ಇ-ಚಲನ್‌ಗೆ ಕ್ಯಾರೇ ಎನ್ನದಿದ್ರೆ ಡಿಎಲ್, ಆರ್‌ಸಿ ಲಾಕ್
- ಚಲನ್‌ಗಳನ್ನು ಕಟ್ಟದೆ ಹಾಗೆಯೇ ಬಾಕಿ ಉಳಿಸಿಕೊಂಡಿದ್ದರೆ ತಟ್ಟಲಿದೆ ಬಿಸಿ
- ವಾಹನ ಸವಾರರ ಡಿಎಲ್, ಆರ್‌ಸಿ ಮತ್ತು ಲೈಸೆನ್ಸ್ ಸೇವೆಗಳು ಫ್ರೀಜ್
- ವಿಶೇಷ ತೀರ್ಪು ವ್ಯವಸ್ಥೆ ಮತ್ತು ಆನ್‌ಲೈನ್ ವಿಚಾರಣೆ
New Draft Rules: ನಗರ ಸಂಚಾರಗಳಲ್ಲಿ ಹೆಲ್ಮೆಟ್ ಇಲ್ಲದೆ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಹಲವಾರು ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿ, ಸಾಕಷ್ಟು ಇ-ಚಲನ್‌ಗಳನ್ನು ಪಡೆದಿರುವ ಅದೆಷ್ಟೋ ಮಂದಿ ದಂಡ ಕಟ್ಟದೆ ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆ ಇದೀಗ ಅಂಥವರ ಡ್ರೈವಿಂಗ್ ಲೈಸನ್ಸ್ ರದ್ದು ಮಾಡುವ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ.
ಚಲನ್ಗಳು ಎಷ್ಟು ಬೇಕಾದರೂ ಬರಲಿ, ನಾನು ಕಟ್ಟಿದರೆ ತಾನೇ ಪೊಲೀಸರು ಏನಾದರು ಮಾಡಲು ಸಾಧ್ಯ ಎಂದು ಸಿಕ್ಕ ಸಿಕ್ಕ ಕಡೆ ರೂಲ್ಸ್ಗಳನ್ನು ಉಲ್ಲಂಘಿಸಿ, ನಿರ್ಲಕ್ಷ್ಯ ತೋರುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 1989ರ ಕೇಂದ್ರ ಮೋಟಾರು ವಾಹನಗಳ ನಿಯಮಗಳಡಿ ಪ್ರಮುಖ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಕರಡು ನಿಯಮಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ.
ಈ ಪ್ರಸ್ತಾವನೆ ಜಾರಿಗೆ ಬಂದರೆ, ಸಂಚಾರ ನಿಯಮ ಉಲ್ಲಂಘನೆಯ ಚಲನ್‌ಗಳನ್ನು ಪಾವತಿಸದವರಿಗೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‌ಸಿ) ಸೇರಿ ವಾಹನಕ್ಕೆ ಸಂಬಂಧಿಸಿದ ಹಲವು ಪ್ರಮುಖ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕರಡು ನಿಯಮಗಳ ಪ್ರಕಾರ, ನಿಗದಿತ ಸಮಯದೊಳಗೆ ಟ್ರಾಫಿಕ್ ಚಲನ್‌ಗೆ ಆಕ್ಷೇಪಣೆ ಸಲ್ಲಿಸದಿದ್ದರೆ ಅಥವಾ ತನಿಖೆ ಪೂರ್ಣಗೊಂಡು ದಂಡದ ಮೊತ್ತವನ್ನು ಫೈನಲ್ ಮಾಡಿದ ಮೇಲೆಯೂ ಪೆನಾಲ್ಟಿ ಹಣವನ್ನು ಪಾವತಿಸದಿದ್ದರೆ, ಸಂಬಂಧಪಟ್ಟ ವ್ಯಕ್ತಿಯ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿಗೆ ಸಂಬಂಧಿಸಿದ ಅರ್ಜಿಗಳನ್ನು ಆರ್ಟಿಒ ಅಧಿಕಾರಿಗಳು ಲಾಕ್ ಮಾಡಲಿದ್ದಾರೆ.
