ಹೊರ್ಮುಜ್ ಜಲಸಂಧಿ ಸಂಘರ್ಷದ ನಡುವೆಯೇ ಕಚ್ಚಾ ತೈಲಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ಹದಿಮೂರು ತೈಲ ಉತ್ಪಾದಕ ರಾಷ್ಟ್ರಗಳ ಗುಂಪು 'ಒಪೆಕ್'ನಿಂದ (OPEC) ಯುಎಇ ಹೊರಬೀಳುವ ಐತಿಹಾಸಿಕ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದೆ. 59 ವರ್ಷಗಳ ಕಾಲ ಒಪೆಕ್ನಲ್ಲಿದ್ದ ಯುಎಇ, ಇದೇ ಮೇ 1ರಿಂದ ಈ ಗುಂಪಿನಲ್ಲಿ ಇರುವುದಿಲ್ಲ. ಹಾಗಾಗಿ, ತೈಲ ಬೆಲೆ ನಿಯಂತ್ರಣದ ಮೇಲೆ ಒಪೆಕ್ ಹೊಂದಿರುವ ಹಿಡಿತ ಇನ್ನು ಮುಂದೆ ಸಡಿಲವಾಗಲಿದೆ. ಮುಖ್ಯವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಪೂರೈಕೆ ಹೆಚ್ಚಲಿದ್ದು, ತೈಲ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ. ಇದರಿಂದ ಭಾರತಕ್ಕೂ ಲಾಭವಾಗಲಿದ್ದು, ತೈಲ ಆಮದಿನ ವೆಚ್ಚ ತಗ್ಗಲಿದೆ. ಪೂರೈಕೆಯನ್ನು ಕಡಿಮೆಗೊಳಿಸಿ, ಬೆಲೆ ಹೆಚ್ಚಿಸುವ ಒಪೆಕ್ ಪ್ರಯತ್ನಕ್ಕೂ ಕಡಿವಾಣ ಬೀಳಲಿದೆ. ರಷ್ಯಾದಂತೆ ಯುಎಇ ಕೂಡ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಸುವ ಸಾಧ್ಯತೆ ಇದ್ದು, ಜಾಗತಿಕ ಇಂಧನ ರಾಜಕೀಯ ಹೊಸ ತಿರುವು ಪಡೆದುಕೊಳ್ಳಲಿದೆ. ತೈಲ ಮಾರಾಟ ಮತ್ತು ಪೂರೈಕೆಯ ಹೊಸ ದಾರಿಗಳು ತೆರೆದುಕೊಳ್ಳಲಿವೆ.
ಒಪೆಕ್ (Organization of the Petroleum Exporting Countries) ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರಭಾವಶಾಲಿ ಸಂಸ್ಥೆಯಾಗಿದೆ. ಇರಾಕ್ನ ಬಾಗ್ದಾದ್ನಲ್ಲಿ 1960ರ ಸೆಪ್ಟೆಂಬರ್ನಲ್ಲಿ ನಡೆದ ಸಮ್ಮೇಳನದಲ್ಲಿ ಒಪೆಕ್ ಸ್ಥಾಪನೆಯಾಯಿತು. ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ಈ ಐದು ರಾಷ್ಟ್ರಗಳು ಸೇರಿ ಈ ಸಂಸ್ಥೆಯನ್ನು ಹುಟ್ಟುಹಾಕಿದವು. ಪ್ರಸ್ತುತ ಇದು 13 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಯುಎಇ ಹೊರಬೀಳುವ ಮೂಲಕ ಈ ಸಂಖ್ಯೆ 12ಕ್ಕೆ ಇಳಿಕೆಯಾಗಿದೆ. 1960ಕ್ಕಿಂತ ಮೊದಲು ‘ಸೆವೆನ್ ಸಿಸ್ಟರ್ಸ್’ ಎಂದು ಕರೆಯಲ್ಪಡುತ್ತಿದ್ದ ಬಹುರಾಷ್ಟ್ರಗಳ ತೈಲ ಕಂಪನಿಗಳು ತೈಲ ಬೆಲೆ ಮತ್ತು ಉತ್ಪಾದನೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದವು. ಈ ಕಂಪನಿಗಳ ಏಕಸ್ವಾಮ್ಯವನ್ನು ಮುರಿಯಲು ಮತ್ತು ತೈಲ ಉತ್ಪಾದಿಸುವ ರಾಷ್ಟ್ರಗಳ ಹಿತಾಸಕ್ತಿಯನ್ನು ರಕ್ಷಿಸಲು ಒಪೆಕ್ ಅಸ್ತಿತ್ವಕ್ಕೆ ಬಂತು. ಇದರ ಪ್ರಧಾನ ಕಚೇರಿಯು ಆಸ್ಟ್ರಿಯಾದ ವಿಯೆನ್ನಾದಲ್ಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಾರ್ವಭೌಮತ್ವವನ್ನು ಸಾಧಿಸಲು ಮತ್ತು ಜಾಗತಿಕ ಶಕ್ತಿಯ ಮೂಲಗಳ ಮೇಲೆ ನಿಯಂತ್ರಣ ಹೊಂದಲು ಒಪೆಕ್ ಪ್ರಮುಖ ವೇದಿಕೆಯಾಗಿದೆ. 