ಬೆಂಗಳೂರು: ಇಂದಿನ ಕಾಲದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಸಿಗಬೇಕೆಂದರೆ ದೊಡ್ಡ ಡಿಗ್ರಿ, ಸ್ನಾತಕೋತ್ತರ ಪದವಿ ಇರಲೇಬೇಕು ಎಂಬ ನಂಬಿಕೆ ಇದೆ. ಆದರೆ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈ ಭ್ರಮೆಯನ್ನು ದೂರ ಮಾಡಿದೆ. ಎತ್ತರದ ಕಟ್ಟಡಗಳಿಗೆ ಬಣ್ಣ ಬಳಿಯುವ ಪೇಂಟರ್ ಒಬ್ಬರು ತಮ್ಮ ಮಾಸಿಕ ಮತ್ತು ವಾರ್ಷಿಕ ಆದಾಯವನ್ನು ಬಹಿರಂಗಪಡಿಸಿದ್ದು, ಅದನ್ನು ಕೇಳಿದ ಪದವೀಧರೆ "ನಮ್ಮ ಡಿಗ್ರಿಯ ಮೇಲೆ ಇವರು ಉಗುಳಿದಂತಾಗಿದೆ" ಎಂದು ಉದ್ಗರಿಸಿದ್ದಾರೆ.
ಹೌದು, ವೈರಲ್ ವಿಡಿಯೋದಲ್ಲಿ, ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತಿರುವ ಮಹಿಳೆಯೊಬ್ಬರು, ಹೊರಗಡೆ ಹಗ್ಗದ ಸಹಾಯದಿಂದ ನೇತಾಡುತ್ತಾ ಪೇಂಟಿಂಗ್ ಮಾಡುತ್ತಿರುವ ವ್ಯಕ್ತಿಯನ್ನು ಮಾತನಾಡಿಸುತ್ತಾರೆ. ಕುತೂಹಲದಿಂದ ಆಕೆ, "ನಿಮ್ಮ ಸಂಬಳ ಎಷ್ಟು?" ಎಂದು ಕೇಳಿದಾಗ ಆ ವ್ಯಕ್ತಿ ನೀಡಿದ ಉತ್ತರ ಎಲ್ಲರನ್ನೂ ಬೆರಗುಗೊಳಿಸಿದೆ.
ಪೇಂಟರ್ ನೀಡಿದ ಶಾಕಿಂಗ್ ಉತ್ತರ
ಆ ಪೇಂಟರ್ ಹೇಳುವ ಪ್ರಕಾರ, ಅವರು ಈ ಅಪಾಯಕಾರಿ ಕೆಲಸದಿಂದ ತಿಂಗಳಿಗೆ ಸುಮಾರು 35,000 ರೂಪಾಯಿ ಗಳಿಸುತ್ತಾರೆ. ಆದರೆ ಅಚ್ಚರಿಯ ವಿಷಯ ಇದಲ್ಲ! ಅವರು ಮುಂದುವರಿದು, "ನಾನು ಕೇವಲ ಪೇಂಟರ್ ಮಾತ್ರವಲ್ಲ, ಉತ್ತರ ಪ್ರದೇಶದಲ್ಲಿ ಕಬ್ಬಿನ ಬೇಸಾಯವನ್ನೂ ಮಾಡುತ್ತೇನೆ. ಕೃಷಿಯಿಂದ ನನಗೆ ವರ್ಷಕ್ಕೆ ಸುಮಾರು 10 ಲಕ್ಷ ರೂಪಾಯಿ ಆದಾಯ ಬರುತ್ತದೆ" ಎಂದಿದ್ದಾರೆ. ಅಲ್ಲದೆ, ಅವರ ಇಡೀ ಕುಟುಂಬವು ಸರ್ಕಾರಿ ಉದ್ಯೋಗಿಗಳಾಗಿದ್ದು, ಇವರು ಮಾತ್ರ ಈ ಕೆಲಸವನ್ನು ಆಯ್ದುಕೊಂಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. "ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದಿ, ತಿಂಗಳಿಗೆ 20-25 ಸಾವಿರಕ್ಕೆ ಕೆಲಸ ಮಾಡುತ್ತಿದ್ದೇವೆ. ಆದರೆ ಇವರ ಧೈರ್ಯ ಮತ್ತು ಪರಿಶ್ರಮಕ್ಕೆ ಸಿಗುತ್ತಿರುವ ಪ್ರತಿಫಲ ನಿಜಕ್ಕೂ ಅದ್ಭುತ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಕಾಯಕವೇ ಕೈಲಾಸ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ. ಯಾವ ಕೆಲಸವೂ ಸಣ್ಣದಲ್ಲ," ಎಂದು ಮಗದೊಬ್ಬರು ಶ್ಲಾಘಿಸಿದ್ದಾರೆ,(ಏಜೆನ್ಸೀಸ್).