ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ನವದೆಹಲಿ: ಭಾರತದಾದ್ಯಂತ ಇಂದು(ಜೂ. 21) ನಡೆಯಲಿರುವ ನೀಟ್ ಯುಜಿ ಮರು ಪರೀಕ್ಷೆಗೂ ಮುನ್ನ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan), ವಿದ್ಯಾರ್ಥಿಗಳಿಗೆ ಭಾರತೀಯ ಪರೀಕ್ಷಾ ವ್ಯವಸ್ಥೆ ಬಗ್ಗೆ ನಂಬಿಕೆಯಿದ್ದು, ಭಯವಿಲ್ಲದೆ, ಚಿಂತೆಯಿಲ್ಲದೇ ಪರೀಕ್ಷೆ ಬರೆಯುತ್ತಾರೆ ಎಂದು ಶುಭ ಹಾರೈಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಅವರು, ಇಂದು ಮರು ಪರೀಕ್ಷೆ ನಡೆಯಲಿದೆ. ನನಗೆ NTA, ಎಲ್ಲಾ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ಭಾರತದ ಶಿಕ್ಷಣ ವ್ಯವಸ್ಥೆ ಹಾಗೂ ವಿಶೇಷವಾಗಿ ಭಾರತದ ವಿದ್ಯಾರ್ಥಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. ಸುಮಾರು 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಭಯವಿಲ್ಲದೆ, ಚಿಂತೆಯಿಲ್ಲದೆ ಕುಳಿತುಕೊಳ್ಳಿ. ಖಂಡಿತವಾಗಿಯೂ ಚೆನ್ನಾಗಿ ಮಾಡುತ್ತೀರಿ. ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳು ಎಂದಿದ್ದಾರೆ.
ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆ ಇಂದಿಗೂ ಉಳಿಯುತ್ತದೆ. ಹಾಗೆಯೇ ಮುಂದುವರಿಯಲಿ ಎಂದು ನಾನು ಭಾವಿಸುತ್ತೇನೆ. ಕೆಲವರು ವಿದ್ಯಾರ್ಥಿಗಳಲ್ಲಿ ಅನಗತ್ಯ ಆತಂಕವನ್ನು ಉಂಟು ಮಾಡುತ್ತಿದ್ದಾರೆ. ನಿರ್ಣಾಯಕ ಪರೀಕ್ಷೆಗೆ ಮುಂಚಿತವಾಗಿ ಅಭ್ಯರ್ಥಿಗಳ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯಾಗಿ ಮತ್ತು ಸಮಾಜ ಸೇವಕನಾಗಿ, ನಾನು ವಿನಂತಿಸುತ್ತೇನೆ. ದಯವಿಟ್ಟು ಭಾರತದ ಹೊಸ ಪೀಳಿಗೆಯ ಭವಿಷ್ಯದ ಜೊತೆ ಆಟವಾಡಬೇಡಿ. ಅದನ್ನು ತಮಾಷೆಯಾಗಿ ಮಾಡಬೇಡಿ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದನ್ನೂ ನಾವು ಮಾಡಬಾರದು. ಕೆಲವೇ ಗಂಟೆಗಳಲ್ಲಿ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).