- ಬಾಡಿಗೆದಾರರು ಮತ್ತು ಮನೆ ಮಾಲೀಕರ ಗಮನಕ್ಕೆ
- ಹೊಸ ಬಾಡಿಗೆ ನಿಯಮ 2025 ಪರಿಚಯಿಸಿದ ಕೇಂದ್ರ ಸರ್ಕಾರ
- ಹೊಸ ನಿಯಮದಿಂದ ಬಾಡಿಗೆದಾರರಿಗೆ ಒಂದಿಷ್ಟು ರಿಲೀಫ್
- ಮನೆ ಮಾಲೀಕರಿಗೂ ಸಿಗಲಿದೆ ಕೆಲವೊಂದು ಪ್ರಯೋಜನ
ನವದೆಹಲಿ: ಮುಂಬೈ, ದೆಹಲಿ, ಬೆಂಗಳೂರು ಹಾಗೂ ಚೆನ್ನೈನಂಥ ಮಹಾನಗರಗಳು ಕೋಟ್ಯಂತರ ಮಂದಿಗೆ ಬದುಕಿನ ಆಸರೆಯಾಗಿದೆ. ಬದುಕು ಕಟ್ಟಿಕೊಳ್ಳಲು ಅಥವಾ ಬದುಕಿನ ಬಂಡಿಯನ್ನು ಸಾಗಿಸಲು ನಗರಗಳನ್ನು ಅರಸಿ ಪ್ರತಿನಿತ್ಯ ಸಾವಿರಾರು ಕುಟುಂಬಗಳು ಬರುತ್ತವೆ. ಆದರೆ, ಇಂತಹ ದೊಡ್ಡ ನಗರಗಳಲ್ಲಿ ಕಾಡುವ ಪ್ರಮುಖ ಸಮಸ್ಯೆ ಏನೆಂದರೆ ಬಾಡಿಗೆಯ ಮೊತ್ತ. ಹೌದು, ಮನೆಗಳೇನೋ ಸಾಕಷ್ಟಿವೆ ಆದರೆ, ಅದ್ಯಾವುದು ಕೈಗೆಟಕುವುದಿಲ್ಲ ಅನ್ನೋದೆ ಜನ ಸಾಮಾನ್ಯರ ಅಳಲು. ಬಾಡಿಗೆ ವಿಚಾರದಲ್ಲಿ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದ್ದರೂ ಅದ್ಯಾವುದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಮಾಲೀಕರು ತಮ್ಮ ಮನಸೋ ಇಚ್ಛೆ ಬಾಡಿಗೆ ವಿಧಿಸುತ್ತಿದ್ದಾರೆ. ಇಷ್ಟೇ ಅಲ್ಲ ಕೆಲವೊಮ್ಮೆ ಆ ಮೊತ್ತ ಈ ಮೊತ್ತ ಅಂತ ಹೆಚ್ಚುವರಿ ಹಣ ಕೂಡ ಪೀಕುತ್ತಾರೆ. ಹೀಗಾಗಿ, ನಗರ ಪ್ರದೇಶಗಳಲ್ಲಿ ಬಾಡಿಗೆ ಕಟ್ಟಿ ಬದುಕುವುದೇ ದೊಡ್ಡ ಸವಾಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಹೊಸದಾಗಿ ಪರಿಚಯಿಸಿರುವ ಬಾಡಿಗೆ ನಿಯಮಗಳು ( New Rent Rules ) ಬಾಡಿಗೆದಾರರಿಗೆ ಒಂದಿಷ್ಟು ರಿಲೀಫ್ ನೀಡಲಿದೆ.
