ಮೃತ ದೀಪಕ್, ವಿಡಿಯೋ ಹರಿಬಿಟ್ಟ ಯುವತಿ
- ಇಡೀ ದೇಶದಲ್ಲಿ ಕೇರಳದ ದೀಪಕ್ ಸಾವು ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ
- ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್ ಸಾವಿಗೆ ಶರಣು
- ದೀಪಕ್ ಅಸಭ್ಯವಾಗಿ ವರ್ತಿಸಿದ ಎಂದು ಬಿಂಬಿಸಿ, ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಯುವತಿ
- ಯುವತಿಯ ವ್ಯೂವ್ಸ್ ಹುಚ್ಚಾಟಕ್ಕೆ ಹಲವರ ಆಕ್ರೋಶ, ಆರೋಪಿ ಬಂಧನ
ಕೋಝಿಕೋಡ್: ಇಡೀ ದೇಶದಲ್ಲಿ ಕೇರಳದ ದೀಪಕ್ ಸಾವು ಪ್ರಕರಣ (Deepak Death Case ) ಸಾಕಷ್ಟು ಸದ್ದು ಮಾಡುತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್ ಸಾವಿಗೆ ಶರಣಾಗಿದ್ದು, ದೇಶದ ಜನತೆಯನ್ನು ಚಿಂತಿಸುವಂತೆ ಮಾಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವ್ಯೂವ್ಸ್ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವುದು ನಿಜಕ್ಕೂ ಆಘಾತಕಾರಿ ವಿಚಾರವಾಗಿದೆ. ತನ್ನ ತಪ್ಪಿನಿಂದ ಓರ್ವ ಅಮಾಯಕನ ಜೀವ ಹೋಗಿದ್ದರು ಕೂಡ ಅದರ ಪಶ್ಚಾತಾಪವಿಲ್ಲದೇ ವರ್ತಿಸುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಆರಂಭದಲ್ಲಿ ಛೀಮಾರಿ...
ಇತ್ತೀಚೆಗಷ್ಟೇ, ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮೂಲಕ ಬಿಂಬಿಸಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು, ಗಲ್ಲಿಗೇರಿಸಬೇಕು ಎಂಬ ಕಮೆಂಟ್ಗಳಿಂದ ತುಂಬಿತು. ಆರಂಭದಲ್ಲಿ ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು.
ಆತ್ಮಹತ್ಯೆಗೆ ಶರಣು
ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ತನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ತೀರ ಮನನೊಂದ ದೀಪಕ್ (41) ಆತ್ಮಹತ್ಯೆಗೆ ಶರಣಾದರು. ಸದ್ಯ ಈ ಘಟನೆ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಿಡಿಯೋ ವೈರಲ್ ಆದಾಗ ವ್ಯಕ್ತವಾಗಿದ್ದ ಅಭಿಪ್ರಾಯಗಳು ಈಗ ಅವರ ಸಾವಿನ ಬಳಿಕ ದಿಢೀರ್ ಎಂಬಂತೆ ಬದಲಾಗಿರುವುದು ನಿಜಕ್ಕೂ ಆಶ್ಚರ್ಯ ಹಾಗೂ ದುರಂತವೇ ಸರಿ.
ಶಿಮ್ಜಿತಾಳಿಂದ ದೂರು
ಅಮಾಯಕ ದೀಪಕ್ ಸಾವಿಗಿಡಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಛೀಮಾರಿ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ವಿಡಿಯೋ ಮಾಡಿಕೊಂಡು ಜಾಲತಾಣಗಳಲ್ಲಿ ಹರಿಬಿಟ್ಟ ಯುವತಿ ಶಿಮ್ಜಿತಾಳನ್ನು ಸದ್ಯ ಖಾಕಿ ಪಡೆ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ, ಅಚ್ಚರಿ ಎಂಬಂತೆ ಆಕೆಯು ತನ್ನ ಕಡೆಯಿಂದ ದೂರು ಸಲ್ಲಿಸಿದ್ದಾಳೆ.
ಅಷ್ಟಕ್ಕೂ ಆಕೆಯ ದೂರಿನಲ್ಲಿ ಏನಿದೆ?
ಘಟನೆ ನಡೆದ ದಿನ ಬೆಳಗ್ಗೆ ನಾನು ಪಯ್ಯನ್ನೂರು ರೈಲು ನಿಲ್ದಾಣದಿಂದ ಬಸ್ ಹತ್ತಿದೆ. ಪಯ್ಯನ್ನೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಓರ್ವ ವ್ಯಕ್ತಿ ನನ್ನನ್ನು ಅನುಚಿತವಾಗಿ ಮುಟ್ಟಿದನು. ಇದಾದ ನಂತರ, ನಾನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಎಂದು ಹೇಳಿದ್ದಾಳೆ. ಆದರೆ, ದೂರಿನಲ್ಲಿ, ಆ ವ್ಯಕ್ತಿಯ ಗುರುತನ್ನು ಮಾತ್ರ ಆಕೆ ಬಹಿರಂಗಪಡಿಸಿಲ್ಲ.
ಈ ವಿಷಯ ಮೊದಲೇ ಏಕೆ ನೆನಪಾಗಲಿಲ್ಲ?
