದು ಮೂಲಗಳ ಮಾಹಿತಿ.
ಫೆಬ್ರವರಿ 23 ರಂದು ಸಂಜೆ 7:11 ರ ಸುಮಾರಿಗೆ ರಾಂಚಿಯಿಂದ ದೆಹಲಿಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸುಮಾರು 23 ನಿಮಿಷಗಳ ಬಳಿಕ ಹವಾಮಾನ ಬದಲಾವಣೆ ಕಾರಣದಿಂದ ಸಂವಹನ ಮತ್ತು ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು ಎನ್ನಲಾಗಿದೆ.
ಯಾವುದೇ ಬ್ಲ್ಯಾಕ್ಸ್​ ದತ್ತಾಂಶ ಲಭ್ಯವಿಲ್ಲದ ಕಾರಣ, ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಿಮಾನದ ಅಂತಿಮ ಕ್ಷಣಗಳನ್ನು ಪುನರ್ನಿರ್ಮಿಸಲು ವಾಯು ಸಂಚಾರ ನಿಯಂತ್ರಣದೊಂದಿಗಿನ ಕೊನೆಯ ಸಂವಹನ ಮತ್ತು ಅಪಘಾತದ ಸ್ಥಳದಿಂದ ವಶಪಡಿಸಿಕೊಂಡ ವಸ್ತು ಸಾಕ್ಷ್ಯಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ.

ಏನಿದು ದುರಂತ?

ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ರಾಂಚಿಯಿಂದ ದೆಹಲಿಗೆ ಕರೆದೊಯ್ಯುತ್ತಿದ್ದ ಈ ಏರ್ ಆಂಬ್ಯುಲೆನ್ಸ್, ಛಾತ್ರಾ ಜಿಲ್ಲೆಯ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಹವಾಮಾನ ವೈಪರೀತ್ಯಕ್ಕೆ ಸಿಲುಕಿತ್ತು ಎನ್ನಲಾಗಿದೆ. ವಿಮಾನದಲ್ಲಿದ್ದ ರೋಗಿ, ಕಟುಂಬಸ್ಥರು, ವೈದ್ಯಕೀಯ ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಮಾನವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯಲಾಗದ ಸ್ಥಿತಿಯಲ್ಲಿದೆ.