ಪಾಟ್ನಾ: ಬಿಹಾರದ ಆಡಳಿತರೂಢ ಎನ್ಡಿಎ ಮೈತ್ರಿಕೂಟದ ಜೆಡಿಯು ಶಾಸಕ ಅನಂತ್ ಸಿಂಗ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಚ್ಚಾಟನೆ ಮಾಡಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಿತೀಶ್ ಕುಮಾರ್ ಹೋಗಿದ್ದಾರೆ, ಜೆಡಿಯು ಕೂಡ ಹೋಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಅನಂತ್ ಸಿಂಗ್ ಮತ್ತು ಅವರ ಪತ್ನಿಯನ್ನು ವಿಧಾನ ಪರಿಷತ್ ಚುನಾವಣೆಯ ಸಮಯದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವಾಗಿ ಪ್ರಚಾರ ನಡೆಸಿದ ಹಿನ್ನೆಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶನಿವಾರ ಆರು ವರ್ಷಗಳ ಕಾಲ ಜೆಡಿ(ಯು) ಪಕ್ಷದಿಂದ ಉಚ್ಚಾಟಿಸಲಾಗಿದೆ.
ಭಾನುವಾರ(ಅ. 25) ಸುದ್ದಿಗಾರರೊಂದಿಗೆ ಮಾತನಾಡಿರುವ ಅನಂತ್ ಸಿಂಗ್, ಪಕ್ಷದ ನಿರ್ಧಾರದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಪ್ರಸ್ತುತ ರಾಜ್ಯದಲ್ಲಿ ನಿತೀಶ್ ಕುಮಾರ್ ಇಲ್ಲ, ಪಕ್ಷ ಅವರದ್ದು. ಈಗ ಅವರ ನಿರ್ಗಮನದೊಂದಿಗೆ ಜೆಡಿಯು ಕೊನೆಗಹೊಂಡಿದೆ. ಪಕ್ಷಕ್ಕೆ ಇನ್ನು ಮುಂದೆ ರಾಜಕೀಯ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ.
ತಮ್ಮ ಉಚ್ಚಾಟನೆಯಿಂದ ಜೆಡಿ(ಯು) ಕನಿಷ್ಠ 10 ಸ್ಥಾನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕ್ರಮಕ್ಕೆ ಯಾರು ಆದೇಶಿಸಿದ್ದಾರೆಂದು ನನಗೆ ತಿಳಿದಿಲ್ಲ. ಬಹುಶಃ ಪಕ್ಷದ ಮೇಲೆ ಹಿಡಿತ ಸಾಧಿಸಿದವರೇ ಇದಕ್ಕೆ ಕಾರಣರಾಗಿರಬಹುದು. ನನಗೆ ನಿತೀಶ್ ಕುಮಾರ್ ಜೊತೆ ಯಾವುದೇ ವಿವಾದಗಳಿಲ್ಲ. ನಾನು ಅವರನ್ನು ಮತ್ತೆ ಭೇಟಿಯಾಗುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಸೇರಿದರೂ, ನಿತೀಶ್ ಜಿ ಅವರನ್ನು ಎಂದಿಗೂ ಟೀಕಿಸುವುದಿಲ್ಲ ಎಂದಿದ್ದಾರೆ (ಏಜೆನ್ಸೀಸ್).