ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ((KISS) ನ ದ್ಯುತಿಚಂದ್ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕರು ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಪ್ರತಿಷ್ಠಿತ ಕಿಸ್ (KISS) ಹ್ಯುಮ್ಯಾನಿಟೇರಿಯನ್ ಅವಾರ್ಡ್ 2025 ಅನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಭುವನೇಶ್ವರ: ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ((KISS) ನ ದ್ಯುತಿಚಂದ್ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಪ್ರತಿಷ್ಠಿತ ಕಿಸ್ (KISS) ಹ್ಯುಮ್ಯಾನಿಟೇರಿಯನ್ ಅವಾರ್ಡ್ 2025 ಅನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಶಿಕ್ಷಣ, ಆರೋಗ್ಯ ರಕ್ಷಣೆ, ಗ್ರಾಮೀಣ ಜನರಿಗೆ ನೆರವು, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ರಿಲಯನ್ಸ್ ಫೌಂಡೇಶನ್ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು, ಶ್ರೀಲಂಕಾ ಸರ್ಕಾರದ ಗೌರವ ಹಿರಿಯ ಸಲಹೆಗಾರರು ಹಾಗೂ ವಿಶ್ವಸಂಸ್ಥೆಯಲ್ಲಿನ ಹವಾಮಾನ ಬದಲಾವಣೆಯ ಅಂತರರಾಷ್ಟ್ರೀಯ ಪ್ಯಾನೆಲ್‌ನ ಉಪಾಧ್ಯಕ್ಷರಾದ ಪ್ರೊ. ಮೋಹನ್ ಮುನಸಿಂಘೆ ಮಾತನಾಡಿ, ಕಿಸ್ ಹ್ಯುಮ್ಯಾನಿಟೇರಿಯನ್ ಅವಾರ್ಡ್ ವಿಶ್ವದಲ್ಲೇ ಶ್ರೇಷ್ಠ ಪ್ರಶಸ್ತಿಯಾಗಿದೆ. ವಿಶ್ವದಾದ್ಯಂತ ಮಾನವೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ದೇಶ ನಿರ್ಮಾಣ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೀತಾ ಅವರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ನೀತಾ ಅಂಬಾನಿ ಅವರು ಮಾತನಾಡಿ, ಪ್ರಶಸ್ತಿ ನೀಡಿರುವುದು ಅತೀವ ಖುಷಿ ನೀಡಿದೆ. ಇದು ಸಮಗ್ರ ರಿಲಯನ್ಸ್ ಸಮುದಾಯಕ್ಕೆ ಸಿಕ್ಕ ಪ್ರಶಸ್ತಿ ಇದು. ಸಮುದಾಯ ಬಲಪಡಿಸಿ, ದೇಶವನ್ನು ಬಲಿಷ್ಠಗೊಳಿಸುವ ನಮ್ಮ ಪ್ರಯತ್ನಕ್ಕೆ ಈ ಪ್ರಶಸ್ತಿಯಿಂದ ಇನ್ನಷ್ಟು ಶಕ್ತಿ ಬಂದಿದೆ ಎಂದರು. ಮಕ್ಕಳ ಬದುಕು ಬದಲಾಯಿಸಲು ಕೆಐಎಸ್‌ಎಸ್ ಮತ್ತು ಕೆಐಐಟಿ ನೀಡುತ್ತಿರುವ ಮಾನವೀಯ ಸೇವೆ ಕೊಡುಗೆ ಅಪಾರ ಎಂದು ಹೇಳಿದರು.
ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ) ಮತ್ತು ಕೆಐಎಸ್‌ಎಸ್ ನ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಡಾ. ಅಚ್ಯುತ ಸಮಂತ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನೀತಾ ಅಂಬಾನಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂಸ್ಥೆಗೆ ಮತ್ತು ವೈಯಕ್ತಿಕವಾಗಿ ಹೆಮ್ಮೆ ತಂದಿದೆ. ಪ್ರಶಸ್ತಿಯ ಗೌರವ ಹೆಚ್ಚಿದೆ ಎಂದರು.
ವಿಶ್ವದಾದ್ಯಂತ ನೀತಾ ಅಂಬಾನಿಯವರು ಚಿರಪರಿಚಿತರು. ದೇವರು ಹಾಗೂ ಕೋಟ್ಯಂತರ ಜನರ ಆಶೀರ್ವಾದ ಅವರ ಮೇಲಿದೆ. ಕೇವಲ ಉದ್ಯಮಿಯಾಗಿ ಅಲ್ಲದೆ ನೂರಾರು ಸಮಾಜಸೇವೆಗಳ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ. ಅಂಬಾನಿ ಪರಿವಾರವು ಸಮಾಜಕ್ಕೆ ನೀಡಿದ ಕೊಡುಗೆ ಮರೆಯುವಂತಿಲ್ಲ. ನೀತಾ ಅವರು ತಮ್ಮ ಸೇವೆಗಳ ಮೂಲಕ ಮಾದರಿಯಾಗಿದ್ದಾರೆ ಎಂದರು.
ಕ್ಯಾಂಪಸ್ ವಾತಾವರಣಕ್ಕೆ ಮನಸೋತ ನೀತಾ ಅಂಬಾನಿ:
ನೀತಾ ಅಂಬಾನಿಯವರಿಗೆ ವಿಶ್ವವಿದ್ಯಾಲಯಕ್ಕೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ ಕೋರಲಾಯಿತು. ಬುಡಕಟ್ಟು ಸಂಪ್ರದಾಯದ ನೃತ್ಯದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಕ್ಯಾಂಪಸ್‌ನ ಎಲ್ಲೆಡೆ ಸಂಚರಿಸಿದ ಅವರು, ಸಂತಸ ವ್ಯಕ್ತಪಡಿಸಿದರು. ಕಿಸ್‌ನ ಮಕ್ಕಳೊಂದಿಗೆ ನೃತ್ಯ ಮಾಡಿದರು. ಮಕ್ಕಳೊಂದಿಗೆ ಬೆರೆತು ಮಾತುಕತೆ ನಡೆಸಿದರು. ನೀತಾ ಅವರನ್ನು ಕಂಡ ಮಕ್ಕಳೂ ಅತೀವ ಖುಷಿಪಟ್ಟರು. ಎರಡೂ ಸಂಸ್ಥೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇರುವುದನ್ನು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಸಮಾರಂಭದಲ್ಲಿ ಕೆಐಐಟಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಬಾಲ್, ಕೆಐಐಟಿ ಹಾಗೂ ಕೆಐಎಸ್‌ಎಸ್‌ನ ಅಧಿಕಾರಿಗಳು, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.