2026ರ ಅಂತ್ಯದವರೆಗೆ ದಿನಕ್ಕೆ 36.5 ಲಕ್ಷ ಬ್ಯಾರೆಲ್ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಒಪೆಕ್ ಮುಂದುವರಿಸಿದೆ. ಒಪೆಕ್ ಉತ್ಪಾದನೆಯನ್ನು ಕಡಿಮೆ ಮಾಡಿದಾಗ ತೈಲ ಬೆಲೆ ಹೆಚ್ಚುತ್ತದೆ; ಉತ್ಪಾದನೆ ಹೆಚ್ಚಿಸಿದಾಗ ಬೆಲೆ ಕಡಿಮೆಯಾಗುತ್ತದೆ. ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ತೈಲ ಬೆಲೆ ನಿರ್ಧಾರ: ಒಪೆಕ್ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಎಷ್ಟು ತೈಲವನ್ನು ಉತ್ಪಾದಿಸಬೇಕು ಎಂದು ನಿರ್ಧರಿಸುತ್ತವೆ. ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಬೆಲೆಯನ್ನು ಹೆಚ್ಚಿಸುವ ಅಥವಾ ಉತ್ಪಾದನೆ ಹೆಚ್ಚಿಸಿ ಬೆಲೆ ತಗ್ಗಿಸುವ ಶಕ್ತಿ ಈ ಸಂಸ್ಥೆಗಿದೆ.
ಸ್ಥಿರ ಮಾರುಕಟ್ಟೆ: ತೈಲ ಗ್ರಾಹಕರಿಗೆ ನಿರಂತರವಾಗಿ ತೈಲ ಪೂರೈಕೆಯಾಗುವಂತೆ ನೋಡುವುದು ಮತ್ತು ತೈಲ ಮಾರುಕಟ್ಟೆಯಲ್ಲಿ ಅನಗತ್ಯ ಏರಿಳಿತವಾಗದಂತೆ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಇದರ ಮುಖ್ಯ ಉದ್ದೇಶ.
ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ: ವಿಶ್ವದ ಒಟ್ಟು ತೈಲ ನಿಕ್ಷೇಪದ ಶೇ. 80ರಷ್ಟು ಭಾಗ ಒಪೆಕ್ ರಾಷ್ಟ್ರಗಳಲ್ಲಿದೆ. ತೈಲ ಉತ್ಪಾದನೆಯಲ್ಲಿ ಶೇಕಡ 38ರಷ್ಟು, ಅಂದರೆ ದಿನಕ್ಕೆ ಸರಿಸುಮಾರು 3.5 ಕೋಟಿ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ಉತ್ಪಾದನೆಯನ್ನು ಇದು ನಿಯಂತ್ರಿಸುತ್ತದೆ. ಆದ್ದರಿಂದ, ಇಲ್ಲಿನ ರಾಜಕೀಯ ಅಥವಾ ಆರ್ಥಿಕ ನಿರ್ಧಾರಗಳು ಇಡೀ ವಿಶ್ವದ ಪೆಟ್ರೋಲ್, ಡೀಸೆಲ್ ಬೆಲೆ ಮತ್ತು ಹಣದುಬ್ಬರದ ಮೇಲೆ ನೇರ ಪರಿಣಾಮ ಬೀರುತ್ತವೆ.
ಒಪೆಕ್ ಪ್ಲಸ್: ಇತ್ತೀಚಿನ ವರ್ಷಗಳಲ್ಲಿ ಒಪೆಕ್ ರಾಷ್ಟ್ರಗಳು ರಷ್ಯಾದಂತಹ ಇತರ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳೊಂದಿಗೆ ಸೇರಿ ‘ಒಪೆಕ್ ಪ್ಲಸ್’ ಎಂಬ ಗುಂಪನ್ನು ಮಾಡಿಕೊಂಡಿವೆ. ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಈ ರಾಷ್ಟ್ರಗಳ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪೆಕ್ ಮತ್ತು ಒಪೆಕ್ ಪ್ಲಸ್ನಿಂದ ಹೊರಬರುವ ನಿರ್ಧಾರವನ್ನು ಪ್ರಕಟಿಸಿದ್ದು, ನಾಳೆಯಿಂದ (ಮೇ 1) ಜಾರಿಗೆ ಬರಲಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಇದು ಗಂಭೀರ ಪರಿಣಾಮಗಳನ್ನು ಬೀರಲಿದೆ.
