ಸೋನಮ್ ವಾಂಗ್ಚುಕ್ ಬಗ್ಗೆ ಅಮೀರ್ ಖಾನ್ ಆಡಿದ ಮಾತೀಗ ವಿವಾದಕ್ಕೆ ಗುರಿ
- ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಹೋರಾಟ ಮುಂದುವರಿಕೆ
- ದಿನದಿಂದ ದಿನಕ್ಕೆ ಹದಗೆಟ್ಟ ಅವರ ಆರೋಗ್ಯ ಸ್ಥಿತಿ
- 3 ಈಡಿಯಟ್ಸ್ ಚಿತ್ರಕ್ಕೆ ವಾಂಗ್ಚುಕ್ ಸ್ಫೂರ್ತಿಯಲ್ಲ ಎಂದ ಅಮೀರ್ ಖಾನ್
- ಅಮೀರ್ ಮಾತಿಗೆ ವಿಡಿಯೋ ಸಾಕ್ಷಿ ಮುಂದಿಟ್ಟು ನೆಟ್ಟಿಗರು ಛೀಮಾರಿ
Aamir Khan: ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಬಿಡದಂತೆ ಮುಂದುವರಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸರಾಗಿರುವ ಬಾಲಿವುಡ್ ನಟ ಅಮೀರ್ ಖಾನ್ಗೆ ಸದ್ಯ ನೆಟ್ಟಿಗರು ಛೀಮಾರಿಗಳ ಸುರಿಮಳೆ ಸುರಿಸಿದ್ದಾರೆ.
ಬಾಲಿವುಡ್ನ ಬ್ಲಾಕ್ಬಸ್ಟರ್ '3 ಈಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್, ಒಬ್ಬ ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡಿದ ಅಸಾಧಾರಣ ಬುದ್ಧಿಜೀವಿ ಫುನ್ಸುಖ್ ವಾಂಗ್ಡು ಅವರ ಪಾತ್ರವನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು. ಈ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ ಅಮೀರ್, ಸಿನಿಮಾ ನೋಡಿದವರ ಕಣ್ಣಂಚಲ್ಲಿ ನೀರು ತರಿಸಿದ್ದರು. ಅವರ ಪಾತ್ರಕ್ಕೆ ಸಿನಿಪ್ರಿಯರಿಂದ ನಿರೀಕ್ಷೆಗೂ ಮೀರಿದ ಮೆಚ್ಚುಗೆಗಳು ಹರಿದುಬಂದವು. ಈ ಪಾತ್ರವು ಕೇವಲ ಸಿನಿಮಾಗೆ ಕಾಲ್ಪನಿಕವಾಗಿ ರೂಪಿಸಿದ್ದಲ್ಲ. ಬದಲಿಗೆ ವಾಂಗ್ಚುಕ್ ಅವರ ಬದುಕನ್ನೇ ಆಧರಿಸಿದ್ದು ಎಂಬುದಕ್ಕೆ ಸಾಕಷ್ಟು ವರದಿಗಳಿವೆ. ಹೀಗಿರುವಾಗಲೇ, ಸೋನಮ್ ಅವರ ಹೋರಾಟದ ಮಧ್ಯೆ ಅವರ ಕಥೆ ಚಿತ್ರಕ್ಕೆ ಸ್ಫೂರ್ತಿ ನೀಡಿಲ್ಲ ಎಂಬ ಖಾನ್ ಮಾತು ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ.
3 ಈಡಿಯಟ್ಸ್ ಚಿತ್ರದ ಮತ್ತೊಬ್ಬ ಕಲಾವಿದ ಚತುರ್ ಹೇಳಿರುವುದು ತಪ್ಪು. ನಮ್ಮ ಸಿನಿಮಾ ಸೋನಮ್ ವಾಂಗ್ಚುಕ್ ಅವರಿಂದ ಸ್ಫೂರ್ತಿ ಪಡೆದಿಲ್ಲ. ಇದಕ್ಕೂ ಮೊದಲು ನಮಗೆ ಅವರಾರು ಎಂಬುದೇ ಸರಿಯಾಗಿ ಗೊತ್ತಿರಲಿಲ್ಲ. ಕಥೆ ಬರೆಯುವಾಗ ನಮ್ಮವರಿಗೆ ಅವರ ಜೀವನದ ಅಥವಾ ವಾಂಗ್ಚುಕ್ ಹಿನ್ನೆಲೆಯ ಬಗ್ಗೆ ಕಿಂಚಿತ್ತು ಮಾಹಿತಿ ಇರಲಿಲ್ಲ ಎಂದು ಹೇಳಿದರು. ಅಮೀರ್ ಖಾನ್ರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಕೆಂಡಾಮಂಡಲಗೊಂಡ ನೆಟ್ಟಿಗರು, 2008ರಲ್ಲೇ ನಿಮಗೆ ಆ ವ್ಯಕ್ತಿ ಯಾರೆಂಬುದು ಗೊತ್ತಿತ್ತು ಎಂದು ಹಳೆಯ ವಿಡಿಯೋ ಮುಂದಿಟ್ಟು ಛೀಮಾರಿ ಹಾಕಿದ್ದಾರೆ.
ಸೋನಮ್ ವಾಂಗ್ಚುಕ್ ಅವರ ಹಳೆಯ ಸಂದರ್ಶನಗಳ ತುಣಕನ್ನು ಮುನ್ನೆಲೆಗೆ ತಂದಿರುವ ನೆಟ್ಟಿಗರು, 2009ರಲ್ಲಿ ಚಿತ್ರ ರಿಲೀಸ್ ಆಗುವ ಮೊದಲೇ ನಿರ್ಮಾಪಕರಿಗೆ ಮತ್ತು ನಿಮ್ಮ ಇಡೀ ಚಿತ್ರತಂಡಕ್ಕೆ ಅವರ ಕೆಲಸದ ಬಗ್ಗೆ ಸರಿಯಾದ ಮಾಹಿತಿ ಇತ್ತು ಎಂದು 2008ರ ವಿಡಿಯೋಗಳನ್ನು ವೈರಲ್ ಮಾಡುವ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಓಡಿ ಹೋಗೋದು ಎಂದರೆ ನಿಮ್ಮಿಂದ ನೋಡಿ ಕಲಿಯಬೇಕು ಎಂದಿದ್ದಾರೆ.
ಸೋನಮ್ ವಾಂಗ್ಚುಕ್ ಅವರ ಕಥೆಯನ್ನು ತಮ್ಮ ಚಿತ್ರವು ಆಧರಿಸಿದೆ ಎಂಬ ಅಂಶವನ್ನು ಅಮೀರ್ ಖಾನ್ ಒಪ್ಪಿಕೊಳ್ಳಲು ನಿರಾಕರಿಸುವುದು ಕೀಳುಮಟ್ಟದ್ದಾಗಿದೆ. ನಿಜಕ್ಕೂ ಸಿನಿಮಾ ನಿರ್ಮಾಣದ ಸಮಯದಲ್ಲೇ ನಿಮಗೆ ಆ ವ್ಯಕ್ತಿ ಯಾರೆಂಬುದು ಗೊತ್ತಿರಲಿಲ್ಲವೇ ಅಮೀರ್? ಈ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಲಡಾಖ್‌ನಲ್ಲಿರುವ ವಾಂಗ್ಚುಕ್ ಅವರ ಶಾಲೆಯಲ್ಲಿ ಶೂಟ್ ಮಾಡಿಲ್ವಾ ಹೇಳಿ ನೋಡೋಣ? ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).