ಸಿಎಂ ನಿತೀಶ್ ಕುಮಾರ್ 
ದೇಶ

ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಿರುವ ನಡುವೆಯೂ 5ನೇ ಬಾರಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಆಯ್ಕೆ| Nitish Kumar

ಪಾಟ್ನಾ: ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆ ಕೆಲವೇ ದಿನಗಳಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ನಡುವೆಯೂ ನಿತೀಶ್ ಕುಮಾರ್ ಅವರು ಪಕ್ಷದಲ್ಲಿ ಅಧಿಪತ್ಯ ಸ್ಥಾಪಿಸಿದ್ದು, 5ನೇ ಬಾರಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಜೆಡಿಯು, ಸಿಎಂ ನಿತೀಶ್ ಕುಮಾರ್ ಅವರನ್ನು ಜನತಾ ದಳ (ಸಂಯುಕ್ತ) ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠೀ ನಡೆಯಲಿದ್ದು, ಅಲ್ಲಿ ಚುನಾವಣಾಧಿಕಾರಿ ನಿತೀಶ್ ಕುಮಾರ್ ಅವರಿಗೆ ಪ್ರಮಾಣ ಪತ್ರ ನೀಡಲಿದ್ದಾರೆ ಎಂದು ತಿಳಿಸಿದೆ.
ಪ್ರಮಾಣ ಪತ್ರ ನೀಡುವ ವೇಳೆ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಮತ್ತು ರಾಜ್ಯಸಭೆ ಸಂಸದೀಯ ಪಕ್ಷದ ನಾಯಕ ಸಂಜಯ್ ಕುಮಾರ್ ಝಾ, ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್, ಸಚಿವ ಶ್ರವಣ್ ಕುಮಾರ್ ಹಾಗೂ ಪಕ್ಷದ ಇತರ ಹಿರಿಯ ನಾಯಕರು ಉಪಸ್ಥಿತರಿರುತ್ತಾರೆ ಎಂದು ಹೇಳಿದೆ.
ಈ ಮೊದಲು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆಯೇ, ನಿತೀಶ್ ಕುಮಾರ್ ಪರವಾಗಿ ಪಕ್ಷದ ಅನೇಕ ನಾಯಕರು ನಾಮಪತ್ರ ಸಲ್ಲಿಸಿ, ಅವರೇ ಪಕ್ಷವನ್ನು ನಡೆಸಬೇಕೆಂದು ಒತ್ತಾಯಿಸಿದ್ದರು ಎನ್ನಲಾಗಿದೆ.
ಮಾ. 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಂದಿನ ಬಿಜೆಪಿ-ಜೆಡಿಯು ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ನಾಯಕರೊಬ್ಬರು ಸಿಎಂ ಆಗುವ ಸಾಧ್ಯತೆ ಇದ್ದು, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್).