Nitish Cabinet | ಬಿಹಾರ ಸಿಎಂ ನಿತೀಶ್ ಕುಮಾರ್
ಪಟನಾ: ಇಡೀ ದೇಶದ ಗಮನ ಈಗ ಬಿಹಾರ ನೂತನ ಸರ್ಕಾರದ ಸಚಿವ ಸಂಪುಟದ ಮೇಲೆ ನೆಟ್ಟಿದ್ದು, ನಿತೀಶ್ ಕುಮಾರ್ ನಾಳೆ (ಗುರುವಾರ ನವೆಂಬರ್ 20) ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಜೊತೆಗೆ 36 ಸಚಿವರು ಹೊಸ ಸಂಪುಟ ಸೇರುವ ಸಾಧ್ಯತೆ ಇದೆ.
ನೂತನ ಸರ್ಕಾರದಲ್ಲಿ ಕಳೆದ ಬಾರಿಯಂತೆ ಈ ಸಲವು ಇಬ್ಬರು ಉಪಮುಖ್ಯಮಂತ್ರಿಗಳು ಅಧಿಕಾರವಹಿಸಿಕೊಳ್ಳುವ ನಿರೀಕ್ಷೆ ಇದ್ದು, ಒಂದು ದೊಡ್ಡ ಪಕ್ಷವಾಗಿರುವ ಬಿಜೆಪಿಗೆ, ಮತ್ತೊಂದು ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ದಕ್ಕಬಹುದು ಎಂಬ ಚರ್ಚೆಗಳು ನಡೆದಿವೆ.
ನೂತನ ಸಚಿವ ಸಂಪುಟ ರಚನೆ ನಿತೀಶ್ ಕುಮಾರ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿದ್ದು, ಇದು ಕೇವಲ ಸರ್ಕಾರ ರಚನೆಗಿಂತ ಹೆಚ್ಚಿನ ಜವಾಬ್ದಾರಿಯಾಗಿದೆ. ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸುವುದು ಮತ್ತು ಭವಿಷ್ಯದ ರಾಜಕೀಯ ಯೋಜನೆಗಳನ್ನು ಸಹ ರೂಪಿಸಬೇಕಿದೆ. ಈಗ ಇಲ್ಲಿ ಇಡುವ ಪ್ರತಿಯೊಂದು ಹೆಜ್ಜೆಗಳು ಬಿಹಾರ ಮತ್ತು ಅದರಾಚೆಗೆ ಸಂದೇಶವನ್ನು ನೀಡಲಿದ್ದು, ನಿತೀಶ್ ಮತ್ತು ಎನ್‌ಡಿಎ ನಾಯಕರುಗಳು ಸಂಪುಟ ರಚನೆಗೆ ಈ ಐದು ಅಂಶಗಳನ್ನು ಪರಿಗಣಿಸುವ ಸಾಧ್ಯತೆಗಳಿವೆ.
ಜಾತಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ
ಬಿಹಾರದಂತಹ ರಾಜ್ಯದಲ್ಲಿ ಜಾತಿ ಎನ್ನುವದು ಇನ್ನು ಪ್ರಮುಖ ಅಂಶವೇ ಆಗಿದೆ, ಸಾಮಾಜಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದರೆ ಜಾತಿ ಜನಸಂಖ್ಯಾಶಾಸ್ತ್ರವನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು. ಪ್ರತಿ ಜಾತಿ ತನ್ನ ಜನಸಂಖ್ಯೆಗೆ ಅನುಗುಣವಾಗಿ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕಾಗುತ್ತದೆ.
ಈ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ನೂತನ ಸಚಿವ ಸಂಪುಟದಲ್ಲಿ ಶೇ.11% ಮೇಲ್ಜಾತಿಗಳು, ಶೇ.14% ಯಾದವರು, ಶೇ.11% ಯಾದವೇತರ ಒಬಿಸಿಗಳು, ಶೇ.25% ಇಬಿಸಿಗಳು (ಅತ್ಯಂತ ಹಿಂದುಳಿದ ವರ್ಗಗಳು), ಶೇ.20% ದಲಿತರು, ಶೇ.1% ಬುಡಕಟ್ಟು ಜನಾಂಗದವರು ಮತ್ತು ಶೇ.18% ಮುಸ್ಲಿಮರು ಇರಬೇಕು. ಎನ್‌ಡಿಎಯಲ್ಲಿ ಕೇವಲ ಒಬ್ಬ ಮುಸ್ಲಿಂ ಶಾಸಕ ಮಾತ್ರ ಇದ್ದಾರೆ.
