- ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು
- ದಾಖಲೆಯ 10ನೇ ಬಾರಿ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನಕ್ಕೆ ಸಿದ್ಧತೆ
- ಇಂದು ಪಾಟ್ನಾದಲ್ಲಿ ಜೆಡಿಯು ಶಾಸಕಾಂಗ ಪಕ್ಷದ ನಾಯಕನಾಗಿ ನಿತೀಶ್ ಆಯ್ಕೆ
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಜೆಡಿಯು ಮುಖ್ಯಸ್ಥ, ಹಾಲಿ ಸಿಎಂ ನಿತೀಶ್ ಕುಮಾರ್(Nitish Kumar) 10ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿದ್ದಾರೆ. ಇಂದು (ನ. 19) ಪಾಟ್ನಾದಲ್ಲಿ ನಡೆದ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯಲ್ಲಿ ನಿತೀಶ್ ಅವರನ್ನು ಜೆಡಿಯು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಎನ್‌ಡಿಎ ಘಟಕಗಳ ಸಭೆಗೆ ಮುಂಚಿತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನೂ ಎನ್‌ಡಿಎ ಸಭೆಯಲ್ಲಿ ಮೈತ್ರಿಕೂಟದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದ್ದು, ನಾಳೆ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿದೆ.
ಇನ್ನೂ ಬಿಹಾರದ ಹೊಸ ಸಚಿವ ಸಂಪುಟದಲ್ಲಿ ಉತ್ತಮ ಖಾತೆಗಳನ್ನು ಪಡೆಯಲು ಎನ್‌ಡಿಎ ಮಿತ್ರಪಕ್ಷಗಳು ಕಠಿಣ ಚೌಕಾಶಿಯಲ್ಲಿ ತೊಡಗಿವೆ ಎನ್ನಲಾಗಿದೆ. ಸ್ಪೀಕರ್ ಹುದ್ದೆ ಬಿಜೆಪಿ ಬಳಿಯೇ ಉಳಿಯುವ ನಿರೀಕ್ಷೆಯಿದ್ದು, ನಿತೀಶ್ ಕುಮಾರ್ ಗೃಹ ಖಾತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಸ್ಪೀಕರ್ ಸ್ಥಾನಕ್ಕೆ ಇಬ್ಬರು ಪ್ರಮುಖ ಬಿಜೆಪಿ ನಾಯಕರ ಹೆಸರುಗಳನ್ನು ಈಗಾಗಲೇ ಪರಿಗಣಿಸಲಾಗಿದ್ದು, ಅವರಲ್ಲಿ ಒಬ್ಬರನ್ನು ಇಂದು ಪಾಟ್ನಾದಲ್ಲಿ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ಊಹಿಸಲಾಗಿತ್ತು, ಆದರೆ ಈಗ ಬಿಜೆಪಿ ಎರಡೂ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಸ್ಥಾನಕ್ಕೆ ಹೊಸ ಮುಖಗಳನ್ನು ನೇಮಿಸುವ ಬಗ್ಗೆ ಪಕ್ಷ ಚಿಂತಿಸುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 89, ಜೆಡಿ (ಯು) 85, ಎಲ್‌ಜೆಪಿ (ಆರ್‌ವಿ) 19, ಎಚ್‌ಎಎಂ 5 ಮತ್ತು ಆರ್‌ಎಲ್‌ಎಂ 4 ಸ್ಥಾನಗಳನ್ನು ಗಳಿಸಿವೆ. ವಿರೋಧ ಪಕ್ಷಗಳು ಕೇವಲ 35 ಸ್ಥಾನಗಳಲ್ಲಿ ಗೆದ್ದಿವೆ (ಏಜೆನ್ಸೀಸ್)