ನೇಪಾಳದ ಪ್ರಧಾನಿ ಬಾಲೇಂದ್ರ 'ಬಾಲೆನ್' ಶಾಮೊದಲ ಬಾರಿಗೆ ಭಾರತಕ್ಕೆ ಭೇಟಿ.
ಜಲವಿದ್ಯುತ್, ರೈಲ್ವೆ ಹಾಗೂ ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳ ಸಹಕಾರ ಬಲಪಡಿಸುವ ಬಗ್ಗೆ ಚರ್ಚೆ.
ಅಯೋಧ್ಯೆ-ಜನಕಪುರ ಸಂಪರ್ಕಿಸುವ ಹೊಸ ರೈಲಿಗೆ ಇಂದು ಮೋದಿ-ಬಾಲೆನ್ ಶಾ ಚಾಲನೆ
ನವ ದೆಹಲಿ: ಮಾರ್ಚ್ನಲ್ಲಿ ನೇಪಾಳದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಾಲೇಂದ್ರ 'ಬಾಲೆನ್' ಶಾ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖಾಮುಖಿ ಸಭೆ ಹಾಗೂ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನೇಪಾಳದ ಬಾಲೆನ್ ಶಾ ಅವರನ್ನು ಪ್ರಧಾನಿ ಮೋದಿ ಅವರು ಅದ್ದೂರಿಯಾಗಿ ಬರ ಮಾಡಿಕೊಂಡರು. ಇಂದು ಜಲವಿದ್ಯುತ್, ರೈಲ್ವೆ, ಇಂಧನ, ಸಂಪರ್ಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಭಾರತದ ಪ್ರಧಾನಿ ಮೋದಿ ಹಾಗೂ ನೇಪಾಳದ ಪ್ರಧಾನಿ ಅಯೋಧ್ಯೆ ಮತ್ತು ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ನೂತನ ವಾರದ ರೈಲು ಸೇವೆ 'ಸರಯೂ-ಕಮಲಾ ಎಕ್ಸ್ಪ್ರೆಸ್'ಗೆ ನವದೆಹಲಿಯಿಂದ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.
ಮಾರ್ಚ್ 27 ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಲೇಂದ್ರ ಶಾ ಅವರು ಕೈಗೊಂಡಿರುವ ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸ ಇದಾಗಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಭಾಗವಹಿಸಲು ಅವರು ನ್ಯೂಯಾರ್ಕ್ಗೆ ಭೇಟಿ ನೀಡಿದ್ದರು. ನೇಪಾಳದ ನೂತನ ಪ್ರಧಾನಿಗಳು ತಮ್ಮ ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸವನ್ನು ಭಾರತಕ್ಕೆ ಕೈಗೊಳ್ಳುವುದು ದೀರ್ಘಕಾಲದ ಸಂಪ್ರದಾಯವಾಗಿದೆ. ಆದರೆ, 2024ರಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮೊದಲು ಚೀನಾಕ್ಕೆ ಭೇಟಿ ನೀಡುವ ಮೂಲಕ ಈ ಸಂಪ್ರದಾಯವನ್ನು ಮುರಿದಿದ್ದರು.
ಇಂದಿನ ಕಾರ್ಯಕ್ರಮ ಹೀಗಿರಲಿದೆ
ಅಧಿಕೃತ ಸ್ವಾಗತ ಮತ್ತು ಗೌರವ ಸಮರ್ಪಣೆ
35 ವರ್ಷದ ಬಾಲೇಂದ್ರ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ. ಅಲ್ಲಿಂದ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸಿದ ನಂತರ ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ 30 ನಿಮಿಷಗಳ ಕಾಲ ಮುಖಾಮುಖಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವೆ ಒಪ್ಪಂದಗಳ (MoU) ವಿನಿಮಯ ಮತ್ತು ಜಂಟಿ ಹೇಳಿಕೆ ಬಿಡುಗಡೆಯಾಗಲಿದೆ. ನಂತರ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.
'ದಿ ಕಠ್ಮಂಡು ಪೋಸ್ಟ್' ವರದಿಯ ಪ್ರಕಾರ, ಭೈರಹವಾ ಮತ್ತು ಪೋಖರಾ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸಂಪರ್ಕ ಸುಧಾರಿಸುವ ನಿಟ್ಟಿನಲ್ಲಿ ಭಾರತದ ವಾಯುಪ್ರದೇಶದ ಮೂಲಕ ಹೆಚ್ಚುವರಿ ವಾಯು-ಪ್ರವೇಶ ಮಾರ್ಗಗಳನ್ನು ನೀಡುವಂತೆ ನೇಪಾಳ ದೀರ್ಘಕಾಲದಿಂದ ಬೇಡಿಕೆ ಇಟ್ಟಿದೆ.
ಭಾರತಕ್ಕೆ ವಿದ್ಯುತ್ ರಫ್ತು ಪ್ರಮಾಣವನ್ನು ಹೆಚ್ಚಿಸಲು ನೇಪಾಳ ಉತ್ಸುಕವಾಗಿದ್ದು, ನೇಪಾಳದ ಜಲವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನವದೆಹಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಈ ನಿಟ್ಟಿನಲ್ಲಿ ಇಂಧನ ಕ್ಷೇತ್ರದ ಸಹಕಾರದ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಷ್ಟ್ರಪತಿಗಳ ಭೇಟಿಯ ನಂತರ ಬಾಲೇಂದ್ರ ಶಾ ಅವರು ಇಂದು ಸಂಜೆ ಭಾರತದಿಂದ ನಿರ್ಗಮಿಸಲಿದ್ದಾರೆ. ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ವಿದೇಶಾಂಗ, ಹಣಕಾಸು, ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಹಾಗೂ ಇಂಧನ ಮತ್ತು ಜಲಸಂಪನ್ಮೂಲ ಖಾತೆಗಳು ಸೇರಿದಂತೆ ಕನಿಷ್ಠ ನಾಲ್ವರು ಸಚಿವರು ಈ ಪ್ರವಾಸದಲ್ಲಿ ಭಾಗಿಯಾಗಿದ್ದಾರೆ, (ಏಜೆನ್ಸೀಸ್).