ಪ್ಲಾಸ್ಟಿಕ್ ಕವರ್ ತೆಗಿಯದೇ ಚಿಕನ್ ಗ್ರೇವಿ ಮಾಡಿದ ಕೆಲಸದಾಕೆ
- ಪ್ಲಾಸ್ಟಿಕ್ ಕವರ್ ತೆಗಿಯದೇ ಚಿಕನ್ ಗ್ರೇವಿ ಮಾಡಿದ ಕೆಲಸದಾಕೆ
- ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಫುಲ್ ವೈರಲ್
- ನೈರ್ಮಲ್ಯದ ಬಗ್ಗೆ ಹೆಚ್ಚಿದ ಆತಂಕ
ನವದೆಹಲಿ: ಅಡುಗೆಮನೆಯಲ್ಲಿ ಎಡವಟ್ಟುಗಳು ನಡೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಕೆಲಸದಾಕೆ (House Maid) ಮಾಡಿದ ಕೆಲಸ ನೋಡಿ ಮನೆ ಮಾಲೀಕರಿಗೆ ಒಂದು ಕ್ಷಣ ತಲೆ ಸುತ್ತು ಬಂದಿದೆ! ಫ್ರಿಡ್ಜ್‌ನಲ್ಲಿದ್ದ ಚಿಕನ್ ಪ್ಯಾಕೆಟ್ನ್ನು ಬಿಚ್ಚದೆಯೇ, ಪ್ಲಾಸ್ಟಿಕ್ ಕವರ್ ಸಮೇತ ಗ್ರೇವಿಯಲ್ಲಿ ಹಾಕಿ ಬೇಯಿಸಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಗಿದ್ದೇನು?
ಇನ್‌ಸ್ಟಾಗ್ರಾಮ್ ಬಳಕೆದಾರ ಸೌರವ್ ದೇವ್ರಾನಿ ಎಂಬುವವರು ಹಂಚಿಕೊಂಡಿರುವ ಈ ಕ್ಲಿಪ್‌ನಲ್ಲಿ, ಕುದಿಯುತ್ತಿರುವ ಚಿಕನ್ ಗ್ರೇವಿಯೊಳಗೆ ಪ್ಲಾಸ್ಟಿಕ್ ಹೊದಿಕೆಯಲ್ಲೇ ಮುಚ್ಚಲ್ಪಟ್ಟ ಚಿಕನ್ ತುಂಡುಗಳು ಕಾಣಿಸುತ್ತಿವೆ. ನನ್ನ ಮನೆಯ ಕೆಲಸದಾಕೆ ಫ್ರಿಡ್ಜ್‌ನಲ್ಲಿದ್ದ ಹೆಪ್ಪುಗಟ್ಟಿದ ಚಿಕನ್ನ್ನು ಅಡುಗೆಗೆ ಬಳಸಿದ್ದಾಳೆ. ಆದರೆ ಅಡುಗೆ ಮಾಡುವ ಮೊದಲು ಅದನ್ನು ಪ್ಯಾಕೆಟ್‌ನಿಂದ ಹೊರತೆಗೆಯಬೇಕು ಎಂದು ಯಾರೂ ಅವಳಿಗೆ ಹೇಳಿರಲಿಲ್ಲ. ಈಗ ಅವಳಿಗೆ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಇವಳನ್ನು ಕೆಲಸದಿಂದ ತೆಗೆದುಹಾಕಬೇಕೇ? ಎಂದು ಜನರನ್ನು ಪ್ರಶ್ನಿಸಿದ್ದಾರೆ.
ಕಮೆಂಟ್ಗಳ ಸುರಿಮಳೆ
ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡತೊಡಗಿದ್ದಾರೆ. ಧಾರಾವಾಹಿಯೊಂದರಲ್ಲಿ ಲ್ಯಾಪ್‌ಟಾಪ್ ಅನ್ನು ಸೋಪಿನಿಂದ ತೊಳೆದಿದ್ದ ಸೊಸೆಯ ಪಾತ್ರಕ್ಕೆ ಈ ಕೆಲಸದಾಕೆಯನ್ನು ಹೋಲಿಸಲಾಗಿದೆ.
ಖಂಡಿತವಾಗಿಯೂ ಈಕೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾಳೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬ ಬಳಕೆದಾರರು ನನ್ನ ಕೆಲಸದಾಕೆ ಎಗ್ ಕರಿ ಮಾಡು ಎಂದರೆ ಮಜ್ಜಿಗೆ ಸಾರಿನಲ್ಲಿ ಮೊಟ್ಟೆ ಹಾಕಿ ಕೊಟ್ಟಿದ್ದಳು ಎಂದು ಕಮೆಂಟ್ ಮಾಡಿದ್ದಾರೆ.
ಮನೆ ಸಹಾಯಕರು ಮತ್ತು ನೈರ್ಮಲ್ಯದ ಆತಂಕ
ಒಂದೆಡೆ ಈ ಚಿಕನ್ ಘಟನೆ ನಗು ತರಿಸುತ್ತಿದ್ದರೆ, ಇನ್ನೊಂದೆಡೆ ಗಾಜಿಯಾಬಾದ್‌ನಲ್ಲಿ ನಡೆದ ಘಟನೆಯೊಂದು ಅಡುಗೆಮನೆಯ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಅಲ್ಲಿನ ಮನೆಯೊಂದರಲ್ಲಿ ಕೆಲಸದಾಕೆ ಹಿಟ್ಟನ್ನು ಬೆರೆಸಲು ಮೂತ್ರವನ್ನು ಬಳಸುತ್ತಿದ್ದ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕುಟುಂಬದವರಿಗೆ ನಿರಂತರವಾಗಿ ಕಾಡುತ್ತಿದ್ದ ಲಿವರ್ ಸಮಸ್ಯೆಯ ಹಿನ್ನೆಲೆಯಲ್ಲಿ ಅಡುಗೆಮನೆಯಲ್ಲಿ ರಹಸ್ಯವಾಗಿ ಫೋನ್ ಇಟ್ಟಾಗ ಈ ಅಸಹ್ಯಕರ ಸತ್ಯ ಬಯಲಿಗೆ ಬಂದಿತ್ತು.
ಇಂದಿನ ಕಾಲದಲ್ಲಿ ದಂಪತಿಗಳಿಬ್ಬರು ಹೊರಗೆ ಹೋಗಿ ದುಡಿವರೇ ಆಗಿರುವುದರಿಂದ ಮನೆ ಕೆಲಸಕ್ಕೆ ಸಹಾಯಕರ ಅವಶ್ಯಕತೆ ಇರುತ್ತದೆ. ಆದರೆ, ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನಲೆ ಮನೆ ಸಹಾಯಕರನ್ನು ಹೇಗೆ ನಂಬುವುದು ಎಂಬ ಗಂಭೀರ ಪ್ರಶ್ನೆ ಎದುರಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ,(ಏಜನ್ಸೀಸ್).