ದ್ರಾವಿಡ ನಾಡಲ್ಲಿ ಹೊಸ ಮೈತ್ರಿ ಪರ್ವ: ಜೂನ್ 18ರ ರಾಜ್ಯಸಭಾ ಉಪಚುನಾವಣೆಗೆ ಕಾಂಗ್ರೆಸ್‌ಗೆ ಸೀಟು ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ!
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಮುಂಬರುವ ರಾಜ್ಯಸಭಾ ಉಪಚುನಾವಣೆಯಲ್ಲಿ(Congress- TVK Alliance) ದೊಡ್ಡಣ್ಣನ ಪಾತ್ರ ವಹಿಸಿದೆ. ಜೂನ್ 18 ರಂದು ತಮಿಳುನಾಡಿನಿಂದ ತೆರವಾಗಿರುವ ಏಕೈಕ ರಾಜ್ಯಸಭಾ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಟಿವಿಕೆ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಕಾಂಗ್ರೆಸ್‌ಗೆ ಸೀಟು ಬಿಟ್ಟುಕೊಡುವುದಾಗಿ ಟಿವಿಕೆ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತು ಜೂನ್ 3ರ ಬುಧವಾರದಂದು ಅಧಿಕೃತ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಅಧಿನಾಯಕ ವಿಜಯ್, ಜೂನ್ 18 ರಂದು ತಮಿಳುನಾಡಿನಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ನೇತೃತ್ವದ ಮೈತ್ರಿಕೂಟವು ಈ ಸ್ಥಾನವನ್ನು ತನ್ನ ಪ್ರಮುಖ ಮಿತ್ರ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಹಂಚಿಕೆ ಮಾಡಲು ನಿರ್ಧರಿಸಿದೆ. ಅದರಂತೆ ತಮಿಳುನಾಡಿನ ವಿಧಾನಸಭೆಯ ಸದಸ್ಯರ ಮೂಲಕ ಭರ್ತಿಯಾಗಲಿರುವ ಈ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಸಿವಿ ಷಣ್ಮುಗಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ
ಮಾಜಿ ಸಚಿವ ಸಿವಿ ಷಣ್ಮುಗಂ ಅವರು ಇತ್ತೀಚೆಗೆ ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೈಲಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೇ 7 ರಂದು ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ತೆರವಾಗಿದ್ದ ಈ ತಾತ್ಕಾಲಿಕ ತೆರವು ಸ್ಥಾನವನ್ನು ತುಂಬಲು ಈಗ ಉಪಚುನಾವಣೆ ಘೋಷಣೆಯಾಗಿದೆ.
ತಮಿಳುನಾಡು ವಿಧಾನಸಭಾ ಸಚಿವಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ತಮಿಳುನಾಡು ವಿಧಾನಸಭೆಯ ಚುನಾಯಿತ ಶಾಸಕರು (MLAs) ಮತದಾನ ಮಾಡುವ ಮೂಲಕ ಈ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಟಿವಿಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಸ್ಪಷ್ಟ ಬಹುಮತ ಹೊಂದಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಬಹುತೇಕ ನಿಶ್ಚಿತವಾಗಿದೆ.
ಚುನಾವಣಾ ವೇಳಾಪಟ್ಟಿ ಹೀಗಿದೆ:
ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಪಿ. ತೇನ್ಮೊಳಿ ಅವರು ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪ್ರಕ್ರಿಯೆಗಳು ಕೆಳಗಿನಂತಿವೆ:
ನಾಮಪತ್ರ ಸಲ್ಲಿಕೆ: ಭಾನುವಾರ ಮತ್ತು ಜೂನ್ 7 ರ ರಜಾದಿನಗಳನ್ನು ಹೊರತುಪಡಿಸಿ, ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು.
ಕೊನೆಯ ದಿನಾಂಕ: ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ.
ನಾಮಪತ್ರ ಪರಿಶೀಲನೆ: ಜೂನ್ 9 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜೂನ್ 11 ರ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಹಿಂಪಡೆಯಬಹುದು.
ಮತದಾನ ಮತ್ತು ಫಲಿತಾಂಶ: ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಜೂನ್ 18 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸಚಿವಾಲಯದ ಆವರಣದಲ್ಲಿ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.
ಬಲವಾದ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ನಟ, ರಾಜಕಾರಣಿ ಸಿಎಂ ವಿಜಯ್ ಅವರು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸುವ ಬದಲು ಕಾಂಗ್ರೆಸ್‌ಗೆ ಮನ್ನಣೆ ನೀಡಿರುವುದು ರಾಷ್ಟ್ರ ರಾಜಕಾರಣದಲ್ಲೂ ಗಮನ ಸೆಳೆದಿದೆ. ಸದ್ಯ ಈ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ,(ಏಜೆನ್ಸೀಸ್).