ಇ-ಚಲನ್ ಪಾವತಿಸಿದ ನಂತರವೇ ಆ ಸೇವೆಗಳು ಮತ್ತೆ ಯಥಾಸ್ಥಿತಿಗೆ ಮರಳಲಿವೆ. ಹೆಚ್ಚುವರಿಯಾಗಿ, ಸಂಬಂಧಪಟ್ಟ ವಾಹನವನ್ನು ಸರ್ಕಾರಿ ಪೋರ್ಟಲ್‌ನಲ್ಲಿ ವಹಿವಾಟು ಮಾಡಬಾರದು ಎಂದು ಗುರುತಿಸಲಾಗಿದೆ. ಈ ಬಗ್ಗೆ ವಾಹನ ಮಾಲೀಕರು ಅಥವಾ ಪರವಾನಗಿ ಹೊಂದಿರುವವರ ಫೋನ್‌ಗೆ ಎಚ್ಚರಿಕೆ ಸಂದೇಶವನ್ನು ನೋಟಿಸ್ ಆಗಿ ಕಳುಹಿಸಲಾಗುತ್ತದೆ. ಆದಾಗ್ಯೂ, ಚಲನ್ ಕೇಸ್ಗಳು ನ್ಯಾಯಾಲಯದಲ್ಲಿ ಅಥವಾ ತೀರ್ಪು ನೀಡುವ ಪ್ರಾಧಿಕಾರದ ಮುಂದೆ ಬಾಕಿ ಉಳಿದಿದ್ದರೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ.
ರಾಜ್ಯಗಳಲ್ಲಿ ವಿಶೇಷ ತೀರ್ಪು ವ್ಯವಸ್ಥೆ
ಸಂಚಾರ ಚಲನ್‌ಗಳ ಕುರಿತು ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲು ಹೊಸ ನಿಯಮಗಳು ಜಾರಿಗೆ ಬಂದ ಆರು ತಿಂಗಳೊಳಗೆ ಪ್ರತಿ ರಾಜ್ಯವು ವಿಶೇಷ ತೀರ್ಪು ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರವು ಪ್ರಸ್ತಾಪಿಸಿದೆ. ಪ್ರತಿ ಜಿಲ್ಲೆಗೆ ನ್ಯಾಯನಿರ್ಣಯ ಪ್ರಾಧಿಕಾರವನ್ನು ನೇಮಿಸಬೇಕು ಹಾಗೂ ವಿಡಿಯೋ ಕಾನ್ಫರೆನ್ಸ್ ಮತ್ತು ಆನ್‌ಲೈನ್ ವಿಚಾರಣೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ವಿಚಾರಣೆ ಮುಗಿದ ನಂತರ 30 ದಿನಗಳಲ್ಲಿ ತೀರ್ಪು ನೀಡಲಾಗುವುದು. ಮೇಲ್ಮನವಿ ಸಲ್ಲಿಸಿದರೆ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ಅಥವಾ ತತ್ಸಮಾನ ಶ್ರೇಣಿಯ ಮೇಲ್ಮನವಿ ಪ್ರಾಧಿಕಾರವು ಸಹ 30 ದಿನಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ವಿಳಂಬ ಮಾಡುವ ಅಧಿಕಾರಿಗಳಿಗೂ ದಂಡ
ಈ ಕರಡು ಅಧಿಕಾರಿಗಳ ವಿರುದ್ಧವು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ಒಳಗೊಂಡಿದೆ. ದಂಡ ವಿಧಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಂದಿದೆ. ನಿಗದಿತ ಸಮಯದೊಳಗೆ ತೀರ್ಪು ನೀಡದಿದ್ದಲ್ಲಿ ಅಥವಾ ಮೇಲ್ಮನವಿ ಇತ್ಯರ್ಥಪಡಿಸಲು ವಿಳಂಬ ಮಾಡುವ ಅಧಿಕಾರಿಗೆ 5ರಿಂದ 10 ಸಾವಿರ ರೂ. ದಂಡ ಹಾಕಲಾಗುವುದು.
