(ಚಿತ್ರ X) 
ದೇಶ

ಜೇವರ್ ರನ್‌ವೇನಲ್ಲಿ ಹೊಸ ಇತಿಹಾಸ: ಭೂಮಿ ನೀಡಿದ ಅನ್ನದಾತರಿಗೆ ಆಕಾಶದೆತ್ತರದ ಗೌರವ, 172 ರೈತರಿಂದಲೇ ಮೊದಲ ಹಾರಾಟ! Noida International Airport

ನೋಯ್ಡಾ: ಉತ್ತರ ಪ್ರದೇಶದ ಜೇವರ್‌ನಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ 'ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'ವು (Noida International Airport) ಸೋಮವಾರದಿಂದ ಅಧಿಕೃತವಾಗಿ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯೊಂದಕ್ಕೆ ಈ ವಿಮಾನ ನಿಲ್ದಾಣ  ಸಾಕ್ಷಿಯಾಗಿದೆ. 

ಮೊದಲ ದಿನವೇ ರೈತರಿಗೆ ವಿಶೇಷ ಗೌರವ

ವಿಮಾನ ನಿಲ್ದಾಣದ ಆರಂಭಿಕ ವಿಮಾನಗಳಲ್ಲಿ, ಜೇವರ್‌ನಿಂದ ಲಕ್ನೋಗೆ ಹೊರಡುವ ವಿಶೇಷ ವಿಮಾನವೊಂದು ಸಂಪೂರ್ಣವಾಗಿ ರೈತರಿಗಾಗಿಯೇ ಮೀಸಲಾಗಿದೆ. ಈ ಬೃಹತ್ ವಿಮಾನ ನಿಲ್ದಾಣದ ಯೋಜನೆಗಾಗಿ ತಮ್ಮ ಫಲವತ್ತಾದ ಜಮೀನನ್ನು ಬಿಟ್ಟುಕೊಟ್ಟ 172 ರೈತರು ಈ ಉದ್ಘಾಟನಾ ವಿಮಾನದ ಪ್ರಮುಖ ಪ್ರಯಾಣಿಕರಾಗಿದ್ದಾರೆ. ಆದಾಗ್ಯೂ, ಯೋಜನೆಯ ಯಶಸ್ಸಿಗೆ ಕಾರಣರಾದ ರೈತರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅಧಿಕಾರಿಗಳು ಈ ವಿಶೇಷ ಗೌರವವನ್ನು ನೀಡಿದ್ದು, ರೈತರು ಅತ್ಯಂತ ಸಡಗರ ಮತ್ತು ಹೆಮ್ಮೆಯಿಂದ ವಿಮಾನಯಾನ ಕೈಗೊಂಡಿದ್ದಾರೆ.
ಜೇವರ್ ಶಾಸಕ ಧೀರೇಂದ್ರ ಸಿಂಗ್ ಅವರೊಂದಿಗೆ ರೈತರು ಲಕ್ನೋಗೆ ಪ್ರಯಾಣ ಬೆಳೆಸಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ನೀಡಿದ ಕೊಡುಗೆ ಬಗ್ಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.
ಈ ನೂತನ ವಿಮಾನ ನಿಲ್ದಾಣದಿಂದ ಹೊರಡುವ ಮೊದಲ ಬ್ಯಾಚ್‌ನ ವಿಮಾನಗಳು ಜೇವರ್ ಅನ್ನು ದೇಶದ ಸಿಲಿಕಾನ್ ಸಿಟಿ ಬೆಂಗಳೂರು, ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸೇರಿದಂತೆ ಹಲವು ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನಗಳ ಹಾರಾಟಕ್ಕೆ ಸಿದ್ಧವಾಗುತ್ತಿದ್ದಂತೆಯೇ ಉಪಾಧ್ಯಕ್ಷ ಕ್ರಿಸ್ಟೋಫ್ ಸ್ಕ್ನೆಲ್‌ಮನ್ ಅವರು ಮೊದಲ ವರ್ಷದಲ್ಲೇ ಐದು ಮಿಲಿಯನ್​​ ಪ್ರಯಾಣಿಕರನ್ನು ನಿರ್ವಹಿಸುವ ಮಹತ್ವಾಕಾಂಕ್ಷೆಯ ಗುರಿಯಮನ್ನು ರೂಪಿಸಿದ್ದಾರೆ. ಆದಾಗ್ಯೂ, 70 ಮಿಲಿಯನ್​ ಪ್ರಯಾಣಿಕರಿಗೆ ದೀರ್ಘಾವಧಿಯ ಸಾಮರ್ಥ್ಯವನ್ನು ಯೋಜಿಸಿದ್ದಾರೆ.
ಬಹುನಿರೀಕ್ಷಿತ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸೋಮವಾರ ಬಿಗಿ ಭದ್ರತೆಯ ನಡುವೆ ತನ್ನ ಉದ್ಘಾಟನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಆರಂಭಿಸಿದೆ. ಸದ್ಯಕ್ಕೆ ವಿಶೇಷ ವಿಮಾನದ ಮೂಲಕ ಸೇವೆ ಆರಂಭವಾಗಿದ್ದು, ಶೀಘ್ರದಲ್ಲೇ ನಿಯಮಿತ ವಾಣಿಜ್ಯ ವಿಮಾನಗಳು ಸಂಚರಿಸಲಿವೆ. ಈ ನೂತನ ಸೇವೆಯು ದೆಹಲಿ ವಿಮಾನ ನಿಲ್ದಾಣ ಅಥವಾ ರಸ್ತೆ ಮಾರ್ಗವನ್ನು ಅವಲಂಬಿಸಿದ್ದ ಪ್ರಯಾಣಿಕರಿಗೆ ಲಕ್ನೋ ಮತ್ತು ನೋಯ್ಡಾ ನಡುವೆ ನಿರಾಯಾಸ ಪ್ರಯಾಣದ ಸೌಕರ್ಯ ಒದಗಿಸಲಿದೆ.

