ಕ್ರೀಡಾಪಟುಗಳ ಕನಸಿಗೆ ರೆಕ್ಕೆ ಕಟ್ಟುತ್ತಿದೆ NIOS: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವರದಾನ!
- ಏನಿದು ಮುಕ್ತ ಶಾಲಾ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇಲ್ಲಿನ ದಾಖಲಾತಿ ಪ್ರಕ್ರಿಯೆ ಏನು?
- ರೆಗ್ಯುಲರ್ ಸ್ಕೂಲ್‌ಗೆ ಗುಡ್‌ಬೈ ಹೇಳಿ ಮುಕ್ತ ಶಾಲೆಯತ್ತ ಮುಖ ಮಾಡುತ್ತಿರುವ ಯುವ ಕ್ರೀಡಾಪಟುಗಳು
- ಸರ್ಕಾರಿ ಕೆಲಸ ಹಾಗೂ ಉನ್ನತ ವ್ಯಾಸಂಗಕ್ಕೂ NIOS ಸರ್ಟಿಫಿಕೇಟ್ ಸಂಪೂರ್ಣ ಮಾನ್ಯ
- NIOS ಪ್ರಾದೇಶಿಕ ನಿರ್ದೇಶಕ ವಿ. ಸ್ವಾಮಿನಾಥನ್ ಸಂದರ್ಶನದಲ್ಲಿ ಮುಕ್ತ ಶಾಲೆಯ ಕಂಪ್ಲೀಟ್ ಡಿಟೇಲ್ಸ್
ನಾನಾ ಕಾರಣಗಳಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಮಕ್ಕಳಿಗೆ ಹಾಗು ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಮಹದಾಸೆಯಿಂದ ದಿನಕ್ಕೆ 10 ಗಂಟೆಗಳ ಕಾಲ ಮೈದಾನದಲ್ಲೇ ಕಳೆಯುವ ಕ್ರೀಡಾ ಪ್ರತಿಭೆಗಳ ಪಾಲಿಗೆ "ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ( NIOS )" ಎಂಬ ಮುಕ್ತ ಶಾಲಾ ವ್ಯವಸ್ಥೆ ಇಂದು ಅಕ್ಷರಶಃ ಸಂಜೀವಿನಿಯಾಗಿದೆ. ಅಷ್ಟಕ್ಕೂ ಏನಿದು ಮುಕ್ತ ಶಾಲಾ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇಲ್ಲಿನ ದಾಖಲಾತಿ ಪ್ರಕ್ರಿಯೆ ಏನು? ಇಲ್ಲಿನ ಶಿಕ್ಷಣ ಮತ್ತು ತರಬೇತಿ ಹೇಗಿರುತ್ತೆ? ಸುದೀರ್ಘ ಕಾಲ ಮೈದಾನದಲ್ಲೇ ಕಳೆಯುವ ಮಕ್ಕಳ ಭವಿಷ್ಯವನ್ನು ಇದು ಹೇಗೆ ರೂಪಿಸುತ್ತೆ? ಇಂದು ಅನೇಕರು ಸಾಂಪ್ರದಾಯಿಕ ಶಿಕ್ಷಣಕ್ಕೆ ಗುಡ್‌ಬೈ ಹೇಳಿ ಎನ್ಐಒಎಸ್ ಕಡೆ ಮುಖ ಮಾಡುತ್ತಿರುವುದೇಕೆ? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಎನ್ಐಒಎಸ್ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ವಿ. ಸ್ವಾಮಿನಾಥನ್ ಅವರು 'ವಿಜಯವಾಣಿ ಡಿಜಿಟಲ್ ಸಂಪಾದಕ ಸಿದ್ದು ಕಾಳೋಜಿ ಅವರೊಂದಿಗೆ Face 2 Face ಸಂದರ್ಶನದಲ್ಲಿ ನೀಡಿರುವ ಉತ್ತರಗಳ ಸರಣಿ ಇಲ್ಲಿದೆ.
