ನೀತಿ ಆಯೋಗದ ಹೂಡಿಕೆ ಸ್ನೇಹಿ ಸೂಚ್ಯಂಕ ಪ್ರಕಟ 
ದೇಶ

ನೀತಿ ಆಯೋಗದ ಹೂಡಿಕೆ ಸ್ನೇಹಿ ಸೂಚ್ಯಂಕ ಪ್ರಕಟ: ಗುಜರಾತ್ ಪ್ರಥಮ, ಮಹಾರಾಷ್ಟ್ರ ದ್ವಿತೀಯ

ನವದೆಹಲಿ: ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೂಡಿಕೆಗೆ ಇರುವ ಪೂರಕ ವಾತಾವರಣವನ್ನು ಮೌಲ್ಯೀಕರಿಸುವ ನೀತಿ ಆಯೋಗದ ‘ಹೂಡಿಕೆ ಸ್ನೇಹಿ ಸೂಚ್ಯಂಕ’ ಬಿಡುಗಡೆಯಾಗಿದ್ದು, ಇದರಲ್ಲಿ ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡು ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
ನೀತಿ ಆಯೋಗದ ಉಪಾಧ್ಯಕ್ಷ ಅಶೋಕ್ ಕುಮಾರ್ ಲಾಹಿರಿ ಅವರು ಶುಕ್ರವಾರ ಈ ಜಂಟಿ ವರದಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಲಕ್ಷದ್ವೀಪ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪ್ರದೇಶವಾಗಿ ಹೊರಹೊಮ್ಮಿದೆ. ಲಕ್ಷದ್ವೀಪದ ಬೆನ್ನಲ್ಲೇ ಲಡಾಖ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೊನೆಯ ಸ್ಥಾನಗಳಲ್ಲಿವೆ. ಈ ವರದಿಯನ್ನು ದೊಡ್ಡ ರಾಜ್ಯಗಳು; ಗುಡ್ಡಗಾಡು ಮತ್ತು ಈಶಾನ್ಯ ರಾಜ್ಯಗಳು; ನಗರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂಬ ಮೂರು ಪ್ರಮುಖ ವಿಭಾಗಗಳಡಿ ಸಿದ್ಧಪಡಿಸಲಾಗಿದೆ.
ದೊಡ್ಡ ರಾಜ್ಯಗಳ ವಿಭಾಗದಲ್ಲಿ ಒಟ್ಟು 56.6 ಅಂಕಗಳನ್ನು ಪಡೆಯುವ ಮೂಲಕ ಗುಜರಾತ್ ಈ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 53.7 ಅಂಕಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದರೆ, 53.3 ಅಂಕಗಳೊಂದಿಗೆ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ಒಡಿಶಾ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ಕ್ರಮವಾಗಿ 4, 5 ಮತ್ತು 6ನೇ ಸ್ಥಾನಗಳನ್ನು ಪಡೆದುಕೊಂಡಿವೆ. ಇದೇ ವಿಭಾಗದಲ್ಲಿ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನಗಳಲ್ಲಿವೆ. ಗುಡ್ಡಗಾಡು, ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಉತ್ತರಾಖಂಡ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಹೂಡಿಕೆಗೆ ಪೂರಕವಾದ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿವೆ. ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಲಕ್ಷದ್ವೀಪ ಅತ್ಯಂತ ಕೆಳಮಟ್ಟದ ವಹಿವಾಟು ವಾತಾವರಣ ಹೊಂದಿದ್ದು ಕೊನೆಯ ಸ್ಥಾನದಲ್ಲಿದೆ.

