Nitish Kumar meets PM Modi 
ದೇಶ

ಬಂಕಿಪುರ ಸೋಲಿನ ಬೆನ್ನಲ್ಲೇ ಬಿಹಾರದಲ್ಲಿ ಅಲರ್ಟ್!...ಪ್ರಧಾನಿ ಮೋದಿ ಭೇಟಿಯಾದ ನಿತೀಶ್ ಕುಮಾರ್ | Nitish Kumar meets PM Modi

ನವದೆಹಲಿ: ಬಿಹಾರದ ಅತ್ಯಂತ ಹೈ-ಪ್ರೊಫೈಲ್ ಕ್ಷೇತ್ರವಾದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಉರುಳಿಸಿ, ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ (Nitish Kumar meets PM Modi) ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

1995 ರಿಂದಲೂ ಸತತವಾಗಿ ಬಿಜೆಪಿಯ ವಶದಲ್ಲಿದ್ದ, ಅತ್ಯಂತ ಸುರಕ್ಷಿತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಅವರನ್ನು 19,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಬಂಕಿಪುರ ಕ್ಷೇತ್ರವನ್ನು ದಶಕಗಳ ಕಾಲ ದಿವಂಗತ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಹಾಗೂ ಅವರ ಪುತ್ರ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪ್ರತಿನಿಧಿಸಿದ್ದರು. ನಿತಿನ್ ನವೀನ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಎದುರಾಗಿತ್ತು. 2025 ರ ನವೆಂಬರ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದಿದ್ದ ಜನ ಸುರಾಜ್ ಪಾರ್ಟಿ, ಈಗ ಬಿಜೆಪಿಯ ಭದ್ರಕೋಟೆಯನ್ನೇ ಭೇದಿಸಿ ಚೊಚ್ಚಲ ಪ್ರವೇಶ ಪಡೆದಿರುವುದು ಬಿಹಾರ ರಾಜಕೀಯದ ಹೊಸ ಮೈಲಿಗಲ್ಲಾಗಿದೆ.

ಈ ಚುನಾವಣಾ ಫಲಿತಾಂಶವು ಬಿಹಾರದ ರಾಜಕೀಯ ದಿಕ್ಸೂಚಿಯನ್ನೇ ಬದಲಾಯಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ತಂತ್ರಜ್ಞನಾಗಿದ್ದ ಪ್ರಶಾಂತ್ ಕಿಶೋರ್, ಜನ ಸುರಾಜ್ ಚಳವಳಿಯ ಮೂಲಕ ಶಿಕ್ಷಣ, ಉದ್ಯೋಗ, ಗುಳೆ ಹೋಗುವಿಕೆ ಹಾಗೂ ವ್ಯವಸ್ಥಿತ ಸುಧಾರಣೆಗಳಂತಹ ನೈಜ ಸಾರ್ವಜನಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಸ್ಪರ್ಧಿಸಿದ್ದು ಜನರನ್ನು ಆಕರ್ಷಿಸಿದೆ. ಈ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ಭೇಟಿಯಾಗಿರುವುದು, ಮುಂಬರುವ ಚುನಾವಣಾ ಸರಣಿಗೆ ಎನ್‌ಡಿಎ ತನ್ನ ಹೊಸ ತಂತ್ರಗಾರಿಕೆಯನ್ನು ರೂಪಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನೊಂದೆಡೆ ತಮ್ಮ ಐತಿಹಾಸಿಕ ಗೆಲುವಿನ ಬಗ್ಗೆ ಇಂಡಿಯಾ ಟಿವಿಗೆ ನೀಡಿದ ಮೊದಲ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, ಈ ತೀರ್ಪು ಬಿಜೆಪಿಯ ಅಹಂಕಾರ'ದ ವಿರುದ್ಧ ಜನ ನೀಡಿದ ಸ್ಪಷ್ಟ ಸಂದೇಶ ಎಂದಿದ್ದಾರೆ. ಬಿಹಾರದ ಜನತೆ ಜಾತಿ ಮತ್ತು ಕೋಮು ರಾಜಕೀಯವನ್ನು ಮೀರಿ ಬೆಳೆಯಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಪರ್ಯಾಯವನ್ನು ಬಯಸಿದ್ದ ಬಂಕಿಪುರ ಮತದಾರರು, ಅಹಂಕಾರದ ವಿರುದ್ಧ ಹಾಗೂ ಉತ್ತಮ ಆಡಳಿತದ ಪರವಾಗಿ ತಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​​).