ನಮ್ಮಲ್ಲಿ ಎರಡು ರೀತಿಯ ಬಾಡಿಗೆ ಇದೆ. ಒಂದು ವಸತಿ ಉದ್ದೇಶಕ್ಕಾಗಿ ಮತ್ತು ಇನ್ನೊಂದು ವಾಣಿಜ್ಯ ಉದ್ದೇಶಕ್ಕಾಗಿ. ಈ ಎರಡರ ಮೊತ್ತದಲ್ಲಿ ಭಾರಿ ವ್ಯತ್ಯಾಸ ಇರುತ್ತದೆ. ಇನ್ನು ಬಾಡಿಗೆಗಳು ಸ್ಥಳದಿಂದ ಸ್ಥಳಕ್ಕೆ ಹಾಗೂ ಮೂಲ ಸೌಕರ್ಯಗಳ ಆಧಾರದ ಮೇಲೆ ಬದಲಾಗುತ್ತಲೇ ಇರುತ್ತವೆ. ಆದರೆ, ಮಹಾನಗರಗಳಲ್ಲಿ ಬಾಡಿಗೆ ಹಣ ಮತ್ತು ಭದ್ರತಾ ಠೇವಣಿಯಾಗಿ ಪಡೆಯುವ ಹಣ ಎರಡೂ ಕೂಡ ದುಬಾರಿಯಾಗಿದೆ. ಸರ್ಕಾರ ನಿಗದಿ ಮಾಡಿದ ಮೊತ್ತಕ್ಕಿಂತಲೂ ಅಧಿಕ ಹಣವನ್ನು ಮಾಲೀಕರು ಪಡೆಯುತ್ತಾರೆ. ಆದರೆ, ಹೊಸದಾಗಿ ಪರಿಚಯಿಸಿರುವ ಹೊಸ ಬಾಡಿಗೆ ಕಾಯ್ದೆ- 2025 ( New Rent Agreement ) ಜನ ಸಾಮಾನ್ಯರಿಗೆ ಬಾಡಿಗೆ ಪ್ರಕ್ರಿಯೆಯನ್ನು ತುಂಬಾ ಸರಳ ಮಾಡುವುದರೊಂದಿಗೆ ಒಂದಿಷ್ಟು ರಿಲೀಫ್ ಕೂಡ ನೀಡಿದೆ. ಅಲ್ಲದೆ, ಅಗ್ರಿಮೆಂಟ್ ವಿಚಾರದಲ್ಲಿ ಏನಾದರೂ ಉಲ್ಲಂಘನೆಯಾದರೆ, ದಂಡ ಕೂಡ ವಿಧಿಸಲಾಗುತ್ತದೆ.
ಹೊಸ ಬಾಡಿಗೆ ಕಾಯ್ದೆಯು ಸರಳ ಬಾಡಿಗೆ ಪ್ರಕ್ರಿಯೆ, ಒಪ್ಪಂದಗಳನ್ನು ಪ್ರಮಾಣೀಕರಿಸುವುದು ಮತ್ತು ವಿವಾದಗಳ ತ್ವರಿತ ಪರಿಹಾರವನ್ನು ಒಳಗೊಂಡಿದೆ. ಮಾದರಿ ಬಾಡಿಗೆ ಕಾಯ್ದೆ (MTA) ಮತ್ತು ಇತ್ತೀಚಿನ ಕೇಂದ್ರ ಬಜೆಟ್ ನಿಬಂಧನೆಗಳ ಆಧಾರದ ಮೇಲೆ ಹೊಸದಾಗಿ ಪರಿಚಯಿಸಿರುವ ಮನೆ ಬಾಡಿಗೆ ನಿಯಮಗಳು 2025, ರಚನಾತ್ಮಕ ಮತ್ತು ಊಹಿಸಬಹುದಾದಂತಹ ಒಂದು ಬಾಡಿಗೆ ಚೌಕಟ್ಟನ್ನು ರಚಿಸುವ ಗುರಿ ಹೊಂದಿದೆ. ಈ ಹೊಸ ಕಾಯಿದೆಯ ಅಡಿಯಲ್ಲಿ, ಎಲ್ಲ ಬಾಡಿಗೆ ಒಪ್ಪಂದಗಳನ್ನು ಸಹಿ ಮಾಡಿದ ಎರಡು ತಿಂಗಳೊಳಗೆ ರಾಜ್ಯ ಆಸ್ತಿ ನೋಂದಣಿ ಪೋರ್ಟಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಸ್ಥಳೀಯ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಲೇಬೇಕು. ಒಂದು ವೇಳೆ ನೋಂದಾಯಿಸಲು ವಿಫಲವಾದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಬಾಡಿಗೆದಾರರಿಗೆ ಪ್ರಮುಖ ಬದಲಾವಣೆಗಳು
ಕಡ್ಡಾಯ ನೋಂದಣಿ: ದಂಡವನ್ನು ತಪ್ಪಿಸಲು ಬಾಡಿಗೆ ಒಪ್ಪಂದಗಳನ್ನು ಎರಡು ತಿಂಗಳೊಳಗೆ ಔಪಚಾರಿಕವಾಗಿ ನೋಂದಾಯಿಸಬೇಕು.
