ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು
ನವದೆಹಲಿ: ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಕೆಲವು ಖಾಸಗಿ ಪತ್ರಗಳು(Nehru letters) ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಿಂದ ಕಾಣೆಯಾಗಿಲ್ಲ. ಅವುಗಳು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬಳಿ ಇವೆ ಎಂದು ಕೇಂದ್ರ ಸಂಸ್ಕತಿ ಸಚಿವಾಲಯ ಬುಧವಾರ(ಡಿ. 17) ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಪಿಎಂಎಂಎಲ್‌ನಿಂದ ನೆಹರು ಅವರ ಪತ್ರಗಳು ಕಾಣೆಯಾಗಿವೆಯೇ ಎಂಬ ಬಿಜೆಪಿ ಸಂಸದ ಸಂಬಿತ್ ಪಾತ್ರಾ ಅವರ ಪ್ರಶ್ನೆಗೆ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ನೀಡಿದ ಲಿಖಿತ ಉತ್ತರದಲ್ಲಿ ಯಾವುದೇ ಪತ್ರಗಳು ಕಾಣೆಯಾಗಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು.
ಈ ಕುರಿತು ಎಕ್ಸ್ನಲ್ಲಿ ಸ್ಪಷ್ಟನೆ ನೀಡಿರುವ ಸಂಸ್ಕೃತಿ ಸಚಿವಾಲಯ, 2008 ಏಪ್ರಿಲ್ 29ರಂದು ಶ್ರೀಮತಿ ಸೋನಿಯಾ ಗಾಂಧಿಯವರ ಪ್ರತಿನಿಧಿ ಎಂ.ವಿ. ರಾಜನ್ ಅವರು, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಎಲ್ಲಾ ಖಾಸಗಿ ಕುಟುಂಬ ಪತ್ರಗಳು ಮತ್ತು ಟಿಪ್ಪಣಿಗಳನ್ನು ಶ್ರೀಮತಿ ಗಾಂಧಿಯವರು ಹಿಂದಕ್ಕೆ ಪಡೆಯಲು ಬಯಸುತ್ತಾರೆ ಎಂದು ವಿನಂತಿಸಿದರು. ಅದರಂತೆ, 2008 ರಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ 51 ಪೆಟ್ಟಿಗೆಗಳ ನೆಹರು ಪತ್ರಿಕೆಗಳನ್ನು ಕಳುಹಿಸಲಾಯಿತು ಎಂದು ತಿಳಿಸಿದೆ.
ಅಂದಿನಿಂದ ಶ್ರೀಮತಿ ಸೋನಿಯಾ ಗಾಂಧಿಯವರ ಕಚೇರಿಯೊಂದಿಗೆ ಈ ಪತ್ರಿಕೆಗಳನ್ನು ಹಿಂದಿರುಗಿಸಲು ನಿರಂತರ ಪತ್ರವ್ಯವಹಾರ ನಡೆಸುತ್ತಿದೆ. ಇದರಲ್ಲಿ 2025 ಜನವರಿ 28 ಮತ್ತು ಜುಲೈ 3ರಂದು ಎರಡು ಪತ್ರಗಳನ್ನು ಬರೆದಿದೆ. ನೆಹರೂ ಪೇಪರ್ಸ್ ಪಿಎಂಎಂಎಲ್ ನಿಂದ "ಕಾಣೆಯಾಗಿಲ್ಲ" ಏಕೆಂದರೆ ಅವುಗಳ ಸ್ಥಳ ತಿಳಿದಿದೆ. ಭಾರತದ ಮೊದಲ ಪ್ರಧಾನ ಮಂತ್ರಿಗೆ ಸಂಬಂಧಿಸಿದ ಈ ದಾಖಲೆಗಳು ರಾಷ್ಟ್ರದ ಸಾಕ್ಷ್ಯಚಿತ್ರ ಪರಂಪರೆಯ ಭಾಗವಾಗಿದೆ ಮತ್ತು ಖಾಸಗಿ ಆಸ್ತಿಯಲ್ಲ. ಪಿಎಂಎಂಎಲ್ ನಲ್ಲಿ ಅವುಗಳ ಪಾಲನೆ ಮತ್ತು ಸಂಶೋಧನೆಗಾಗಿ ನಾಗರಿಕರು ಮತ್ತು ವಿದ್ವಾಂಸರಿಗೆ ಪ್ರವೇಶ ಅತ್ಯಗತ್ಯ ಎಂದು ಹೇಳಿದೆ (ಏಜೆನ್ಸೀಸ್).