ಬಿಜೆಪಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ 
ದೇಶ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್; ಅಮಿತ್ ಶಾ ಸೇರಿ ಹಲವು ನಾಯಕರು ಉಪಸ್ಥಿತಿ | Nitin Nabin

ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಭಾನುವಾರ ನೇಮಕವಾಗಿ ಬಿಹಾರದ ಸಚಿವ ನಿತಿನ್ ನಬಿನ್(Nitin Nabin), ಇಂದು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ, ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷರಾಗಿ ನೇಮಕವಾದ ಬಳಿಕ ಇಂದು ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು, ದೆಹಲಿ ಸಿಎಂ ರೇಖಾ ಗುಪ್ತಾ ಸೇರಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
45 ವರ್ಷ ವಯಸ್ಸಿನ ನಬಿನ್ ಪ್ರಸ್ತುತ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ. ಪಾಟ್ನಾದ ಬಂಕಿಪುರ ಕ್ಷೇತ್ರದಿಂದ ಒಟ್ಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಟ್ಟರ್ ಆರ್​ಎಸ್​ಎಸ್​ ಸದಸ್ಯರಾಗಿರುವ ಅವರು, ಮಾಜಿ ಶಾಸಕ ದಿ. ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾಗಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿಯು ನಬಿನ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಅವರ ನೇಮಕವು ಪಕ್ಷದೊಳಗಿನ ಯುವಪೀಳಿಗೆಯ ನಾಯಕತ್ವದೆಡೆಗಿನ ಒಂದು ಹೆಜ್ಜೆಯಾಗಿ ಕಂಡು ಬರುತ್ತಿದೆ. ಮುಂದೆ ನಡ್ಡಾ ಅವರ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಕ್ಷದ ನಾಯಕರು, ನಿತಿನ್ ಅವರನ್ನು ಆರ್​ಎಸ್​ಎಸ್ ಜೊತೆಗಿನ ಗಟ್ಟಿಯಾದ ಸಂಬಂಧ ಮತ್ತು ಆಳವಾದ ಸಂಘಟನಾ ಬದ್ಧತೆ ಹೊಂದಿರುವ ಕ್ರಿಯಾತ್ಮಕ, ಸೈದ್ಧಾಂತಿಕವಾಗಿ ಬೇರೂರಿರುವ ನಾಯಕ ಎಂದು ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ (ಏಜೆನ್ಸೀಸ್).