ಎನ್ಐಒಎಸ್ ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಉದ್ದೇಶವೇನು?
ಸ್ವಾಮಿನಾಥನ್: ಎನ್ಐಒಎಸ್ ಎಂಬುದು ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆಯಾಗಿದೆ. ಇದು ಕೇಂದ್ರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈ ಸಚಿವಾಯಲಯದ ಅಡಿಯಲ್ಲಿ ಎರಡು ಮಂಡಳಿ ಬರುತ್ತವೆ. ಒಂದು ಕೇಂದ್ರ ಶಿಕ್ಷಣ ಮಂಡಳಿ. ಇದೊಂದು ಔಪಚಾರಿಕ ಶಿಕ್ಷಣ ಮಂಡಳಿಯಾಗಿದ್ದು, ಇದು ರೆಗ್ಯುಲರ್ ಸ್ಟ್ರೀಮ್ ಅಡಿಯಲ್ಲಿ ಶಿಕ್ಷಣ ನೀಡುತ್ತದೆ. ಎನ್ಐಒಎಸ್ ಒಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯಾಗಿದೆ. ಇದರಲ್ಲಿರುವ ಪಠ್ಯಕ್ರಮ ಸೇರಿದಂತೆ ಎಲ್ಲವೂ 2025ರ ಎನ್ಸಿಎಫ್ ಪಠ್ಯಕ್ರಮದ ಅಡಿಯಲ್ಲಿ ಬರುತ್ತದೆ. ಎಲ್ಲವೂ ಎನ್ಐಒಎಸ್ ನಿಯಮದ ಚೌಕಟ್ಟಿನಲ್ಲಿ ರಚನೆಯಾಗಿದೆ. ಸಿಬಿಎಸ್ಇಯಲ್ಲಿರುವ 9 ಮತ್ತು 10ನೇ ತರಗತಿಯ ಪಠ್ಯಕ್ರಮವನ್ನು ಎನ್ಐಒಎಸ್ 10ನೇ ತರಗತಿಯಲ್ಲಿದೆ ಮತ್ತು 11 ಮತ್ತು 12ನೇ ತರಗತಿ ಪಠ್ಯಕ್ರಮವೂ ಎನ್ಐಒಎಸ್ 12ನೇ ತರಗತಿಯಲ್ಲಿದೆ. ವಿವಿಧ ಕಾರಣಗಳಿಂದಾಗಿ ನಿಯಮಿತವಾಗಿ ಶಾಲೆಗೆ ಹೋಗಲು ಸಾಧ್ಯವಾಗದ ಆರ್ಥಿಕವಾಗಿ ಹಿಂದುಳಿದವರು, ಗ್ರಾಮೀಣ ಭಾಗದವರು, ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದವರು ಮತ್ತು ದೈಹಿಕ ಹಾಗೂ ಮಾನಸಿಕ ನ್ಯೂನತೆ ಹೊಂದಿದ ಮಕ್ಕಳಿಗೆ ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ಪಡೆಯಲು ಸಮಾನ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಸಾಕ್ಷರತೆ ಮತ್ತು ಜೀವನೋಪಾಯದ ಕೌಶಲ್ಯಗಳನ್ನು ಹೆಚ್ಚಿಸಲು ಶ್ರಮಿಸುತ್ತದೆ.
ಎನ್ಐಒಎಸ್ ದಾಖಲಾತಿ ಪ್ರಕ್ರಿಯೆ ಹಾಗೂ ಸ್ಟಡಿ ಮೆಟಿರೀಯಲ್ಸ್ ಹೇಗಿರುತ್ತೆ? ಯಾವ ರೀತಿ ತರಬೇತಿ ಕೊಡುತ್ತೀರಾ?
