ಹಸುವಿನ ಬಾಯಿಗೆ ಮದ್ಯ ಸುರಿದ ದುರುಳರು
- ಹೋಳಿ ದಿನ ಹುಚ್ಚಾಟ ಮೆರೆದ ಯುವಕರು
- ಹಸುವಿನ ಬಾಯಿಗೆ ಮದ್ಯ ಸುರಿದು ವಿಕೃತಿ ತೋರಿದ ಕಿರಾತಕರು
- ನೆಟ್ಟಿಗರಿಂದ ತೀವ್ರ ಆಕ್ರೋಶ
ಹರಿಯಾಣ: ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ ಮನುಷ್ಯಕುಲವೇ ತಲೆತಗ್ಗಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಹಬ್ಬದ ಹೆಸರಲ್ಲಿ ಅಮಲೇರಿಸಿಕೊಂಡಿದ್ದ ಕೆಲ ಯುವಕರು, ಮೂಕ ಪ್ರಾಣಿಯಾದ ಹಸುವನ್ನು ಹಿಡಿದು ಅದಕ್ಕೆ ಬಲವಂತವಾಗಿ ಮದ್ಯ ಕುಡಿ (Pouring liquor into Cow) ಸಿರುವ ಘಟನೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಬಲವಂತವಾಗಿ ಮದ್ಯ ಸುರಿದ ರಾಕ್ಷಸರು
ವೈರಲ್ ಆಗಿರುವ ವಿಡಿಯೋದಲ್ಲಿ, ಬೀದಿಯಲ್ಲಿ ಸಾಗುತ್ತಿದ್ದ ಹಸುವನ್ನು ಕೆಲ ಯುವಕರು ಅಡ್ಡಗಟ್ಟಿದ್ದಾರೆ. ಮೊದಲು ಅದಕ್ಕೆ ಬಣ್ಣ ಬಳಿದು ಕಿಟಲೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಗ್ಯಾಂಗ್, ಮದ್ಯದ ಬಾಟಲಿಯನ್ನು ಹಸುವಿನ ಬಾಯಿಗಿಟ್ಟು ಕುಡಿಸಲು ಪ್ರಯತ್ನಿಸಿದೆ. ಹಸು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಅದರ ಕುತ್ತಿಗೆಯನ್ನು ಬಲವಂತವಾಗಿ ಎತ್ತಿ ಹಿಡಿದು ಇಡೀ ಬಾಟಲಿಯ ಮದ್ಯವನ್ನು ಹಸುವಿನ ಬಾಯೊಳಗೆ ಸುರಿದಿದ್ದಾರೆ. ಈ ವಿಕೃತ ದೃಶ್ಯವನ್ನು ನೋಡಿ ಪ್ರಾಣಿ ಪ್ರಿಯರ ರಕ್ತ ಕುದಿಯುತ್ತಿದೆ.
ಕುಡಿದ ಮೇಲೆ ಹಸುವಿನಿಂದ ಬಂಡಿ ಎಳೆಯುವ ದರ್ಪ
ಹಸುವಿಗೆ ಮದ್ಯ ಕುಡಿಸಿದ್ದಷ್ಟೇ ಅಲ್ಲ, ಅದಾದ ನಂತರ ಆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಹಸುವನ್ನು ಬಂಡಿಯೊಂದಕ್ಕೆ ಕಟ್ಟಿ ಎಳೆಯುವಂತೆ ಮಾಡಿದ್ದಾರೆ. ಈ ದೃಶ್ಯವಂತೂ ಎಂತಹ ಕಟುಕನಿಗೂ ಮರುಕ ಹುಟ್ಟಿಸುವಂತಿದೆ. ಬಂಡಿಯ ಮೇಲೆ ಹೋಳಿ ಆಡುವವರು ರಾಜಾರೋಷವಾಗಿ ಕುಳಿತಿದ್ದರೆ, ಆ ಮೂಕ ಪ್ರಾಣಿ ಕಷ್ಟಪಟ್ಟು ಅದನ್ನು ಎಳೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಅಂತರಜಾಲದಲ್ಲಿ ಕಿಚ್ಚು ಹಚ್ಚಿದ ವಿಡಿಯೋ
ನಾಟಿವರ್ಲ್ಡ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಮಾನವೀಯತೆ ಅವಮಾನದಿಂದ ಸತ್ತುಹೋಗಿದೆ ಎಂದು ಒಬ್ಬರು ಕಿಡಿಕಾರಿದರೆ, ಗೋವನ್ನು ತಾಯಿ ಎಂದು ಪೂಜಿಸುವವರು ಇವರೇನಾ? ಹೆತ್ತ ತಾಯಿಗೆ ಮದ್ಯ ಕುಡಿಸುತ್ತೀರಾ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಹಲವರು ಇವರನ್ನು ಕೂಡಲೇ ಪತ್ತೆಹಚ್ಚಿ ಜೈಲಿಗಟ್ಟಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಇದು ನಾಚಿಕೆಗೇಡಿನ ಸಂಗತಿ
ಹಬ್ಬಗಳು ಪ್ರೀತಿ ಮತ್ತು ಸೌಹಾರ್ದತೆಯನ್ನು ಸಾರಬೇಕು. ಆದರೆ ಪ್ರಾಣಿಗಳನ್ನು ಹಿಂಸಿಸಿ ಆನಂದ ಪಡುವುದು ವಿಕೃತಿಯ ಪರಮಾವಧಿ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ವೇದಿಕೆಯಾಗಿದ್ದು, ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ,(ಏಜನ್ಸೀಸ್).