ಡಿಜಿಟಲ್ ಎಚ್ಚರಿಕೆಗಳ ಕಾನೂನುಬದ್ಧತೆ
ಸಂಚಾರ ಉಲ್ಲಂಘನೆಗಾಗಿ ನೀಡಲಾದ ಎಚ್ಚರಿಕೆಗಳನ್ನು ಈಗ ಅಧಿಕೃತ ಡಿಜಿಟಲ್ ದಾಖಲೆಗಳಲ್ಲಿ ರಿಜಿಸ್ಟರ್ ಮಾಡಲಾಗವುದು. ವಾರ್ನಿಂಗ್ ಸ್ವೀಕರಿಸಿದರೂ ಅಥವಾ ಅದರ ವಿರುದ್ಧ ಎತ್ತಿರುವ ಆಕ್ಷೇಪಣೆಯನ್ನು ತಿರಸ್ಕರಿಸಿದರೂ ಅದನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ. ಭವಿಷ್ಯದಲ್ಲಿ ಇದೇ ರೀತಿಯ ಉಲ್ಲಂಘನೆ ಸಂಭವಿಸಿದಲ್ಲಿ, ಈ ಎಚ್ಚರಿಕೆಗಳನ್ನು ಹಿಂದಿನ ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಆನ್‌ಲೈನ್ ಆರ್‌ಸಿ ರದ್ದತಿ
ಅಪಘಾತದಲ್ಲಿ ಸಂಪೂರ್ಣ ನಾಶವಾದ ವಾಹನಗಳು, ಶಾಶ್ವತವಾಗಿ ಬಳಕೆಯಾಗದ ವಾಹನಗಳು, ಸ್ಕ್ರ್ಯಾಪ್ ಕೇಂದ್ರಗಳಲ್ಲಿ ಮಾನ್ಯತೆ ಪಡೆದು ಸ್ಕ್ರ್ಯಾಪ್ ಆಗಿರುವ ವಾಹನಗಳು ಅಥವಾ ಶಾಶ್ವತವಾಗಿ ವಿದೇಶಕ್ಕೆ ತೆರಳುವ ವಾಹನಗಳ ನೋಂದಣಿಯನ್ನು ಆನ್‌ಲೈನ್‌ನಲ್ಲಿ ರದ್ದುಗೊಳಿಸುವ ವ್ಯವಸ್ಥೆಯನ್ನು ಕೇಂದ್ರವು ಪ್ರಸ್ತಾಪಿಸಿದೆ. ಘಟನೆ ನಡೆದ 30 ದಿನಗಳೊಳಗೆ ವಾಹನ ಮಾಲೀಕರು ಆನ್‌ಲೈನ್‌ನಲ್ಲಿ ಮಾಹಿತಿ ಒದಗಿಸಬೇಕು. ನಂತರ ನೋಂದಣಿ ರದ್ದುಗೊಂಡರೆ, ಮಾಲೀಕರು ವಿಮಾ ಕಂಪನಿಗೆ ಮಾಹಿತಿ ನೀಡುತ್ತಾರೆ. ಇದಕ್ಕಾಗಿ ನಮೂನೆ-37ಎ ಮತ್ತು ನಮೂನೆ-37ಬಿ ಪರಿಚಯಿಸಬೇಕು ಎಂದು ಕರಡಿನಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಮ ಗಮನಕ್ಕೆ
ಆದಾಗ್ಯೂ, ಈ ಕರಡು ನಿಯಮಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕೇಂದ್ರ ಸರ್ಕಾರವು 30 ದಿನಗಳವರೆಗೆ ಸ್ವೀಕರಿಸಲಿದೆ. ಜನರು ಸಲ್ಲಿಕೆ ಮಾಡಿದ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕವೇ ಅಂತಿಮ ನಿಯಮಗಳನ್ನು ಜಾರಿಗೆ ತರಲಾಗುವುದು,(ಏಜೆನ್ಸೀಸ್).