ಸ್ವಾಮಿನಾಥನ್: ಎನ್ಐಒಎಸ್ ದಾಖಲಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದು, ಇಡೀ ವರ್ಷ ಇರುತ್ತದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್
www.nios.ac.in ಮೂಲಕ ವರ್ಷದಲ್ಲಿ ಎರಡು ಅವಧಿಗಳಲ್ಲಿ (ಬ್ಲಾಕ್ 1 ಮತ್ತು ಬ್ಲಾಕ್ 2) ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮಗೆ ಬೇಕಾದ ವಿಷಯ ಹಾಗೂ ಹತ್ತಿರದ ಅಧ್ಯಯನ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಸ್ಟಡಿ ಮೆಟಿರೀಯಲ್ಸ್ ಸ್ವಯಂ-ಕಲಿಕೆಗೆ ಪೂರಕವಾಗಿ ಅತ್ಯಂತ ಸರಳ ಭಾಷೆಯಲ್ಲಿ ವಿನ್ಯಾಸಗೊಂಡಿರುತ್ತವೆ ಮತ್ತು ಕನ್ನಡದಲ್ಲೂ ಲಭ್ಯವಿದ್ದು, ಇವುಗಳನ್ನು ವಿದ್ಯಾರ್ಥಿಗಳ ಮನೆ ವಿಳಾಸಕ್ಕೆ ಉಚಿತವಾಗಿ ಅಂಚೆ ಮೂಲಕ ಕಳುಹಿಸಲಾಗುತ್ತದೆ ಹಾಗೂ ಆನ್‌ಲೈನ್‌ನಲ್ಲಿ ಪಿಡಿಎಫ್ ರೂಪದಲ್ಲೂ ಸಿಗುತ್ತವೆ. ಇನ್ನು ತರಬೇತಿಯ ವಿಚಾರಕ್ಕೆ ಬಂದರೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಾರಾಂತ್ಯಗಳಲ್ಲಿ ಅಧ್ಯಯನ ಕೇಂದ್ರಗಳಲ್ಲಿ ಮುಖಾಮುಖಿ ಸಂಪರ್ಕ ತರಗತಿಗಳನ್ನು ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಇದರೊಂದಿಗೆ 'ಸ್ವಯಂ ಪ್ರಭಾ' ಟಿವಿ ಚಾನೆಲ್‌ಗಳು ಹಾಗೂ ಯೂಟ್ಯೂಬ್ ಲೈವ್ ಮೂಲಕವೂ ಡಿಜಿಟಲ್ ಪಾಠ ಪ್ರವಚನಗಳ ಮಾರ್ಗದರ್ಶನ ನೀಡಲಾಗುತ್ತದೆ.
ದೈಹಿಕ ನ್ಯೂನತೆ, ಬುದ್ಧಿಮಾಂದ್ಯ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸ್ಕ್ರೈಬ್ಗಳ ವ್ಯವಸ್ಥೆ ಹೇಗಿದೆ?
ಸ್ವಾಮಿನಾಥನ್: ಎನ್ಐಒಎಸ್ ಸಂಸ್ಥೆಯು ದೈಹಿಕ ನ್ಯೂನತೆ, ಬುದ್ಧಿಮಾಂದ್ಯ ಹಾಗೂ ಕಲಿಕಾ ನ್ಯೂನ್ಯತೆ ಹೊಂದಿರುವ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಪರೀಕ್ಷೆ ಬರೆಯಲು ಉಚಿತ ಸ್ಕ್ರೈಬ್ (ಬರಹಗಾರರ) ವ್ಯವಸ್ಥೆ ಹಾಗೂ ಪರೀಕ್ಷಾ ರಿಯಾಯಿತಿಗಳನ್ನು ಕಲ್ಪಿಸಿದೆ. ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ನೋಂದಾಯಿತ ವೈದ್ಯಕೀಯ ಮಂಡಳಿಯಿಂದ ಪಡೆದ ಸಿಂಧುತ್ವವಿರುವ ದೈಹಿಕ ಅಥವಾ ಬುದ್ಧಿಮಾಂದ್ಯತೆಯ ಪ್ರಮಾಣಪತ್ರವನ್ನು ಸಲ್ಲಿಸಿ, ಪರೀಕ್ಷೆಗೆ ಮುಂಚಿತವಾಗಿ ತಮ್ಮ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಅನುಮತಿ ಪಡೆದು ಅರ್ಹ ಸ್ಕ್ರೈಬ್‌ಗಳನ್ನು ಬಳಸಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಸ್ಕ್ರೈಬ್ ಬದಲಿಗೆ ಕಂಪ್ಯೂಟರ್ ಬಳಕೆಗೆ ಅಥವಾ ಸ್ವತಃ ತಾವೇ ಸಹಾಯಕರನ್ನು ಕರೆತರಲು ಅವಕಾಶವಿರುತ್ತದೆ. ವಿಶೇಷ ಬುದ್ಧಿಮಾಂದ್ಯ ಅಥವಾ ತೀವ್ರ ಕಲಿಕಾ ಅಡೆತಡೆ ಇರುವ ಮಕ್ಕಳಿಗೆ ಚಿತ್ರ ಬಿಡಿಸುವ, ಸರಳ ಲೆಕ್ಕಾಚಾರ ಮಾಡುವ ಹಾಗೂ ಪ್ರಮುಖ ಪರಿಕಲ್ಪನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪರೀಕ್ಷಾ ಮೌಲ್ಯಮಾಪನದಲ್ಲೂ ವಿಶೇಷ ಉದಾರತೆಯನ್ನು ತೋರಲಾಗುತ್ತದೆ. ವಿಶೇಷ ಸಂದರ್ಭದಲ್ಲಿ ಮಕ್ಕಳು ಪಾಲಕರು ಕೂಡ ತಮ್ಮ ಮಕ್ಕಳ ಪರವಾಗಿ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುತ್ತದೆ.
ಎನ್ಐಒಎಸ್ಗೆ ಎಂಥಾ ಮಕ್ಕಳು ಅರ್ಹರಿರುತ್ತಾರೆ? ಮತ್ತು ಒಂದು ಸಾರಿ ದಾಖಲಾತಿ ಪಡೆದರೆ ಎಷ್ಟು ವರ್ಷಗಳ ಕಾಲ ಮಾನ್ಯವಾಗಿರುತ್ತದೆ?
ಸ್ವಾಮಿನಾಥನ್: ಎನ್ಐಒಎಸ್ ಶಿಕ್ಷಣಕ್ಕೆ ನಿಯಮಿತ ಶಾಲೆಗೆ ಹೋಗಲು ಸಾಧ್ಯವಾಗದ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರು, ಗ್ರಾಮೀಣ ಭಾಗದ ಮಕ್ಕಳು, ಅರ್ಧಕ್ಕೆ ಶಾಲೆ ಬಿಟ್ಟವರು, ವಿಕಲಚೇತನರು, ಕ್ರೀಡೆ ಅಥವಾ ಇತರ ರಂಗಗಳಲ್ಲಿ ಸಕ್ರಿಯರಾಗಿರುವವರು ಮತ್ತು ಕನಿಷ್ಠ ವಯೋಮಿತಿ (10ನೇ ತರಗತಿಗೆ 14 ವರ್ಷ, 12ನೇ ತರಗತಿಗೆ 15 ವರ್ಷ) ಪೂರೈಸಿದ ಯಾವುದೇ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಒಮ್ಮೆ ಈ ಸಂಸ್ಥೆಯಲ್ಲಿ ದಾಖಲಾತಿ ಪಡೆದರೆ, ಅದು ಮುಂದಿನ 5 ವರ್ಷಗಳ ಕಾಲ ಮಾನ್ಯತೆ ಹೊಂದಿರುತ್ತದೆ, ಅಂದರೆ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ವಿಷಯಗಳನ್ನು ಉತ್ತೀರ್ಣರಾಗಲು 5 ವರ್ಷಗಳ ಅವಧಿಯಲ್ಲಿ ಒಟ್ಟು 9 ಬಾರಿ ಪರೀಕ್ಷೆ ಬರೆಯುವ ಅವಕಾಶವನ್ನು ಪಡೆಯುತ್ತಾರೆ.