ಜಾತಿವಾರು ಶಾಸಕರ ಸಮತೋಲನ
ಸಂಪುಟದಕ್ಕೆ ಜನಸಂಖ್ಯೆ ಮಾತ್ರವಲ್ಲದೇ, ಎನ್‌ಡಿಎ ಟಿಕೆಟ್‌ಗಳಲ್ಲಿ ಆಯ್ಕೆಯಾಗಿರುವ ಶಾಸಕರ ಜಾತಿವಾರು ಸಂಖ್ಯೆಯೂ ಸಚಿವ ಸ್ಥಾನಗಳ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಪ್ರತಿ ಜಾತಿಯಿಂದ ಎಷ್ಟು ಶಾಸಕರು ಗೆದ್ದಿದ್ದಾರೆ ಎಂಬುದರ ಆಧಾರದ ಮೇಲೆ ಮಂತ್ರಿ ಸ್ಥಾನಗಳ ಹಂಚಿಕೆ ನಡೆಯಬೇಕಾಗುತ್ತದೆ. ಈ ಕ್ರಮದಿಂದ ಎಲ್ಲಾ ಸಮುದಾಯಕ್ಕೂ ನ್ಯಾಯ ನೀಡಿದಂತಾಗುತ್ತದೆ.
ಎನ್‌ಡಿಎಯ ಚುನಾಯಿತ ಶಾಸಕರಲ್ಲಿ, ಶೇ. 36 ರಷ್ಟು ಮೇಲ್ಜಾತಿಯವರು, ಶೇ. 6 ಯಾದವರು, ಶೇ. 21 ರಷ್ಟು ಯಾದವೇತರ ಒಬಿಸಿಗಳು, ಶೇ. 19 ರಷ್ಟು ಇಬಿಸಿಗಳು, ಶೇ. 17 ರಷ್ಟು ದಲಿತ-ಬುಡಕಟ್ಟು ಜನರು ಮತ್ತು ಶೇ. 0 ರಷ್ಟು ಮುಸ್ಲಿಮರು ಇದ್ದಾರೆ. ಎನ್‌ಡಿಎಯ ಗೆಲುವಿಗೆ ಇಬಿಸಿಗಳು ನಿರ್ಣಾಯಕವಾಗಿದ್ದರೂ, ಅವರ ಜನಸಂಖ್ಯೆಯ ಪಾಲುಗಿಂತ ಕಡಿಮೆ ಟಿಕೆಟ್‌ಗಳನ್ನು ಪಡೆದಿದ್ದಾರೆ.
ಆಪಾತ್ತಿಗಾದವನೆ ನೆಂಟ..
ಆಪಾತ್ತಿಗಾದವನೆ ನೆಂಟ ಎಂಬ ಮಾತು ನಮ್ಮಲ್ಲಿ ಜನಜನಿತವಾಗಿದೆ. ನಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ನಾವು ಯಾವತ್ತೂ ಕೈ ಬಿಡಬಾರದು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅನೇಕ ಸಾಮಾಜಿಕ ಗುಂಪುಗಳು ಎನ್‌ಡಿಎ ಗೆಲುವಿಗೆ ಕೈ ಜೋಡಿಸಿವೆ. ಈಗ ಅವರ ಬೆಂಬಲಕ್ಕೆ ಧನ್ಯವಾದ ತಿಳಿಸಲು ಸೂಕ್ತ ಸಮಯವಾಗಿದ್ದು, ಮೈತ್ರಿಕೂಟದ ಅಭ್ಯರ್ಥಿಗಳಿಗೆ ನೆರವಾದ ಸಮುದಾಯಗಳಿಗೆ ಸಂಪುಟ ಸ್ಥಾನಗಳನ್ನು ನೀಡಬಹುದು. ಇದು ಈ ಗುಂಪುಗಳ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ, ಭವಿಷ್ಯದ ಚುನಾವಣೆಗಳಿಗೆ ಅವರನ್ನು ಪ್ರೋತ್ಸಾಹಿಸುತ್ತದೆ.
