ಸಿಎಂ ನಿತೀಶ್ ಕುಮಾರ್ 
ದೇಶ

ಇಂದು ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಉತ್ತರಾಧಿಕಾರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಸಾಧ್ಯತೆ | Nitish Kumar

ಪಾಟ್ನಾ: ಬಿಹಾರದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ತಿಂಗಳು ರಾಜ್ಯಸಭಾಗೆ ಆಯ್ಕೆಯಾಗಿರುವ ಸಿಎಂ ನಿತೀಶ್ ಕುಮಾರ್ ಇಂದು(ಏ. 14) ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮಧ್ಯಾಹ್ನ 3.15ನಿಮಿಷದ ಸುಮಾರಿಗೆ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ನಿರ್ಧಾರ ತಿಳಿಸಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ ಇಂದು ಬೆಳಗ್ಗೆ ತಮ್ಮ ಕೊನೆಯ ಸಚಿವ ಸಂಪುಟ ಸಭೆ ನಡೆಸಿರುವ ನಿತೀಶ್ ಕುಮಾರ್, ತಮ್ಮ ಸ್ಥಾನದ ರಾಜೀನಾಮೆ ಮತ್ತು ಸಂಪುಟ ವಿಸರ್ಜನೆಯ ಬಗ್ಗೆ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ.
ಈ ವೇಳೆ ತಮ್ಮ ಬಗ್ಗೆ ಕೆಲವೇ ಮಾತುಗಳನ್ನಾಡಿರುವ ಅವರು, ನಾನು 2005 ರಲ್ಲಿ ಅಧಿಕಾರಕ್ಕೆ ಬಂದೆ. ನನಗೆ ಸಾಧ್ಯವಾದಷ್ಟು, ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಹೊಸ ಸರ್ಕಾರವು ನನ್ನ ಮಾರ್ಗದರ್ಶನವನ್ನು ಪಡೆಯುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.

ಸಾಮ್ರಾಟ್ ಚೌಧರಿ ಉತ್ತರಾಧಿಕಾರಿ ಸಾಧ್ಯತೆ

ಮಧ್ಯಾಹ್ನ 2 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದ್ದು, ಮಧ್ಯಾಹ್ನ 4 ಗಂಟೆಗೆ ಎನ್​ಡಿಎ ಶಾಸಕಾಂಗ ಸಭೆಯಲ್ಲಿ ಉತ್ತರಾಧಿಕಾರಿಯ ಘೋಷಣೆಯಾಗಲಿದೆ. ಹಾಲಿ ಡಿಸಿಎಂ ಸಾಮ್ರಾಟ್ ಚೌಧರಿ ಹೆಸರು ಮುಂಚೂಣಿಯಲ್ಲಿದ್ದು, ಸ್ವತಃ ಸಿಎಂ ನಿತೀಶ್ ಕುಮಾರ್ ಅವರೇ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದ್ರೆ ಜೆಡಿಯು ನೇತೃತ್ವದ ಸರ್ಕಾರದಲ್ಲಿ ಬಹಳ ಹಿಂದಿನಿಂದಲೂ ಕಿರಿಯ ಪಾಲುದಾರನಾಗಿದ್ದ ಬಿಜೆಪಿ, ಈ ಬಾರಿ ಮೊದಲ ಬಾರಿಗೆ ತನ್ನದೇ ಮುಖ್ಯಮಂತ್ರಿಯನ್ನು ಹೊಂದಲಿದೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 89 ಸ್ಥಾನವನ್ನು ಹೊಂದಿದ್ದು, ಜೆಡಿಯು 85 ಶಾಸಕರನ್ನು ಹೊಂದಿದೆ.
57 ವರ್ಷದ ಸಾಮ್ರಾಟ್ ಚೌಧರಿ, ರಾಜ್ಯದ ಪ್ರಮುಖ ಇತರ ಹಿಂದುಳಿದ ವರ್ಗ (ಒಬಿಸಿ) ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರಾಗಿದ್ದು, ಹಿಂದುಳಿದ ಜಾತಿಗಳಲ್ಲಿ ಯಾದವರ ನಂತರ ಕುಶ್ವಾಹ ಸಮುದಾಯವು ಅತಿ ದೊಡ್ಡದಾಗಿದೆ. ಮೂಲಗಳ ಪ್ರಕಾರ ಜೆಡಿಯು ಈ ಜಾತಿಯ ಗುಂಪಿನಿಂದಲೇ ಮುಖ್ಯಮಂತ್ರಿಯನ್ನು ನೇಮಿಸುವಂತೆ ಬಿಜೆಪಿಯನ್ನು ಕೇಳಿಕೊಂಡಿದೆ ಎನ್ನಲಾಗಿದೆ (ಏಜೆನ್ಸೀಸ್).