House Of The Dragon ಸಾಂದರ್ಭಿಕ ಚಿತ್ರ
House Of The Dragon: ವಿಶ್ವಪ್ರಸಿದ್ಧ 'ಎಚ್‌ಬಿಒ' ಸಂಸ್ಥೆಯ 'ಹೌಸ್ ಆಫ್ ದಿ ಡ್ರ್ಯಾಗನ್' ಸರಣಿಯ ಕಾಲ್ಪನಿಕ ಜಗತ್ತು ಈಗ ನೈಜ ವಿಜ್ಞಾನ ಲೋಕದಲ್ಲೂ ಸದ್ದು ಮಾಡುತ್ತಿದೆ. ಪಶ್ಚಿಮ ಥೈಲ್ಯಾಂಡ್‌ನ ಎತ್ತರದ ಪರ್ವತ ಕಾಡುಗಳಲ್ಲಿ ವಿಜ್ಞಾನಿಗಳು ಅಪರೂಪ ಪ್ರಭೇದದ ಹಲ್ಲಿಯೊಂದನ್ನು ಪತ್ತೆಹಚ್ಚಿದ್ದು, ಅದಕ್ಕೆ ಈ ಜನಪ್ರಿಯ ಧಾರಾವಾಹಿಯಲ್ಲಿ ಬರುವ ರಾನಿರಾ ಟಾರ್ಗೇರಿಯನ್ ಎಂಬ ಪಾತ್ರದ ಸವಾರಿಯ ಡ್ರ್ಯಾಗನ್ 'ಸೈರಾಕ್ಸ್' ಎಂಬ ಹೆಸರನ್ನು ಇಟ್ಟಿದ್ದಾರೆ.
ಪ್ರಸಿದ್ಧ ಜೀವಶಾಸ್ತ್ರ ನಿಯತಕಾಲಿಕೆ 'ಝೂಕೀಸ್'ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ ಈ ಹೊಸ ಜೀವಿಯ ಶೋಧನೆ ಮತ್ತು ವಿವರಗಳನ್ನು ಜಗತ್ತಿಗೆ ಪರಿಚಯಿಸಲಾಗಿದೆ. ವಿಜ್ಞಾನಿಗಳು ಈ ಹೊಸ ಹಲ್ಲಿಯ ತಳಿಗೆ ವೈಜ್ಞಾನಿಕವಾಗಿ 'ಅಕಾಂಥೋಸೌರಾ ಸೈರಾಕ್ಸ್' (Acanthosaura syrax) ಎಂದು ಹೆಸರಿಸಿದ್ದು, ಆಡುಭಾಷೆಯಲ್ಲಿ ಇದನ್ನು 'ಸೈರಾಕ್ಸ್ ಮೌಂಟೇನ್ ಹಾರ್ನ್ಡ್ ಡ್ರ್ಯಾಗನ್' ಎಂದು ಕರೆಯಲು ಶಿಫಾರಸು ಮಾಡಿದ್ದಾರೆ.
ಈ ವಿಶೇಷ ಜೀವಿಗೆ 'ಸೈರಾಕ್ಸ್' ಎಂಬ ಹೆಸರು ಬರಲು ಹಲವು ಕುತೂಹಲಕಾರಿ ಸಾಮ್ಯತೆಗಳೇ ಕಾರಣವಾಗಿವೆ. ತೆರೆಯ ಮೇಲಿನ 'ಸೈರಾಕ್ಸ್' ಡ್ರ್ಯಾಗನ್ ಪ್ರಕಾಶಮಾನವಾದ ಸಾಸಿವೆ ಹಳದಿ ಬಣ್ಣವನ್ನು ಹೊಂದಿದ್ದು, ತನ್ನ ವರ್ಗದ ಇತರ ವಿಶಾಲ ಆಕಾರದ ದೊಡ್ಡ ಡ್ರ್ಯಾಗನ್‌ಗಳಿಗೆ ಹೋಲಿಸಿದರೆ ಸ್ವಲ್ಪ ಸಣ್ಣ ಗಾತ್ರದ್ದಾಗಿದೆ. ಜೊತೆಗೆ ಸರಣಿಯಲ್ಲಿ ಅದು ಅನೇಕ ಸಣ್ಣ ಡ್ರ್ಯಾಗನ್‌ಗಳಿಗೆ ತಾಯಿಯಾಗಿದೆ. ಕಾಕತಾಳೀಯ ಎಂಬಂತೆ, ಥೈಲ್ಯಾಂಡ್‌ನ ಅರಣ್ಯದಲ್ಲಿ ಪತ್ತೆಯಾದ ಈ ಹಲ್ಲಿಯೂ ಸಹ ದೇಹದ ಮೇಲ್ಭಾಗದಲ್ಲಿ ಹಳದಿ ಛಾಯೆಯನ್ನು ಪಡೆದುಕೊಂಡಿದೆ.