ಮೊದಲ ವಿಮಾನದಲ್ಲಿ ಗಣ್ಯರ ಪ್ರಯಾಣ

ಲಕ್ನೋದಿಂದ ಹೊರಟ ಮೊದಲ ಹಾರಾಟದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಸಂಪೂರ್ಣ ಬುಕ್ ಆಗಿದ್ದು, ಈ ಐತಿಹಾಸಿಕ ಪ್ರಯಾಣದಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಸತೀಶ್ ಮಹಾನಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಪಿ. ಗೋಯಲ್ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದಾರೆ. ಮತ್ತೊಂದೆಡೆ, ಜೇವರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ಮೋಹನ್ ನಾಯ್ಡು, ಸಂಸದ ಮಹೇಶ್ ಶರ್ಮಾ ಹಾಗೂ ಸ್ಥಳೀಯ ಶಾಸಕ ಧೀರೇಂದ್ರ ಸಿಂಗ್ ಅವರು ವಿಮಾನವನ್ನು ಬರಮಾಡಿಕೊಂಡರು. ಈ ಸಂಪರ್ಕವು ರಾಜ್ಯದ ಆಡಳಿತಾತ್ಮಕ ಮತ್ತು ವಾಣಿಜ್ಯ ಕೇಂದ್ರಗಳ ನಡುವಿನ ಆರ್ಥಿಕ ಬಾಂಧವ್ಯವನ್ನು ಬಲಪಡಿಸಲಿದೆ.

ಕೃತಕ ಬುದ್ಧಿಮತ್ತೆ (AI) ಆಧಾರಿತ ಹೈಟೆಕ್ ಭದ್ರತೆ

ವಿಮಾನ ನಿಲ್ದಾಣದ ಸುರಕ್ಷತೆಗಾಗಿ ಸುಮಾರು 1,030 ಸಿಐಎಸ್ಎಫ್ (CISF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಉತ್ತರ ಪ್ರದೇಶ ಪೊಲೀಸರು ವಿಶೇಷ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಆರಂಭಿಸಿದ್ದು, ಭದ್ರತಾ ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ರನ್‌ವೇ ಮತ್ತು ಸುತ್ತಮುತ್ತಲಿನ ಪರಿಸರವನ್ನು ಫೇಶಿಯಲ್ ರೆಕಗ್ನಿಷನ್ ಮತ್ತು ಅನುಮಾನಾಸ್ಪದ ನಡವಳಿಕೆ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಿಸಿಟಿವಿಗಳ ಮೂಲಕ ರಿಯಲ್-ಟೈಮ್ ಮಾನಿಟರ್ ಮಾಡಲಾಗುತ್ತಿದೆ. ಇದರೊಂದಿಗೆ ಶ್ವಾನದಳ, ಅಗ್ನಿಶಾಮಕ ದಳ ಹಾಗೂ ವೈದ್ಯಕೀಯ ತುರ್ತು ತಂಡಗಳು ನಿರಂತರ ನಿಗಾವಹಿಸಿವೆ (ಏಜೆನ್ಸೀಸ್​).