Nitin Gadkari | ಕೇಂದ್ರ ಸಚಿವ ನಿತಿನ್​ ಗಡ್ಕರಿ ಮತ್ತು ಹಮಾಸ್​ ನಾಯಕ ಇಸ್ಮಾಯಿಲ್ ಹನಿಯೇ (X/Reuters) 
ದೇಶ

ಆ ಸುದ್ದಿ ಕೇಳಿ ಆಘಾತವಾಯಿತು...ಹಮಾಸ್​ ನಾಯಕನ ಹತ್ಯೆಗೂ ಮುನ್ನ ನಡೆದ ಬೆಳವಣಿಗೆಗಳ ಬಗ್ಗೆ ಗಡ್ಕರಿ ಹೇಳಿದ್ದೇನು..? | Nitin Gadkari

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಆದೇಶದಂತೆ ಕಳೆದ ವರ್ಷ ಜುಲೈನಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಟೆಹ್ರಾನ್‌ಗೆ ತೆರಳಿದ್ದ ವೇಳೆ ತಮಗಾಗಿರುವ ಆಘಾತಕಾರಿ ಘಟನೆಯೊಂದನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಂಚಿಕೊಂಡಿದ್ದಾರೆ.
ಮಂಗಳವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಇರಾನ್‌ನಲ್ಲಿ ಹತ್ಯೆಗೀಡಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇಯೊಂದಿಗಿನ ಮುಖಾಮುಖಿಯನ್ನು ನೆನಪಿಸಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಜಾಗತಿಕ ನಾಯಕರು ಮತ್ತು ಗಣ್ಯರು ಟೆಹ್ರಾನ್‌ನ ಪಂಚತಾರಾ ಹೋಟೆಲ್‌ನಲ್ಲಿ ಜಮಾಯಿಸಿದ್ದರು. ಯಾವುದೇ ದೇಶವನ್ನು ಪ್ರತಿನಿಧಿಸದ ಹನಿಯೇ ಉಪಸ್ಥಿತಿ, ಅಲ್ಲಿದ್ದವರ ದೃಷ್ಟಿ ಸಹಜವಾಗಿ ಅವರತ್ತ ಸೆಳೆಯುವಂತಾಯಿತು. ವಿವಿಧ ರಾಷ್ಟ್ರಗಳ ನಾಯಕರು ಹಾಜರಿದ್ದರು, ಆದರೆ ರಾಷ್ಟ್ರದ ಮುಖ್ಯಸ್ಥರಲ್ಲದ ಒಬ್ಬ ವ್ಯಕ್ತಿ ಇರಾನ್ ಅಧ್ಯಕ್ಷರು ಮತ್ತು ಮುಖ್ಯ ನ್ಯಾಯಾಧೀಶರ ಜೊತೆಗೆ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದನ್ನು ನೋಡಿದ ಬಳಿಕ ಆಶ್ಚರ್ಯವಾಯಿತು ಎಂದು ಹೇಳಿದರು.
ಪ್ರಮಾಣವಚನ ಕಾರ್ಯಕ್ರಮದ ಮರುದಿನ ಭಾರತದಲ್ಲಿರುವ ಇರಾನ್ ರಾಯಭಾರಿ ತಮ್ಮನ್ನು ಎಚ್ಚರಗೊಳಿಸಿದಾಗ, ಹನಿಯೆ ಹತ್ಯೆಯಾಗಿದೆ ಎಂದು ತಿಳಿಯಿತು ಎನ್ನುವುದನ್ನು ಗಡ್ಕರಿ ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ನಾನು ನನ್ನ ಹೋಟೆಲ್‌ಗೆ ಹಿಂತಿರುಗಿದೆ, ಬೆಳಿಗ್ಗೆ 4 ಗಂಟೆ ಸುಮಾರಿಗೆ, ಭಾರತದಲ್ಲಿನ ಇರಾನಿನ ರಾಯಭಾರಿ ನನ್ನ ಬಳಿಗೆ ಬಂದು ನಾವು ಹೊರಡಬೇಕು ಎಂದು ಹೇಳಿದರು. ಏನಾಯಿತು ಎಂದು ನಾನು ಅವರನ್ನು ಕೇಳಿದ್ದಕ್ಕೆ, ಹಮಾಸ್ ಮುಖ್ಯಸ್ಥನನ್ನು ಹತ್ಯೆ ಮಾಡಲಾಗಿದೆ ಎಂದು ಉತ್ತರಿಸಿದರು. ಇದನ್ನು ಕೇಳಿ ನನಗೆ ಆಘಾತವಾಯಿತು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಹನಿಯೆ ಹತ್ಯೆ

2024 ರ ಜುಲೈ 31 ರಂದು ಇರಾನ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 62 ವರ್ಷದ ಹಿರಿಯ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇ ಹತ್ಯೆ ನಡೆಯಿತು. ಹಮಾಸ್‌ನ ಅನಿರೀಕ್ಷಿತ ದಾಳಿಯ ಬಳಿಕ ಹನಿಯೇ ಇಸ್ರೇಲ್‌ನ ಪ್ರಮುಖ ಗುರಿಯಾಗಿದ್ದರು. ಉಗ್ರಗಾಮಿ ಗುಂಪಿನ ಹೇಳಿಕೆಗಳ ಪ್ರಕಾರ, ಇರಾನ್‌ನ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ ಸ್ವಲ್ಪ ಸಮಯದ ಬಳಿಕ ಟೆಹ್ರಾನ್ ನಿವಾಸದಲ್ಲಿ ಹನಿಯೇಗೆ ಗುಂಡು ಹಾರಿಸಲಾಯಿತು(ಏಜೆನ್ಸೀಸ್).