New Year's tragedy 
ದೇಶ

ಹೊಸ ವರ್ಷಾಚರಣೆಯ ಘೋರ ದುರಂತ; ಸ್ವಿಸ್​ ಬಾರ್​ನಲ್ಲಿ ಅಗ್ನಿ ಅವಘಡ; 47 ಸಾವು, 115 ಮಂದಿ ಗಾಯ | New Year's tragedy

ಸ್ವಿಟ್ಜರ್ಲೆಂಡ್‌: ಸ್ವಿಟ್ಜರ್ಲೆಂಡ್‌ನ ವಾಲೈಸ್ ಕ್ಯಾಂಟನ್‌ನಲ್ಲಿರುವ ಐಷಾರಾಮಿ ಸ್ಕೀ ರಿಸಾರ್ಟ್ ಟೌನ್ ಕ್ರಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆದ ಅಗ್ನಿ ಅವಘಡದಲ್ಲಿ 47 ಜನ ಮೃತಪಟ್ಟಿದ್ದು, 115 ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ(ಜ. 02) ವರದಿಯಾಗಿದೆ.
ಲೆ ಕಾನ್ಸ್ಟೆಲೇಷನ್ ಬಾರ್ ಅಂಡ್ ಲಾಂಜ್‌ನಲ್ಲಿ ಸ್ಥಳೀಯ ಸಮಯ ಸುಮಾರು(ಗುರುವಾರ) ರಾತ್ರಿ 1:30ಕ್ಕೆ (GMT 00:30) ಅಗ್ನಿ ಅವಘಡ ನಡೆದಿದೆ. ಆಧುನಿಕ ಸ್ವಿಸ್ ಇತಿಹಾಸದಲ್ಲಿ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. ಇನ್ನೂ ದೇಶವು ಐದು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಣೆ ಮಾಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಜ್ವಾಲೆಗಳು ವೇಗವಾಗಿ ಹರಡಿ ಕ್ಲಬ್ ಅನ್ನು ಹೊಗೆಯಿಂದ ತುಂಬಿಸಿ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಡಿತಗೊಳಿಸಿದ್ದರಿಂದ ಅವ್ಯವಸ್ಥೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಇನ್ನೂ ಫ್ರೆಂಚ್ ಮಾಧ್ಯಮ ಬಿಎಫ್‌ಎಂಟಿವಿ ಜೊತೆ ಮಾತನಾಡಿರುವ ಇಬ್ಬರು ಮಹಿಳೆಯರು, ಪುರುಷ ಬಾರ್ಟೆಂಡರ್ ಒಬ್ಬ ಮಹಿಳಾ ಸಹೋದ್ಯೋಗಿಯನ್ನು ತನ್ನ ಹೆಗಲ ಮೇಲೆ ಎತ್ತಿದಾಗ ಅವಳು ಬೆಳಗಿದ ಮೇಣದಬತ್ತಿಯೊಂದಿಗೆ ಬಾಟಲಿಯನ್ನು ಹಿಡಿದಿದ್ದಳು. ಬೆಂಕಿಯು ಮರದ ಸೀಲಿಂಗ್ ಅನ್ನು ಅಪ್ಪಳಿಸಿತು ಮತ್ತು ಬೆಂಕಿ ಸೆಕೆಂಡುಗಳಲ್ಲಿ ಬಾರ್​ ತುಂಬಾ ಹರಡಿತು ಎಂದು ಹೇಳಿದ್ದಾರೆ.

ಮೃತಪಟ್ಟವರ ಗುರುತು ಪತ್ತೆ ಹಚ್ಚುವಿಕೆ

ದುರಂತದಲ್ಲಿ ಮೃತಪಟ್ಟ 47 ಮಂದಿಯೂ ಬೆಂಕಿಯಲ್ಲಿ ಬೆಂದು ಹೋಗಿದ್ದು, ಗುರುತು ಹಿಡಿಯಲಾರದಷ್ಟು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಸುಟ್ಟ ಶವಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಗುರುತಿಸುವ ಕಾರ್ಯ ಕೆಲವು ದಿನಗಳನ್ನು ತೆಗದುಕೊಳ್ಳಬಹುದು. ಮೃತರಲ್ಲಿ ಹೆಚ್ಚಿನ ಜನ ಯುವಕರು ಎನ್ನಲಾಗಿದೆ.
ಕ್ರಾನ್ಸ್-ಮೊಂಟಾನಾ ಮೇಯರ್ ನಿಕೋಲಸ್ ಫೆರೌಡ್ ಮಾತನಾಡಿ, ನಮ್ಮ ಮೊದಲ ಉದ್ದೇಶ ಎಲ್ಲಾ ಶವಗಳಿಗೆ ಹೆಸರುಗಳನ್ನು ನೀಡುವುದು. ಮಾಹಿತಿಯು ತುಂಬಾ ಭಯಾನಕ ಮತ್ತು ಸೂಕ್ಷ್ಮವಾಗಿರುವುದರಿಂದ ನಾವು 100 ಪ್ರತಿಶತ ಖಚಿತವಾಗಿರದ ಹೊರತು ಕುಟುಂಬಗಳಿಗೆ ಏನನ್ನೂ ಹೇಳಲಾಗುವುದಿಲ್ಲ. ಗುರುತಿನ ಪ್ರಕ್ರಿಯೆಯು ನಿಧಾನ ಮತ್ತು ಸೂಕ್ಷ್ಮವಾಗಿರುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).