ಮಿತಿಗೊಳಿಸಿದ ಭದ್ರತಾ ಠೇವಣಿ: ವಸತಿ ಉದ್ದೇಶಕ್ಕಾಗಿ ಪಡೆಯುವ ಮನೆಗಳಿಗೆ ಎರಡು ತಿಂಗಳ ಬಾಡಿಗೆ ಮೊತ್ತ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಪಡೆಯುವ ಆಸ್ತಿಗಳಿಗೆ ಆರು ತಿಂಗಳ ಬಾಡಿಗೆ ಮೊತ್ತವನ್ನು ಭದ್ರತಾ ಠೇವಣಿಯಾಗಿ ಸೀಮಿತಗೊಳಿಸಲಾಗಿದೆ.
ಊಹಿಸಬಹುದಾದ ಬಾಡಿಗೆ ಹೆಚ್ಚಳ: ಇನ್ನು ಬಾಡಿಗೆಯನ್ನು ಹೆಚ್ಚಿಸುವಾಗ ಮನಸೋ ಇಚ್ಛೆ ಹೆಚ್ಚಳ ಮಾಡುವಂತಿಲ್ಲ. ಬದಲಾಗಿ, ನಿಗದಿತ ನಿಯಮಗಳನ್ನು ಪಾಲಿಸಬೇಕಿದೆ. ಅಲ್ಲದೆ, ಬಾಡಿಗೆದಾರರಿಗೆ ಮುಂಚಿತವಾಗಿಯೇ ಮಾಲೀಕರು ಸೂಚನೆ ನೀಡಬೇಕು.
ನ್ಯಾಯಯುತ ಹೊರಹಾಕುವಿಕೆ: ಮನೆಯನ್ನು ಖಾಲಿ ಮಾಡಿಸುವಾಗ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಬಾಡಿಗೆದಾರರನ್ನು ಹಠಾತ್ತನೆ ಮನೆ ಖಾಲಿ ಮಾಡುವಂತೆ ಹೇಳುವಂತಿಲ್ಲ. ಖಾಲಿ ಮಾಡುವಾಗ ನ್ಯಾಯಯುತವಾಗಿ ನಡೆಸಿಕೊಳ್ಳಬೇಕು.
ತ್ವರಿತ ವಿವಾದ ಪರಿಹಾರ: ಹೊಸ ಬಾಡಿಗೆ ಕಾಯ್ದೆಯಲ್ಲಿ ಬಾಡಿಗೆ ಸಂಬಂಧ ಯಾವುದೇ ವಿವಾದವು 60 ದಿನಗಳಲ್ಲಿ ಪರಿಹಾರವಾಗಲಿದೆ. ಇದಕ್ಕಾಗಿ ವಿಶೇಷ ಬಾಡಿಗೆ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ.
ಮಾಲೀಕರಿಗಾಗುವ ಪ್ರಯೋಜನಗಳು
ಹೆಚ್ಚಿನ ಟಿಡಿಎಸ್ ವಿನಾಯಿತಿ: ಬಾಡಿಗೆ ಆದಾಯದ ಟಿಡಿಎಸ್ ಮಿತಿಯನ್ನು ವರ್ಷಕ್ಕೆ 2.4 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗಳಿಗೆ ಏರಿಕೆಯಾಗಿದ್ದು, ಇದರಿಂದ ನಗದು ಹರಿವು ಸುಧಾರಣೆಯಾಗಿದೆ.
