Nishikant Dubey | ಬಿಜೆಪಿ ಸಂಸದ ನಿಶಿಕಾಂತ್ ದುಬೆ
Nishikant Dubey: ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತಾದ ತಮ್ಮ ಹೇಳಿಕೆಗಳು ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಬೇಷರತ್ತಾಗಿ ಕ್ಷಮೆಯಾಚಿಸಿದ್ದು, ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ದುಬೆ ನೆಹರು-ಗಾಂಧಿ ಕುಟುಂಬದ ಕುರಿತು ತಾವು ನೀಡಿದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜು ಪಟ್ನಾಯಕ್ ಅವರಂತಹ ಶ್ರೇಷ್ಠ ನಾಯಕರ ಬಗ್ಗೆ ತಮಗೆ ಅಪಾರ ಗೌರವವಿದ್ದು, ತಮ್ಮ ಮಾತುಗಳು ಅವರನ್ನೇ ಗುರಿಯಾಗಿಸಿ ಹೇಳಿದ್ದಲ್ಲ ಎಂದಿದ್ದಾರೆ.
ತಮ್ಮ ಎಕ್ಸ್ ಖಾತೆಯ ಮೂಲಕ ಕ್ಷಮೆ ಕೇಳಿರುವ ದುಬೆ, ಬಿಜು ಬಾಬು ಅವರು ನಮಗೆ ಯಾವಾಗಲೂ ಮಾರ್ಗದರ್ಶಕರಾಗಿದ್ದು, ನೆಹರುರ ಬಗ್ಗೆ ನಾನು ಹೊಂದಿರುವ ಆಲೋಚನೆಗಳನ್ನು ಬಿಜು ಬಾಬು ಅವರಿಗೆ ಅನ್ವಯಿಸಿ ತಪ್ಪಾಗಿ ಅರ್ಥೈಸಲಾಗಿದೆ. ಇದು ನನ್ನ ವೈಯಕ್ತಿಕ ದೃಷ್ಟಿಕೋನವಾಗಿದ್ದರೂ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದು, ಬಿಜು ಪಟ್ನಾಯಕ್ರನ್ನು ಭಾರತದ ಪ್ರಮುಖ ನಾಯಕರಲೊಬ್ಬರು ಎಂದು ಹೇಳಿದರು.
ದುಬೆ ಆರೋಪಗಳೇನು..?
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಿಶಿಕಾಂತ್ ದುಬೆ, 1962 ರ ಚೀನಾ ಯುದ್ಧವನ್ನು ನೆಹರು ಅಮೆರಿಕದ ಹಣ ಮತ್ತು ಸಿಐಎ ಏಜೆಂಟ್‌ಗಳ ಸಹಯೋಗದೊಂದಿಗೆ ಹೋರಾಡಿದ್ದರು. ಆಗ ಒಡಿಶಾದ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್ ನೆಹರು ಮತ್ತು ಅಮೆರಿಕ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಪೂರಕವಾಗಿ ನೆಹರು ಬರೆದಿದ್ದಾರೆ ಎನ್ನಲಾದ ಎರಡು ಪತ್ರಗಳನ್ನು ಬಿಡುಗಡೆ ಮಾಡಿದ ದುಬೆ, ರಕ್ಷಣಾ ವಿಷಯಗಳ ಚರ್ಚೆಗಾಗಿ ಪಟ್ನಾಯಕ್ ಅವರನ್ನು ಪ್ರಮುಖ ಕೆಲಸದ ಮೇಲೆ ಅಮೆರಿಕಕ್ಕೆ ಕಳುಹಿಸಲಾಗಿತ್ತು ಎಂದು ಪ್ರತಿಪಾದಿಸಿದರು. ಅಷ್ಟೇ ಅಲ್ಲದೆ, 1963-64ರಲ್ಲಿ ಅಮೆರಿಕದ ಸೂಚನೆಯಂತೆ ನಂದಾ ದೇವಿಯಲ್ಲಿ ಪರಮಾಣು ಸಾಧನ ಸ್ಥಾಪಿಸಲಾಗಿತ್ತು ಮತ್ತು ಒಡಿಶಾದ ಚಾರ್ಬಾಟಿಯಾ ವಾಯುನೆಲೆಯನ್ನು ಅಮೆರಿಕದ U-2 ಗೂಢಚಾರ ವಿಮಾನಗಳಿಗಾಗಿ ಬಳಸಲಾಗಿತ್ತು ಎಂದು ಅವರು ದೂರಿದರು.
ಈ ವಿವಾದದ ಬೆನ್ನಲ್ಲೇ ಬಿಜೆಡಿ ಸಂಸದ ಸಸ್ಮಿತ್ ಪಾತ್ರ, ನಿಶಿಕಾಂತ್ ದುಬೆ ಅಧ್ಯಕ್ಷತೆಯ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದು, ರಾಷ್ಟ್ರೀಯ ಐಕಾನ್ ಬಗ್ಗೆ ಅಗೌರವ ತೋರುವ ವ್ಯಕ್ತಿಯ ಅಡಿಯಲ್ಲಿ ಕೆಲಸ ಮಾಡಲು ತನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ(ಏಜೆನ್ಸೀಸ್).