Nitish Caninet | ಸಿಎಂ ನಿತೀಶ್​​ಗೆ ತೇಜಸ್ವಿ ಯಾದವ್​ ಅಭಿನಂದನೆ( ಚಿತ್ರ ಕೃಪೆ ಪಿಟಿಐ) 
ದೇಶ

Nitish Caninet | ಸಿಎಂ ನಿತೀಶ್​ ಕುಮಾರ್​ಗೆ ಅಭಿನಂದನೆ ಸಲ್ಲಿಸಿದ ತೇಜಸ್ವಿ ಯಾದವ್​; ನೀಡಿದ ಸಲಹೆ ಏನು..?

ಪ್ರಮುಖ ಮುಖ್ಯಾಂಶಗಳು

  • ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿತೀಶ್​ ಕುಮಾರ್
  • ಅಭಿನಂದನೆ ಸಲ್ಲಿಸಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್​
  • ನಿತೀಶ್ ಕುಮಾರ್ ದಾಖಲೆಯ 10 ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
ಪಟನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿತೀಶ್​ ಕುಮಾರ್​ಗೆ, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್​ ಅಭಿನಂದನೆ ಸಲ್ಲಿಸಿದ್ದು, ಚುನಾವಣಾ ಪ್ರಚಾರದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ತೇಜಸ್ವಿ, ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಗೌರವಾನ್ವಿತ ಶ್ರೀ ನಿತೀಶ್ ಕುಮಾರ್ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯ ಸರ್ಕಾರದ ಎಲ್ಲಾ ಸಚಿವರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಹೊಸ ಸರ್ಕಾರವು ರಾಜ್ಯದ ಜನರ ಆಶಯಗಳು ಮತ್ತು ನಿರೀಕ್ಷೆಗಳನ್ನು ಪೂರೈಸುತ್ತದೆ, ತನ್ನ ಭರವಸೆಗಳು ಮತ್ತು ಘೋಷಣೆಗಳನ್ನು ಪೂರೈಸುತ್ತದೆ ಮತ್ತು ಬಿಹಾರದ ಜನರ ಜೀವನದಲ್ಲಿ ಸಕಾರಾತ್ಮಕ ಮತ್ತು ಗುಣಾತ್ಮಕ ಬದಲಾವಣೆಗಳನ್ನು ತರುತ್ತದೆ ಎನ್ನುವ ನಂಬಿಕೆ ಇದೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ನೇತೃತ್ವದ ಮಹಾಘಟಬಂಧನ್ ಕೇವಲ 35 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದ ಬಳಿಕ, ಇದು ತೇಜಸ್ವಿ ಅವರ ಮೊದಲ ಪೋಸ್ಟ್ ಆಗಿದ್ದು, ಎನ್‌ಡಿಎ ಮೈತ್ರಿಕೂಟ 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

ನಿತೀಶ್ 10.0

ಬಿಜೆಪಿಯ ಹಿರಿಯ ನಾಯಕರುಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರಷ್ಟೆ ಅಲ್ಲದೇ 24 ಸಚಿವರು ನೂತನ ಸಂಪುಟ ಸೇರ್ಪಡೆಗೊಂಡರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಅನೇಕ ನಾಯಕರುಗಳು ಉಪಸ್ಥಿತರಿದ್ದರು. 
243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್​ಡಿಎ ಮೈತ್ರಿಕೂಟ 202 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 2010 ರಲ್ಲಿ 206 ಸ್ಥಾನಗಳ ಗೆಲುವಿನ ಬಳಿಕ ಎರಡನೇ ಬಾರಿಗೆ 200ರ ಗಡಿಯನ್ನು ದಾಟಿದಂತಾಗಿದೆ. 
ಎನ್​ಡಿಎ ಮಿತ್ರಪಕ್ಷಗಳು ಪಡೆದ ಸ್ಥಾನ: ಬಿಜೆಪಿ 89 ಸ್ಥಾನ, ಜೆಡಿಯು 85 ಸ್ಥಾನ, ಎಲ್‌ಜೆಪಿ 19 ಸ್ಥಾನ, ಎಚ್‌ಎಎಂಎಸ್ ಐದು ಸ್ಥಾನಗಳು ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳನ್ನು ಗೆದ್ದಿವೆ. ಇತ್ತ ವಿಪಕ್ಷ ಮಹಾಘಟಬಂಧನ್​​ನಲ್ಲಿ ಆರ್‌ಜೆಡಿ 25 ಸ್ಥಾನ, ಕಾಂಗ್ರೆಸ್ ಆರು, ಸಿಪಿಐ(ಎಂಎಲ್)(ಎಲ್) ಎರಡು, ವಿಐಪಿ ಒಂದು ಮತ್ತು ಸಿಪಿಐ(ಎಂ) ಒಂದು ಸ್ಥಾನಗಳನ್ನು ಗೆದ್ದಿವೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದರೆ, ಬಿಎಸ್‌ಪಿ ಒಂದು ಸ್ಥಾನ ಗಳಿಸಿದೆ(ಏಜೆನ್ಸೀಸ್​).