ಕರ್ನಾಟಕದ ಸಾಧನೆ

ನೀತಿ ಆಯೋಗದ ವರದಿ ಪ್ರಕಾರ, ಕರ್ನಾಟಕವು ಹೂಡಿಕೆಯಲ್ಲಿ ಮುಂಚೂಣಿ (ಫ್ರಂಟ್ರನ್ನರ್) ರಾಜ್ಯವಾಗಿ ಹೊರಹೊಮ್ಮಿದೆ. ವಿಶೇಷವಾಗಿ ಉದ್ಯಮ ವಾತಾವರಣದ ನಿಯತಾಂಕದಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿರುವ ಕರ್ನಾಟಕ, ಹೂಡಿಕೆದಾರರ ಪ್ರಮುಖ ಆಕರ್ಷಣೆಯಾಗಿದೆ. ದೇಶದ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕವು ಸಿಂಹಪಾಲನ್ನು ಹೊಂದಿದೆ. ವಿಕಸಿತ ಭಾರತದ ಗುರಿ ತಲುಪಲು ಮತ್ತು ಆರ್ಥಿಕ ಪ್ರಗತಿ ವೇಗಗೊಳಿಸಲು ಇಂತಹ ಬಂಡವಾಳ ಹೂಡಿಕೆಗಳು ಅತ್ಯಗತ್ಯ ಎಂದು ನೀತಿ ಆಯೋಗದ ವರದಿ ತಿಳಿಸಿದೆ.
ಸೂಚ್ಯಂಕದ 8 ಪ್ರಮುಖ ಮಾನದಂಡಗಳು: ಯಾವ ರಾಜ್ಯ ಹೂಡಿಕೆಗೆ ಎಷ್ಟು ಸೂಕ್ತ ಮತ್ತು ಆಕರ್ಷಕ ಎಂಬುದನ್ನು ನಿರ್ಧರಿಸಲು ನೀತಿ ಆಯೋಗ 8 ಪ್ರಮುಖ ನಿಯತಾಂಕಗಳನ್ನು ಪರಿಗಣಿಸಿದೆ. ಮೂಲಸೌಕರ್ಯ, ವ್ಯವಹಾರದ ವಾತಾವರಣ, ಸಂಪನ್ಮೂಲಗಳು, ಸರ್ಕಾರದ ನೀತಿ, ನಿಯಂತ್ರಣ ಸುಲಭತೆ, ಸಾಂಸ್ಥಿಕ ಪರಿಸರ, ಆರ್ಥಿಕ ಆರೋಗ್ಯ, ಪರಿಸರ ಸ್ಥಿತಿಸ್ಥಾಪಕತ್ವ ಇವೇ ಆ ನಿಯತಾಂಕಗಳು.

ಯಶಸ್ಸಿಗೆ ಪ್ರಮುಖ ಕಾರಣಗಳು

ಗುಜರಾತ್: ಮೂಲಸೌಕರ್ಯ, ವ್ಯಾಪಾರ ವಾತಾವರಣ, ಆರ್ಥಿಕ ಸ್ಥಿರತೆ ಮತ್ತು ಸರ್ಕಾರದ ನೀತಿಗಳ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ವಿಶೇಷವಾಗಿ ರಾಜ್ಯದ ಸಮರ್ಥ ಬಂದರು ಕಾರ್ಯಾ ಚರಣೆಗಳು ಮತ್ತು ಕೈಗಾರಿಕೆಗಳಿಗೆ ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಪ್ರಸರಣ ಮತ್ತು ವಿತರಣಾ ನಷ್ಟವನ್ನು ನಿಯಂತ್ರಿಸಿರುವುದು ಗುಜರಾತ್ ಮೊದಲ ಸ್ಥಾನ ಪಡೆಯಲು ಪ್ರಮುಖ ಕಾರಣ.
ಮಹಾರಾಷ್ಟ್ರ: ವ್ಯಾಪಾರ ವಾತಾವರಣ, ಸಂಪನ್ಮೂಲ ಲಭ್ಯತೆ ಮತ್ತು ಆರ್ಥಿಕ ಆರೋಗ್ಯದ ಬಲದಿಂದ ಎರಡನೇ ಸ್ಥಾನ ಪಡೆದಿದೆ. ಆದರೆ ಮೂಲಸೌಕರ್ಯ ಮತ್ತು ನಿಯಂತ್ರಣ ಸುಲಭತೆಯ ಸುಧಾರಣೆಗೆ ಇಲ್ಲಿ ಇನ್ನೂ ಹೆಚ್ಚಿನ ಅವಕಾಶವಿದೆ.
ತಮಿಳುನಾಡು: ಮೂಲಸೌಕರ್ಯ ಮತ್ತು ವ್ಯಾಪಾರ ವಾತಾವರಣದಲ್ಲಿ ಬಲಿಷ್ಠವಾಗಿದ್ದರೂ, ಆರ್ಥಿಕ ಆರೋಗ್ಯದ ರಂಗದಲ್ಲಿ ಈ ರಾಜ್ಯ ಮತ್ತಷ್ಟು ಸುಧಾರಣೆ ಕಾಣಬೇಕಿದೆ.