ತೈಲ ಉತ್ಪಾದನೆ ಹೆಚ್ಚಳ, ಬೆಲೆ ಇಳಿಕೆ: ಒಪೆಕ್ ಸದಸ್ಯ ರಾಷ್ಟ್ರವಾಗಿ ಯುಎಇ ಉತ್ಪಾದನಾ ಮಿತಿಯನ್ನು ಹೆಚ್ಚಿಸುವಂತೆ ಹಲವು ಬಾರಿ ಆಗ್ರಹಿಸಿತ್ತಾದರೂ, ಯುಎಇ ಪ್ರಸ್ತಾವನೆಗೆ ಸೌದಿ ಅರೇಬಿಯಾ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಈಗ ಈ ಉತ್ಪಾದನಾ ಮಿತಿಯಿಂದ ಯುಎಇ ಹೊರಬಂದಿರುವುದರಿಂದ, ತನ್ನ ತೈಲ ಉತ್ಪಾದನೆಯನ್ನು ದಿನಕ್ಕೆ 10 ಲಕ್ಷ ಬ್ಯಾರೆಲ್ಗಳಷ್ಟು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ತೈಲ ಪೂರೈಕೆಯಾಗುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜಾಗತಿಕವಾಗಿ ಇಳಿಕೆಯಾಗುವ ನಿರೀಕ್ಷೆಯಿದೆ.
ಒಪೆಕ್ ಸಂಘಟನೆ ಬಲ ಕುಸಿತ: ಯುಎಇ ಒಪೆಕ್ನ ಮೂರನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿತ್ತು. ಸೌದಿ ಅರೇಬಿಯಾದ ನಂತರ ಹೆಚ್ಚಿನ ತೈಲ ಉತ್ಪಾದನಾ ಸಾಮರ್ಥ್ಯ ಹೊಂದಿರುವ ರಾಷ್ಟ್ರ ಹೊರಹೋಗಿರುವುದು ಒಪೆಕ್ನ ಮಾರುಕಟ್ಟೆ ನಿಯಂತ್ರಣ ಶಕ್ತಿಯನ್ನು ಕುಗ್ಗಿಸಿದೆ. ಒಪೆಕ್ನ ಜಾಗತಿಕ ಪೂರೈಕೆ ಹತೋಟಿ ಶೇಕಡ 30ರಿಂದ 26ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
ಮಾರುಕಟ್ಟೆಯಲ್ಲಿ ಅನಿಶ್ಚಿತತೆ: ಯುಎಇ ಹಠಾತ್ ನಿರ್ಗಮನವು ಸೌದಿ ಅರೇಬಿಯಾ ಮತ್ತು ಇತರ ಸದಸ್ಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿದೆ. ಇದು ತೈಲ ಮಾರುಕಟ್ಟೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಬಹುದು ಮತ್ತು ತೈಲ ಬೆಲೆಗಳಲ್ಲಿ ಏರಿಳಿತಕ್ಕೆ ಕಾರಣವಾಗಬಹುದು.