ಸರ್ಕಾರದ ಉದ್ಯೋಗದ ಅವಕಾಶ ಬಂದಾಗ ಎನ್ಐಒಎಸ್ನಲ್ಲಿ ಪಾಸಾದ ಮಕ್ಕಳಿಗೂ ಆದ್ಯತೆ ನೀಡುತ್ತಾರಾ?
ಸ್ವಾಮಿನಾಥನ್: ಎನ್ಐಒಎಸ್ ಮಂಡಳಿಯಿಂದ ಸೆಕೆಂಡರಿ (10ನೇ) ಅಥವಾ ಹೈಯರ್ ಸೆಕೆಂಡರಿ (12ನೇ) ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳಲ್ಲಿ ಇತರ ರೆಗ್ಯುಲರ್ ಮಂಡಳಿಗಳ (CBSE, ICSE ಅಥವಾ ರಾಜ್ಯ ಮಂಡಳಿ) ವಿದ್ಯಾರ್ಥಿಗಳಂತೆಯೇ ಸಮಾನ ಆದ್ಯತೆ ಮತ್ತು ಹಕ್ಕುಗಳು ಇರುತ್ತವೆ. ಇತ್ತೀಚೆಗೆ ಕರ್ನಾಟಕ ಸರ್ಕಾರವೂ ಕೂಡ ಎನ್ಐಒಎಸ್ ವಿದ್ಯಾರ್ಥಿಗಳಿಗೆ ಮಾನ್ಯತೆ ನೀಡಿದೆ. ಭಾರತ ಸರ್ಕಾರದ ನಿಯಮಗಳ ಪ್ರಕಾರ ಎನ್ಐಒಎಸ್ ಪ್ರಮಾಣಪತ್ರವು ಸಂಪೂರ್ಣವಾಗಿ ಮಾನ್ಯತೆ ಪಡೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳು, ಐಟಿ/ಖಾಸಗಿ ವಲಯಗಳು ಹಾಗೂ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಇದನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಬೇಕಾದರೆ, ಉನ್ನತ ವ್ಯಾಸಂಗವನ್ನು ಕೂಡ ಎನ್ಐಒಎಸ್ ಪ್ರಮಾಣಪತ್ರದ ಮೂಲಕ ವಿದ್ಯಾರ್ಥಿಗಳು ಮುಂದುವರಿಸಬಹುದು.
ಮುಂದೆ ಬೇರೆ ಬೇರೆ ಕೋರ್ಸ್ಗಳನ್ನು ಪರಿಚಯಿಸುವ ಯೋಚನೆ ಇದೆಯೇ?
ಸ್ವಾಮಿನಾಥನ್: ಸದ್ಯಕ್ಕೆ ಎನ್ಐಒಎಸ್ ಅಲ್ಲಿ 10 ಮತ್ತು 12ನೇ ತರಗತಿಯನ್ನು ಮಾತ್ರ ಕೇಂದ್ರಿಕರಿಸುತ್ತಿದ್ದೇವೆ. ಇದರೊಂದಿಗೆ ಪ್ಲಂಬಿಂಗ್, ಹೋಟೆಲ್ ಮ್ಯಾನೇಜ್ಮೆಂಟ್ ಸೇರಿದಂತೆ ಕೆಲವೇ ಕೆಲವು ಸಾಂದರ್ಭಿಕ ಕೋರ್ಸ್ಗಳನ್ನು ಮಾಡುತ್ತಿದ್ದೇವೆ. ದಾಖಲಾತಿ ಹೆಚ್ಚಾಗಿ, ಸರ್ಕಾರದಿಂದ ಎಲ್ಲ ನೆರವು ಸಿಕ್ಕಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕೋರ್ಸ್ಗಳನ್ನು ತೆರೆಯುತ್ತೇವೆ.