ಅಲ್ಲದೆ, ತನ್ನ ಮೂಲ ತಳಿಯ ಇತರ ಹಲ್ಲಿಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಒಮ್ಮೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಈ ಎಲ್ಲ ವೈಶಿಷ್ಟ್ಯಗಳ ಆಧಾರದ ಮೇಲೆ ಸಂಶೋಧಕರು ಇದಕ್ಕೆ ಸೈರಾಕ್ಸ್ ಎಂಬ ಹೆಸರನ್ನು ನೀಡಿದ್ದಾರೆ.
ಸಾಮಾನ್ಯವಾಗಿ 'ಮೌಂಟೇನ್ ಹಾರ್ನ್ಡ್ ಡ್ರ್ಯಾಗನ್' ವರ್ಗಕ್ಕೆ ಸೇರುವ ಹಲ್ಲಿಗಳು ತಮ್ಮ ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ಚೂಪಾದ ಮುಳ್ಳಿನಂತಹ ಜುಟ್ಟಿನ ಸಾಲುಗಳನ್ನು ಹೊಂದಿರುತ್ತವೆ. ನೋಡಲು ಸಣ್ಣ ಗಾತ್ರದ ಡ್ರ್ಯಾಗನ್‌ನಂತೆಯೇ ಕಂಗೊಳಿಸುವ ಈ ತಳಿಯ ಶೋಧನೆಯೊಂದಿಗೆ, ಜಗತ್ತಿನಲ್ಲಿ ಪತ್ತೆಯಾದ 'ಅಕಾಂಥೋಸೌರಾ' ಪ್ರಭೇದಗಳ ಒಟ್ಟು ಸಂಖ್ಯೆ ಈಗ 23ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ಈ ಹಲ್ಲಿಗಳು ಥೈಲ್ಯಾಂಡ್‌ನ ಮೇ ವೋಂಗ್ ಸೀಮೆಯ ಎತ್ತರದ ಮಳೆಕಾಡುಗಳಲ್ಲಿ ಮಾತ್ರ ಕಂಡುಬಂದಿದ್ದು, ಅತಿ ಕ್ಲಿಷ್ಟಕರ ಭೂಪ್ರದೇಶ ಮತ್ತು ಕಡಿದಾದ ಪರ್ವತಗಳ ಕಾರಣದಿಂದಾಗಿ ಇವುಗಳ ಆವಾಸಸ್ಥಾನವು ಸಣ್ಣ ಸಣ್ಣ ಭಾಗಗಳಾಗಿ ಹಂಚಿಹೋಗಿದೆ.
ಈ ಅಪರೂಪದ ಜೀವಿಯ ಉಳಿವಿಗಾಗಿ ಆ ಭಾಗದ ಆವಾಸಸ್ಥಾನವನ್ನು ತಕ್ಷಣವೇ ರಕ್ಷಿಸಬೇಕೆಂದು ಸಂಶೋಧಕರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಹೆಸರಿಡಲಾದ ಈ ಸೈರಾಕ್ಸ್ ಹಲ್ಲಿಯನ್ನು ಆ ಪ್ರದೇಶದ ಜೈವಿಕ ಸಂಕೇತವನ್ನಾಗಿ ಮಾಡಿ, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರ ಗಮನವನ್ನು ಆ ಅರಣ್ಯದ ಸಂರಕ್ಷಣೆಯತ್ತ ಸೆಳೆಯುವುದು ವಿಜ್ಞಾನಿಗಳ ಆಶಯವಾಗಿದೆ.
ಆದಾಗ್ಯೂ, ಭವಿಷ್ಯದಲ್ಲಿ ಉತ್ತರ ಮತ್ತು ಪಶ್ಚಿಮ ಥೈಲ್ಯಾಂಡ್‌ನ ಸುತ್ತಮುತ್ತಲಿನ ಪರ್ವತ ಶ್ರೇಣಿಗಳಲ್ಲಿ ಮತ್ತಷ್ಟು ಆಳವಾದ ಸಂಶೋಧನೆ ನಡೆಸಿದರೆ, ಜೀವವೈವಿಧ್ಯದ ಇಂತಹ ಇನ್ನುಳಿದ ಅನೇಕ ಹೊಸ ವಿಸ್ಮಯಗಳು ಹಾಗೂ ಗುಪ್ತ ಜೀವಸಂಕುಲಗಳು ಬೆಳಕಿಗೆ ಬರಲಿವೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ. 'ಹೌಸ್ ಆಫ್ ದಿ ಡ್ರ್ಯಾಗನ್' ಸರಣಿಯ ಮೂರನೇ ಆವೃತ್ತಿಯು ಕೊನೆಗೊಳ್ಳುವ ಸನ್ನಿವೇಶದಲ್ಲೇ ಈ ಅಪರೂಪದ ವೈಜ್ಞಾನಿಕ ಶೋಧನೆ ಹೊರಬಿದ್ದಿರುವುದು ವಿಶ್ವದಾದ್ಯಂತ ಸಿನಿಪ್ರಿಯರ ಹಾಗೂ ಸಂಶೋಧಕರ ಗಮನ ಸೆಳೆದಿದೆ (ಏಜೆನ್ಸೀಸ್).