ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 
ದೇಶ

Yogi Adityanath | ಕಾಶ್ಮೀರದ ಪ್ರತ್ಯೇಕತಾವಾದಕ್ಕೆ ನೆಹರೂ ಕಾರಣ: ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಯೋಗಿ ಆದಿತ್ಯನಾಥ್

ಲಖನೌ: ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಪ್ರಮುಖ ಸಮಸ್ಯೆಯಾಗಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಸೋಮವಾರ (ಡಿ.15) ಹೇಳಿದ್ದಾರೆ. ಅಲ್ಲದೆ, ಸ್ವಾತಂತ್ರ್ಯದ ನಂತರ ಕಾಶ್ಮೀರ ನೆಹರು ನೇರ ನಿಯಂತ್ರಣದಲ್ಲಿತ್ತು ಎಂದಿದ್ದಾರೆ.
ಈ ಬಗ್ಗೆ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್​ರ 75ನೇ ಪುಣ್ಯತಿಥಿಯಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆದಿತ್ಯನಾಥ್, ಸ್ವಾತಂತ್ರ್ಯದ ನಂತರ 560 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವಲ್ಲಿ ಪಟೇಲ್ ಪಾತ್ರ ವಹಿಸಿದ್ದರು ಎಂದು ಶ್ಲಾಘಿಸಿದ್ದಾರೆ.
ಸ್ವತಂತ್ರ ನಂತರದ ಸಮಯದಲ್ಲಿ ಸೃಷ್ಟಿಯಾದ ಕಾಶ್ಮೀರದ ಪರಿಸ್ಥಿತಿಯು ಇಂದಿಗೂ ದೇಶವನ್ನು ತೊಂದರೆಗೊಳಿಸುತ್ತಿದೆ. ಅಲ್ಲದೆ, ಕಾಶ್ಮೀರದಲ್ಲಿ ಉಗ್ರವಾದ ಮತ್ತು ಪ್ರತ್ಯೇಕತಾವಾದ ಹೊರಹೊಮ್ಮಲು ಮೊದಲ ಪ್ರಧಾನಿ ತೆಗೆದುಕೊಂಡ ನಿರ್ಧಾರಗಳೆ ಕಾರಣವಾಗಿವೆ. ಅದರೆ, ನೆಹರೂ ಬದಲಿಗೆ ಸರ್ದಾರ್ ಪಟೇಲ್ ಅವರಿಗೆ ಜಮ್ಮು ಮತ್ತು ಕಾಶ್ಮೀರದ ಜವಾಬ್ದಾರಿ ನೀಡಿದ್ದರೆ, ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ ಎಂದು ಯುಪಿ ಸಿಎಂ ಯೋಗಿ ಹೇಳಿದ್ದಾರೆ.
ಜುನಾಗಢ ಮತ್ತು ಹೈದರಾಬಾದ್ ಅನ್ನು ಉಲ್ಲೇಖಿಸಿದ ಆದಿತ್ಯನಾಥ್, ಪಟೇಲ್ ಅವರ ನಾಯಕತ್ವ ಮತ್ತು ಬುದ್ಧಿವಂತಿಕೆಯ ಮೂಲಕ ಎರಡೂ ರಾಜಪ್ರಭುತ್ವದ ರಾಜ್ಯಗಳು ಭಾರತದಲ್ಲಿ ಯಶಸ್ವಿಯಾಗಿ ವಿಲೀನಗೊಂಡವು. ಈ ಪ್ರಕ್ರಿಯೆಯನ್ನು ರಾಷ್ಟ್ರೀಯ ಏಕತೆಯನ್ನು ಖಚಿತಪಡಿಸಿಕೊಳ್ಳಲು ರಕ್ತರಹಿತ ಕ್ರಾಂತಿ ಎಂದು ಬಣ್ಣಿಸಿದ್ದಾರೆ.

370ನೇ ವಿಧಿ ಮತ್ತು ಮೋದಿ ಸರ್ಕಾರ

ಸರ್ದಾರ್ ಪಟೇಲ್ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸನ್ನು ಈಡೇರಿಸಿದ್ದಕ್ಕಾಗಿ ದೇಶವು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞವಾಗಿದೆ. ಅಲ್ಲದೆ, 370 ನೇ ವಿಧಿಯನ್ನು ರದ್ದುಪಡಿಸುವುದರಿಂದ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಯಿತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.
ಅಲ್ಲದೆ, ಈ ಕ್ರಮವು ಒಂದು ರಾಷ್ಟ್ರ, ಒಂದು ಸಂವಿಧಾನ ಮತ್ತು ಒಂದು ಧ್ವಜ ಎಂಬ ಕಲ್ಪನೆಯನ್ನು ಬಲಪಡಿಸಿತು ಮತ್ತು ಐತಿಹಾಸಿಕ ತಪ್ಪುಗಳೆಂದು ವಿವರಿಸಿದ್ದನ್ನು ಸರಿಪಡಿಸಿತು ಎಂದು ಯೋಗಿ ತಿಳಿಸಿದ್ದಾರೆ.

ಪಾಕಿಸ್ತಾನವನ್ನು ಟೀಕಿಸಿದ ಯೋಗಿ

ಪಾಕಿಸ್ತಾನವನ್ನು ಟೀಕಿಸಿದ ಆದಿತ್ಯನಾಥ್, ಭಾರತಕ್ಕೆ ಸವಾಲು ಹಾಕಲು ಪ್ರಯತ್ನಿಸಿದರೆ ಅದರ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಸ್ವಾತಂತ್ರ್ಯ ಪಡೆಯುವ ಸಮಯ ಬಂದಿದೆ. ಅಲ್ಲದೆ, ಅದು ಶೀಘ್ರದಲ್ಲೇ ಭಾರತದ ಭಾಗವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕ ಆರೋಪಿ ಹಫೀಜ್ ಸಯೀದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಆದಿತ್ಯನಾಥ್, ಪಾಕಿಸ್ತಾನ ಈಗಾಗಲೇ ಹಲವಾರು ಸೋಲುಗಳನ್ನು ಅನುಭವಿಸಿದೆ ಮತ್ತು ಭಾರತವನ್ನು ಪ್ರಚೋದಿಸುವುದನ್ನು ತಪ್ಪಿಸಬೇಕು ಎಂದು ಹೇಳಿದರು. ಬಲೂಚಿಸ್ತಾನದ ವಿಷಯದ ಬಗ್ಗೆ ಭಾರತ ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮೇಲೆ ದಾಳಿ

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಭಾರತ ಆಕ್ರಮಿತ ಕಾಶ್ಮೀರ ಉಲ್ಲೇಖದ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ್, ಇಂತಹ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಕಾಶ್ಮೀರ ಸಮಸ್ಯೆಗೆ ಪಕ್ಷವನ್ನೇ ಹೊಣೆಗಾರರನ್ನಾಗಿ ಮಾಡಿದ ಅವರು, ಕಾಂಗ್ರೆಸ್​ ತಗೆದುಕೊಂಡ ಹಿಂದಿನ ನಿರ್ಧಾರಗಳು ರಾಷ್ಟ್ರದ ಹಿತಾಸಕ್ತಿಗಳಿಗೆ ಹಾನಿ ಮಾಡಿವೆ ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).