ಶಿಕ್ಷಣದಲ್ಲೇ ಅತ್ಯಂತ ಹಿಂದುಳಿದಿರುವ ಯಾದಗಿರಿ ಜಿಲ್ಲೆಗೆ ನೀವು ಹಾಕಿಕೊಂಡಿರುವ ವಿಶೇಷ ಯೋಜನೆ ಏನು?
ಸ್ವಾಮಿನಾಥನ್: ಯಾದಗಿರಿಯಲ್ಲಿ ಇತ್ತೀಚೆಗೆ ಒಂದು ಎನ್ಐಒಎಸ್ ಕೇಂದ್ರವನ್ನು ತೆರೆದಿದ್ದೇವೆ. ಎನ್ಐಒಎಸ್ ಮಿತ್ರ ಯೋಜನೆಯನ್ನು ಶುರು ಮಾಡಲಿದ್ದೇವೆ. ಯಾದಗಿರಿ ಕ್ಷೇತ್ರ ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ತುಂಬಾ ಕಾಳಜಿ ಇದೆ. ಮುಂದಿನ ದಿನಗಳಲ್ಲಿ ಮೊದಲು ಒಂದು ಕ್ಯಾಂಪೇನಿಂಗ್ ಮಾಡಲಿದ್ದೇವೆ. ಕೆಲವೊಂದು ಶಾಲೆಗಳಲ್ಲಿ ಒಂದಿಷ್ಟು ಸಭೆಗಳನ್ನು ನಡೆಸಲಿದ್ದೇವೆ. ಎನ್ಐಒಎಸ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿ, ದಾಖಲಾತಿ ಹೆಚ್ಚಿಸುವ ಕೆಲಸವನ್ನು ಮಾಡುತ್ತೇವೆ.
ನೀವು ಎನ್ಐಒಎಸ್ನ ಕರ್ನಾಟಕದ ಪ್ರಾದೇಶಿಕ ನಿರ್ದೇಶಕರಾದ ಬಳಿಕ ಏನೆಲ್ಲ ಬದಲಾವಣೆಗಳನ್ನು ತಂದಿದ್ದೀರಿ? ಯಾವ ರೀತಿ ಜನಪ್ರಿಯತೆ ಹೆಚ್ಚಿಸಿದ್ದೀರಿ?
ಸ್ವಾಮಿನಾಥನ್: ಕರ್ನಾಟಕದಲ್ಲಿ ನಾನು ಪ್ರಾದೇಶಿಕ ನಿರ್ದೇಶಕನಾಗಿ ಮೂರೂವರೆ ವರ್ಷ ಕಳೆದಿದೆ. ಕರ್ನಾಟಕದಲ್ಲೂ ಎನ್ಐಒಎಸ್ ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದ್ದು, ಇಂದು ಎಲ್ಲರ ಬಳಿ ತಲುಪಿದೆ. ಕರ್ನಾಟಕ ಸರ್ಕಾರದೊಂದಿಗೆ ಪಂಚಾಯತ್ ರಾಜ್ ಇಲಾಖೆ ಒಳಗೊಂಡಂತೆ ಒಟ್ಟು ಮೂರು ಪ್ರಮುಖ ತಿಳುವಳಿಕಾ ಪತ್ರಗಳಿಗೆ (MoU) ಸಹಿ ಹಾಕಲಾಗಿದ್ದು, ಈ ಪೈಕಿ ಶಾಲೆ ಬಿಟ್ಟ ಮಕ್ಕಳಿಗಾಗಿ ವಿಶೇಷ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ಬಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸುಮಾರು 5,200 ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಎನ್ಐಒಎಸ್ಗೆ ನೀಡಿದ್ದರಿಂದ, ದಾಖಲಾತಿಯಲ್ಲಿ ಶೇಕಡಾ 120 ರಷ್ಟು ಗಮನಾರ್ಹ ಪ್ರಗತಿ ಕಂಡುಬಂದಿದೆ. ಅಲ್ಲದೆ, ಪ್ರಸ್ತುತ ಸಾಲಿನ 'ಸ್ಟ್ರೀಮ್ 1 ಬ್ಲಾಕ್ 1' ದಾಖಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಾಗಲೇ 2,000 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು ಸೆಪ್ಟೆಂಬರ್ ವೇಳೆಗೆ ಸೆಕೆಂಡರಿ ಹಾಗೂ ಹೈಯರ್ ಸೆಕೆಂಡರಿ ವಿಭಾಗ ಸೇರಿ ಒಟ್ಟು ದಾಖಲಾತಿ ಸಂಖ್ಯೆ 5 ರಿಂದ 6 ಸಾವಿರಕ್ಕೆ ತಲುಪುವ ನಿರೀಕ್ಷೆಯಿದೆ. ಈ ರಾಜ್ಯದ ಅಧಿಕಾರಿಗಳು ಕೂಡ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಮತ್ತು ಸಹಾಯ ಮಾಡುತ್ತಿದ್ದಾರೆ. ಈ ರೀತಿಯ ಸ್ಪಂದನೆ ಇದೇ ಮೊದಲು.