ವೋಟ್‌ವೈಬ್ ಎಕ್ಸಿಟ್ ಪೋಲ್ ಪ್ರಕಾರ, ಮೇಲ್ಜಾತಿ ಸಮುದಾಯದ ಸರಿಸುಮಾರು 64% ಜನರು ಎನ್‌ಡಿಎಗೆ ಬೆಂಬಲ ನೀಡಿದ್ದಾರೆ, ದಲಿತ-ಬುಡಕಟ್ಟು ಸಮುದಾಯದ 60% ಜನರು ಮತ್ತು ಯಾದವೇತರ ಒಬಿಸಿ ಮತ್ತು ಇಬಿಸಿ ಸಮುದಾಯಗಳ 57.5% ಜನರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈ ಸಮುದಾಯದ ಗುಂಪುಗಳನ್ನು ಮೈತ್ರಿಕೂಟದ ಪ್ರಮುಖ ಮತಬ್ಯಾಂಕ್ ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಯಾದವ್ ಸಮುದಾಯದ ಶೇ 19% ಮತ್ತು ಮುಸ್ಲಿಂ ಸಮುದಾಯದ ಶೇ 12% ರಷ್ಟು ಜನರು ಬೆಂಬಲ ನೀಡಿದ್ದಾರೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಈ ಅನುಪಾತದ ಆಧಾರದ ಮೇಲೆ ಕೂಡ ಸಚಿವ ಸಂಪುಟವನ್ನು ರಚಿಸಬಹುದು.
ಭೌಗೋಳಿಕ ಸಮತೋಲನ
ಯಾವುದೇ ರಾಜ್ಯ ಸರ್ಕಾರದ ಪ್ರಾದೇಶಿಕ ಪ್ರಾತಿನಿಧ್ಯ ಇರಲಿ ಸಂಪುಟದ ವಿಷಯ ಬಂದಾಗ ತುಂಬಾ ಮುಖ್ಯವಾಗುತ್ತದೆ. ಬಿಹಾರದ ಉತ್ತರ ಭಾಗವು 58% ಸ್ಥಾನಗಳನ್ನು ಹೊಂದಿದ್ದರೆ, ದಕ್ಷಿಣ ಭಾಗವು 42% ಸ್ಥಾನಗಳನ್ನು ಹೊಂದಿದೆ.
ಉತ್ತರ ಬಿಹಾರ: ತಿರ್ಹತ್ (22%), ದರ್ಭಾಂಗ (13%), ಸರನ್ (10%), ಕೋಸಿ (5%), ಪೂರ್ಣಿಯಾ (7%)
ದಕ್ಷಿಣ ಬಿಹಾರ: ಮಗಧ್ (10%), ಭೋಜ್‌ಪುರ (9%), ಪಾಟ್ನಾ (9%), ಮುಂಗೇರ್ (9%), ಭಾಗಲ್ಪುರ್ (6%)
ಮಂತ್ರಿ ಮಂಡಲ ರಚನೆಯ ಸಂದರ್ಭದಲ್ಲಿ ಈ ಯಾವುದೇ ಪ್ರದೇಶವು ನಿರ್ಲಕ್ಷಕ್ಕೆ ಒಳಗಾಗದಂತೆ ನಿತೀಶ್ ಜಾಗೃತಿ ವಹಿಸಬೇಕಿದೆ.
5. ಭವಿಷ್ಯದ ಚುನಾವಣೆಗಳ ಮೇಲೆ ಕಣ್ಣು
ಈ ಸಚಿವ ಸಂಪುಟವು ಕೇವಲ ಬಿಹಾರದ ಮೇಲಷ್ಟೆ ಅಲ್ಲದೇ, ಇದು ಉತ್ತರ ಪ್ರದೇಶದ 2027 ರ ವಿಧಾನಸಭಾ ಚುನಾವಣೆಗಳು ಮತ್ತು 2029 ರ ಲೋಕಸಭಾ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಮತ ಬ್ಯಾಂಕುಗಳನ್ನು ಕ್ರೋಢೀಕರಿಸಲು ಇದು ಪ್ರಮುಖ ಅಸ್ತ್ರ.
ನಿತೀಶ್ ಕುಮಾರ್ ಅವರ ಸಚಿವ ಸಂಪುಟವು ಜಾತಿ, ಪ್ರದೇಶ ಮತ್ತು ಭವಿಷ್ಯದ ಕಾರ್ಯತಂತ್ರದ ಮಿಶ್ರಣವಾಗಿದ್ದು, ಅವರು ಪೂರ್ಣ ಪ್ರಮಾಣದಲ್ಲಿ ಮಂತ್ರಿ ಮಂಡಲ ರಚಿಸುತ್ತಾರೋ, ಅಸಮಧಾನ ತಣಿಸಲು ಕೆಲವು ಸ್ಥಾನಗಳನ್ನು ಖಾಲಿ ಇಡುತ್ತಾರೋ ಕಾದು ನೋಡಬೇಕಿದೆ(ಏಜೆನ್ಸೀಸ್).