ಭಾರತವು ತನ್ನ ತೈಲ ಅಗತ್ಯದ ಶೇ. 90ರಷ್ಟು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ. 45ರಷ್ಟು ಒಪೆಕ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಯುಎಇ ಒಪೆಕ್ನ ಉತ್ಪಾದನಾ ಮಿತಿಯಿಂದ ಹೊರಬಂದಿರುವುದರಿಂದ, ಹೆಚ್ಚಿನ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದರಿಂದ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಲಿದ್ದು, ಭಾರತದ ವಿದೇಶಿ ವಿನಿಮಯದ ಮೇಲಿನ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಯುಎಇ ಭಾರತಕ್ಕೆ ಭೌಗೋಳಿಕವಾಗಿ ಹತ್ತಿರದಲ್ಲಿದೆ. ಅಟ್ಲಾಂಟಿಕ್ ರಾಷ್ಟ್ರಗಳಿಗೆ ಹೋಲಿಸಿದರೆ ಯುಎಇನಿಂದ ತೈಲ ತರಿಸಿಕೊಳ್ಳಲು ಕಡಿಮೆ ಸಮಯ ಮತ್ತು ಸಾರಿಗೆ ವೆಚ್ಚ ತಗುಲುತ್ತದೆ. ಈಗ ಯುಎಇ ಮುಕ್ತವಾಗಿ ತೈಲ ಪೂರೈಸುವುದರಿಂದ ಭಾರತಕ್ಕೆ ಸ್ಥಿರವಾದ ಇಂಧನ ಪೂರೈಕೆ ಖಚಿತವಾಗುತ್ತದೆ. ತೈಲ ಬೆಲೆ ಇಳಿಕೆಯಾದರೆ ಸಾರಿಗೆ ವೆಚ್ಚ ಕಡಿಮೆಯಾಗುತ್ತದೆ. ಇದು ನೇರವಾಗಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕಾರಣವಾಗಿ, ದೇಶದಲ್ಲಿ ಹಣದುಬ್ಬರವನ್ನು ಹತೋಟಿಯಲ್ಲಿಡಲು ಸರ್ಕಾರಕ್ಕೆ ನೆರವಾಗುತ್ತದೆ.
ಯುಎಇ ತನ್ನ ತೈಲ ಸಂಪನ್ಮೂಲಗಳನ್ನು ಬೇಗನೆ ಹಣವಾಗಿ ಪರಿವರ್ತಿಸಿ (Monetizing reserves), ಆ ಹಣವನ್ನು ಭವಿಷ್ಯದ ಹಸಿರು ಇಂಧನ ಮತ್ತು ತಂತ್ರಜ್ಞಾನ ಯೋಜನೆಗಳಿಗೆ ಹೂಡಿಕೆ ಮಾಡಲು ಬಯಸಿದೆ. ಒಪೆಕ್ನ ಮಿತಿಗಳು ಈ ಆರ್ಥಿಕ ವೇಗಕ್ಕೆ ಅಡ್ಡಿಯಾಗಿದ್ದವು.
ಭಾರತ ಮತ್ತು ಯುಎಇ ಈಗಾಗಲೇ ಕಾರ್ಯತಂತ್ರದ ಪಾಲುದಾರರಾಗಿವೆ. ಒಪೆಕ್ನ ನಿರ್ಬಂಧಗಳಿಲ್ಲದ ಕಾರಣ, ಭಾರತವು ಯುಎಇನೊಂದಿಗೆ ನೇರವಾಗಿ ಮಾತುಕತೆ ನಡೆಸಿ ರೂಪಾಯಿಯಲ್ಲಿ ತೈಲ ಖರೀದಿಸಬಹುದು ಮತ್ತು ವ್ಯವಹಾರವನ್ನು ಮತ್ತಷ್ಟು ವೇಗಗೊಳಿಸಬಹುದು. ಇದು ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಭಾರತವು ಜಾಗತಿಕ ಪೆಟ್ರೋಕೆಮಿಕಲ್ ಉತ್ಪಾದನಾ ಕೇಂದ್ರವಾಗುವ ಗುರಿ ಹೊಂದಿದೆ. ಯುಎಇನಿಂದ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಸುಲಭವಾಗಿ ದೊರೆಯುವುದರಿಂದ ಭಾರತದ ಸಂಸ್ಕರಣಾಗಾರಗಳಿಗೆ ಮತ್ತು ಪೆಟ್ರೋಕೆಮಿಕಲ್ ಉದ್ಯಮಕ್ಕೆ ಹೆಚ್ಚಿನ ಬಲ ಸಿಗಲಿದೆ.
ಭಾರತಕ್ಕೆ ಇದು ಸಕಾರಾತ್ಮಕ ಬೆಳವಣಿಗೆ. ಭಾರತವು ತನ್ನ ತೈಲ ಆಮದಿನ ಶೇ. 10ರಷ್ಟು ಭಾಗವನ್ನು ಯುಎಇನಿಂದ ಪಡೆಯುತ್ತದೆ. ಯುಎಇ ಉತ್ಪಾದನೆ ಹೆಚ್ಚಿಸುವುದರಿಂದ ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಮತ್ತು ಸುಲಭವಾಗಿ ತೈಲ ದೊರೆಯಲಿದ್ದು, ದೇಶದ ಇಂಧನ ಭದ್ರತೆ ಬಲಗೊಳ್ಳಲಿದೆ. ಇದು ಅರಬ್ ರಾಷ್ಟ್ರಗಳೊಂದಿಗೆ ನೇರ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ದೊಡ್ಡ ಅವಕಾಶವನ್ನು ನೀಡಿದೆ.