ಹದಿಹರೆಯದ ಕ್ರಿಕೆಟ್ ಸೆನ್ಸೇಷನ್‌ಗಳಾದ 15 ವರ್ಷದ ವೈಭವ್ ಸೂರ್ಯವಂಶಿ ಮತ್ತು ಭಾರತೀಯ ಯು-19 ಮಹಿಳಾ ಟಿ-20 ತಂಡದ ಮಾಜಿ ನಾಯಕಿ ನಿಕಿ ಪ್ರಸಾದ್ ಅವರ ಯಶಸ್ಸು, ಕ್ರೀಡಾ ಲೋಕದಲ್ಲಿ ಮುಕ್ತ ಶಾಲಾ ಶಿಕ್ಷಣದ ಮಹತ್ವವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಟ್ಟಿದೆ. ದಿನದ ಬಹುಪಾಲು ಸಮಯವನ್ನು ಮೈದಾನದಲ್ಲೇ ಕಳೆಯುವ ಇಂತಹ ಉದಯೋನ್ಮುಖ ಕ್ರೀಡಾತಾರೆಗಳಿಗೆ ಸಾಂಪ್ರದಾಯಿಕ ಶಾಲಾ-ಕಾಲೇಜುಗಳ ಕಟ್ಟುಪಾಡುಗಳ ನಡುವೆ ಓದು ಮತ್ತು ಕ್ರೀಡೆಯನ್ನು ಸರಿದೂಗಿಸುವುದು ದೊಡ್ಡ ಸವಾಲಾಗಿತ್ತು, ಆದರೆ ಎನ್ಐಒಎಸ್ ಒದಗಿಸುವ ಸಮಯದ ನಮ್ಯತೆಯು ಇವರ ಕ್ರೀಡಾ ತರಬೇತಿಗೆ ಯಾವುದೇ ಅಡ್ಡಿಯಾಗದಂತೆ ಹತ್ತನೇ ಮತ್ತು ಹನ್ನೆರಡನೇ ತರಗತಿಯ ಅಧಿಕೃತ ಶಿಕ್ಷಣವನ್ನು ಪೂರೈಸಲು ಭದ್ರವಾದ ವೇದಿಕೆಯಾಗಿದೆ. ಇವರ ಯಶೋಗಾಥೆಯಿಂದ ಪ್ರೇರಿತರಾಗಿರುವ ಕರ್ನಾಟಕದ ನೂರಾರು ಯುವ ಕ್ರಿಕೆಟಿಗರು ಹಾಗೂ ಪೋಷಕರು, ಕ್ರೀಡಾ ಸಾಧನೆಯ ಕನಸುಗಳಿಗೆ ಬೆಂಚ್ ಕಾಯಿಸದೆ ಓದಿನಲ್ಲೂ ಯಶಸ್ಸು ಗಳಿಸಲು ಈಗ ಮುಕ್ತ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ವಿಶ್ವಾಸಾರ್ಹ ಹಾದಿಯಾಗಿ ಅಪ್ಪಿಕೊಳ್ಳುತ್ತಿದ್ದಾರೆ.