ಸರಳೀಕೃತ ತೆರಿಗೆ: ಹೊಸ ಬಾಡಿಗೆ ನಿಯಮದ ಪ್ರಕಾರ, ಬಾಡಿಗೆ ಆದಾಯವು ಈಗ 'ವಸತಿ ಆಸ್ತಿಯಿಂದ ಬರುವ ಆದಾಯ'ದ ಅಡಿಯಲ್ಲಿ ಬರುತ್ತದೆ.
ಬಾಡಿಗೆ ಪಾವತಿ ಮಾಡದಿದ್ದಾಗ ತ್ವರಿತ ಕ್ರಮ: ಬಾಡಿಗೆದಾರರು ಮೂರು ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಬಾಡಿಗೆ ಹಣ ನೀಡುವಲ್ಲಿ ವಿಫಲವಾದರೆ, ಅಂತಹ ಪ್ರಕರಣಗಳನ್ನು ತ್ವರಿತ ಪರಿಹಾರಕ್ಕಾಗಿ ಬಾಡಿಗೆ ನ್ಯಾಯಮಂಡಳಿಗಳಿಗೆ ವರ್ಗಾಯಿಸಬಹುದು.
ಆಸ್ತಿ ರಿನೇವಲ್ಗೆ ಪ್ರೋತ್ಸಾಹಧನ: ಜನ ಸಾಮಾನ್ಯರ ಕೈಗೆಟುಕುವ ಬಾಡಿಗೆಯನ್ನು ಕಾಯ್ದುಕೊಳ್ಳುವ ಅಥವಾ ಇಂಧನ-ಸಮರ್ಥ ಸುಧಾರಣೆಗಳನ್ನು ತಮ್ಮ ಆಸ್ತಿಯಲ್ಲಿ ಸೇರಿಸಿಕೊಳ್ಳುವ ಭೂಮಾಲೀಕರಿಗೆ ರಾಜ್ಯ ಯೋಜನೆಗಳ ಅಡಿಯಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗುತ್ತಾರೆ.
ಬಾಡಿಗೆ ಒಪ್ಪಂದ ಅಥವಾ ರೆಂಟ್ ಅಗ್ರಿಮೆಂಟ್ ನೋಂದಣಿ ಮಾಡುವುದು ಹೇಗೆ?
* ನಿಮ್ಮ ರಾಜ್ಯದ ಆಸ್ತಿ ನೋಂದಣಿ ಪೋರ್ಟಲ್‌ಗೆ ಭೇಟಿ ನೀಡಿ
* ಎರಡೂ ಪಕ್ಷಗಳ ಅಂದರೆ, ಬಾಡಿಗೆದಾರ ಮತ್ತು ಮನೆ ಮಾಲೀಕನ ಗುರುತಿನ ಚೀಟಿಗಳನ್ನು ಅಪ್‌ಲೋಡ್ ಮಾಡಿ
* ಬಾಡಿಗೆಯ ವಿವರಗಳನ್ನು ಭರ್ತಿ ಮಾಡಿ
* ಒಪ್ಪಂದಕ್ಕೆ ಇ-ಸಹಿ ಮಾಡಿ ಮತ್ತು ಸಲ್ಲಿಸಿ
ಬಾಡಿಗೆ ವ್ಯವಹಾರಗಳನ್ನು ಎಲ್ಲರಿಗೂ ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತವಾಗಿಸುವತ್ತ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಹೀಗಾಗಿ ನಿಮ್ಮ ನಡುವೆ ಈ ವರ್ಷ ಯಾರಾದರೂ ಹೊಸದಾಗಿ ಬಾಡಿಗೆ ಪಡೆಯುತ್ತಿದ್ದರೆ ಅಥವಾ ಈಗ ಇರುವ ಮನೆಯನ್ನು ಖಾಲಿ ಮಾಡಿ ಮತ್ತೊಂದು ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಅವರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ, (ಏಜೆನ್ಸೀಸ್).