Nightclub tragedy 
ದೇಶ

ನೈಟ್‌ಕ್ಲಬ್ ದುರಂತ: ಬಿರ್ಚ್ ಬೈ ರೋಮಿಯೋ ಲೇನ್ ಸಹ ಮಾಲೀಕನೊಬ್ಬನ ಬಂಧನ; ಪರಾರಿಯಾಗಿರುವ ಲೂತ್ರಾ ಬ್ರದರ್ಸ್ | Nightclub tragedy

ಪಣಜಿ: ಕಳೆದ ಶನಿವಾರ 25 ಮಂದಿಯನ್ನು ಬಲಿ ಪಡೆದ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಪಟ್ಟಂತೆ, ಕ್ಲಬ್​ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ಗೋವಾ ಪೊಲೀಸರು ಮಂಗಳವಾರ (ಡಿ. 09) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಗೋವಾ ಪೊಲೀಸ್ ವಕ್ತಾರರು, ನಾವು ನೈಟ್‌ಕ್ಲಬ್‌ನ ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ಬಂಧಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರನೇ ವ್ಯಕ್ತಿ ಇವರು ಎಂದು ಹೇಳಿದ್ದಾರೆ.
ಈ ಹಿಂದೆ ಪೊಲೀಸ್ ತಂಡವು ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದಾಗ ಅವರು ಮನೆಯಲ್ಲಿರದೇ ತಲೆ ಮರೆಸಿಕೊಂಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಲ್‌ಒಸಿ ಹೊರಡಿಸಲಾಗಿತ್ತು. ಬಳಿಕ ದೆಹಲಿಯಲ್ಲೇ ಪತ್ತೆ ಮಾಡಿ ಗುಪ್ತಾ ಅವರನ್ನು ಬಂಧಿಸಲಾಯಿತು. ಗೋವಾಕ್ಕೆ ಕರೆತರಲು ಔಪಚಾರಿಕ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ನೈಟ್‌ಕ್ಲಬ್‌ನ ಇನ್ನಿಬ್ಬರು ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಪರಾರಿಯಾಗಿದ್ದು ಥೈಲ್ಯಾಂಡ್​ಗೆ ಪರಾರಿಯಾಗಿದ್ದು, ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಪೊಲೀಸರು ಇದುವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ.
ನೈಟ್‌ಕ್ಲಬ್‌ನ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋದಕ್, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್, ಉದ್ಯೋಗಿ ಭರತ್ ಕೊಹ್ಲಿ ಹಾಗೂ ಇಂದು ಸಹ ಮಾಲೀಕ ಅಜಯ್ ಗುಪ್ತಾರನ್ನು ಬಂಧಿಸಲಾಗಿದೆ.
ಶನಿವಾರ ಮಧ್ಯರಾತ್ರಿ ಉತ್ತರ ಗೋವಾದ ಅರ್ಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಗೋವಾ ಸರ್ಕಾರ ಕ್ಲಬ್​ ಅನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಇಡೀ ಕ್ಲಬ್​ ಅನ್ನೇ ನೆಲಸಮ ಮಾಡಿದೆ (ಏಜನ್ಸೀಸ್).