ಎನ್ಐಒಎಸ್ ಬಗ್ಗೆ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎಂಬುದು ಪ್ರಿ-ಡಿಗ್ರಿ ಅಂದರೆ, 12ನೇ ತರಗತಿ ವರೆಗೆ ವಿವಿಧ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಇರುವ ಒಂದು ವಿಶಿಷ್ಟ ಮುಕ್ತ ಶಾಲಾ ವ್ಯವಸ್ಥೆಯಾಗಿದೆ. ಇದನ್ನು ಆರಂಭದಲ್ಲಿ 1979ರಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಡಿಯಲ್ಲಿ ಒಂದು ಫ್ಲೆಕ್ಸಿಬಲ್ ಯೋಜನೆಯಾಗಿ ಆರಂಭಿಸಲಾಯಿತು. ನಂತರ, 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನ ಮೇರೆಗೆ ದೇಶಾದ್ಯಂತ ಸ್ವತಂತ್ರ ಪಠ್ಯಕ್ರಮ ಮತ್ತು ಪರೀಕ್ಷಾ ಮಂಡಳಿಯೊಂದಿಗೆ ಮುಕ್ತ ಶಿಕ್ಷಣವನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಅದರಂತೆ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ನವೆಂಬರ್ 1989 ರಲ್ಲಿ 'ನ್ಯಾಷನಲ್ ಓಪನ್ ಸ್ಕೂಲ್' ಅನ್ನು ಸ್ಥಾಪಿಸಿತು ಮತ್ತು ಸಿಬಿಎಸ್‌ಇಯ ಯೋಜನೆಯನ್ನು ಇದರೊಂದಿಗೆ ವಿಲೀನಗೊಳಿಸಿತು. 1990ರ ಹೊತ್ತಿಗೆ ಇದಕ್ಕೆ ವಿದ್ಯಾರ್ಥಿಗಳನ್ನು ನೋಂದಾಯಿಸುವ, ಪರೀಕ್ಷಿಸುವ ಮತ್ತು ಪ್ರಮಾಣಪತ್ರ ನೀಡುವ ಸ್ವಾಯತ್ತ ಅಧಿಕಾರವನ್ನು ನೀಡಲಾಯಿತು. ತದನಂತರ, ಜುಲೈ 2002 ರಲ್ಲಿ ಇದರ ಹೆಸರನ್ನು 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್' ಎಂದು ಮರುನಾಮಕರಣ ಮಾಡಲಾಗಿದ್ದು, ಇದು ಸಾಂಪ್ರದಾಯಿಕ ಶಿಕ್ಷಣಕ್ಕೆ ಪರ್ಯಾಯವಾಗಿ, ಆದ್ಯತೆಯುಳ್ಳ ವಿದ್ಯಾರ್ಥಿ ಸಮೂಹದ ಅಗತ್ಯಕ್ಕೆ ತಕ್ಕಂತೆ ಮುಕ್ತ ಕಲಿಕೆಯ ಮೂಲಕ ಗುಣಮಟ್ಟದ ನಿರಂತರ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ
ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಯ 10 ಮತ್ತು 12ನೇ ತರಗತಿಗಳ ಆನ್‌ಲೈನ್ ದಾಖಲಾತಿ ಪ್ರಕ್ರಿಯೆ, ಲಭ್ಯವಿರುವ ವಿವಿಧ ಕೋರ್ಸ್‌ಗಳು, ನಿಗದಿತ ಶುಲ್ಕದ ವಿವರಗಳು ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕುರಿತು ಸಂಪೂರ್ಣ ಮತ್ತು ಅಧಿಕೃತ ಮಾಹಿತಿಗಾಗಿ ವಿದ್ಯಾರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ
www.nios.ac.inಗೆ ಭೇಟಿ ನೀಡಬಹುದಾಗಿದೆ.