ದೇಶವ್ಯಾಪಿ ಈಗ ಯುವತಿ ವಿರುದ್ಧ ತಿರುಗಿಬಿದ್ದಿರುವ ಜನರು, ಒಬ್ಬ ಅಮಾಯಕನನ್ನು ಬಲಿಪಡೆದ ಈಕೆಗೆ ತಕ್ಕ ಶಿಕ್ಷೆಯಾಗಬೇಕು. ವಿಡಿಯೋ ನೋಡಿದಾಗ ಅದರಲ್ಲಿ ದೀಪಕ್ ಅವರು ಆ ರೀತಿ ಅಸಭ್ಯವಾಗಿ ಎಲ್ಲಿಯೂ ನಡೆದುಕೊಂಡಿಲ್ಲ. ಕೆಟ್ಟದಾಗಿ ಮುಟ್ಟುವುದು ಅಥವಾ ಅಸಭ್ಯ ವರ್ತನೆ ತೋರಿಲ್ಲ ಎಂಬಂತೆ ಕಾಣಿಸುತ್ತಿದೆ. ಇದೆಲ್ಲವೂ ಈಕೆಯ ಸೋಷಿಯಲ್ ಮೀಡಿಯಾ ವ್ಯಾಮೋಹ, ವ್ಯೂವ್ಸ್ ಹುಚ್ಚು, ಲೈಕ್ಸ್ಗಳಿಗೆ ಮಾಡಿರುವ ಹುಚ್ಚುತನ ಎಂದೆಲ್ಲ ಅಂದಿದ್ದಾರೆ. ಒಂದೆಡೆ, ಮೃತನ ಪರ ಧ್ಚನಿ ಎತ್ತಿರುವುದು ನಿಜಕ್ಕೂ ಖುಷಿ ಸಂಗತಿಯೇ ಆದರೂ ಇದೇ ಮೊದಲು ಏಕೆ ಈ ಕೆಲಸ ಮಾಡಲಿಲ್ಲ? ಎಂಬುದು ಬೆಂಬಿಡದೆ ಕಾಡುತ್ತಿರುವ ಪ್ರಶ್ನೆ.
ದೀಪಕ್ ಸಾವಿನ ಬಳಿಕ ಇಷ್ಟೆಲ್ಲ ಪರ ವಹಿಸಿಕೊಂಡು ಮಾತನಾಡುತ್ತಿರುವ ಮಂದಿ, ಅದೇ ವಿಡಿಯೋ ವೈರಲ್ ಆದ ಆರಂಭದಲ್ಲೇ ಇಷ್ಟು ಸೂಕ್ಷ್ಮವಾಗಿ, ಹಲವು ದೃಷ್ಟಿಕೋನಗಳಲ್ಲಿ ನೋಡಿ, ಯಾರದ್ದು ಸರಿ ಮತ್ತು ತಪ್ಪು ಅನ್ನೋದನ್ನು ಗಮನಿಸಿದಿದ್ರೆ, ಇಂದು ದೀಪಕ್ಗೆ ಇಂಥಾ ಘೋರ ಸಾವು ಬರುತ್ತಿರಲಿಲ್ಲ. ಸತ್ತ ಮೇಲೆ ಎಲ್ಲರೂ ಕನಿಕರ, ಕಾಳಜಿ ತೋರುವ ಅಗತ್ಯವೂ ಇರುತ್ತಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಮತ್ತು ಮುಂದಿನ ದಿನಗಳಲ್ಲಿ ಸೂಕ್ಷ್ಮತೆಯ ಅರಿವು ಎಲ್ಲರಲ್ಲಿಯೂ ಮೂಡಿದರೆ ಇಂತಹ ಘಟನೆಗಳು ಸಂಭವಿಸುವುದಿಲ್ಲ.
ಹೆತ್ತವರು ಕಣ್ಣೀರು
ಸಮಾಜದಲ್ಲಿ ವ್ಯಾಪಕ ಛೀಮಾರಿ, ಅವಮಾನಗಳಿಂದ ಬೇಸತ್ತು ಮನನೊಂದ ದೀಪಕ್, ಸಾವಿಗೆ ಶರಣಾಗುವುದೊಂದೇ ದಾರಿ ಎಂದು ಆತ್ಮಹತ್ಯೆ ಮಾಡಿಕೊಂಡರು. ಮಗನ ಅಗಲಿಕೆಯಿಂದ ದುಃಖತಪ್ತರಾಗಿರುವ ಪೋಷಕರು, ಸತ್ಯಾಸತ್ಯತೆ ತಿಳಿಸಿ, ನಮ್ಮ ಪುತ್ರನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, ಪುರುಷರು ಮಹಿಳೆಯರ ಮಧ್ಯೆ ನಿಂತು ಪ್ರಯಾಣಿಸುವುದೇ ತಪ್ಪಾ? ಸತ್ಯ ತಿಳಿಯದೆ ಹೀಗೆ ಆರೋಪ ಮಾಡುವುದು ಎಷ್ಟು ಸರಿ? ಎಂಬ ಕೂಗುಗಳು ಜೋರಾಗಿವೆ. ಒಂದಷ್ಟು ಸಿಸಿಟಿವಿ ವಿಡಿಯೋಗಳ ಪರಿಶೀಲನೆ ಮತ್ತು ವಿಡಿಯೋ ಸ್ಪಷ್ಟೀಕರಣದಲ್ಲಿ, ದೀಪಕ್ ಆ ರೀತಿ ತಪ್ಪಾಗಿ ನಡೆದುಕೊಂಡಿಲ್ಲ ಎಂಬುದು ತಿಳಿದುಬಂದಿದೆ.