ಮುಂಬೈ: 2026ರ ನೀಟ್-ಯುಜಿಸಿ ಪರೀಕ್ಷಾ ಪ್ರಶ್ನೆಪತ್ರಿಕೆ(Paper leak case) ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ತನ್ನ ಮಗನಿಗಾಗಿ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಖರೀದಿಸಿದ ಆರೋಪದ ಮೇಲೆ ಲಾತೂರ್ ಮೂಲದ ಮಕ್ಕಳ ತಜ್ಞ ಡಾ. ಮನೋಜ್ ಶಿರೂರೆ ಅವರನ್ನು ಸಿಬಿಐ ಬಂಧಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವ್ಯಾಪಕ ತನಿಖೆಯಲ್ಲಿ ಪೋಷಕರನ್ನು ವಶಕ್ಕೆ ಪಡೆದ ಮೊದಲ ಪ್ರಕರಣ ಇದಾಗಿದೆ. ಡಾ. ಶಿರೂರೆ ಅವರು ಮೇ 3ರ ಪರೀಕ್ಷೆಗೆ ಮುನ್ನ ಲಾತೂರ್ ಮೂಲದ ಆರ್‌ಸಿಸಿ ಕೋಚಿಂಗ್ ಸ್ಥಾಪಕ ಶಿವರಾಜ್ ಮೋಟೆಗಾಂವ್ಕರ್ ಅವರಿಂದ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಸಿಬಿಐ ತನಿಖೆಯಲ್ಲಿ ಹಲವಾರು ಪ್ರಭಾವಿ ಪೋಷಕರು ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪಿ.ವಿ. ಕುಲಕರ್ಣಿ ಮತ್ತು ಮೋಟೆಗಾಂವ್ಕರ್ ಅವರಿಗೆ ಪರೀಕ್ಷಾ ಪತ್ರಿಕೆಯನ್ನು ಮುಂಚಿತವಾಗಿ ಪಡೆಯಲು 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಭಾಗಿಯಾದ ಮತ್ತಷ್ಟು ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಅಂತಿಮ ಪರೀಕ್ಷೆಯಲ್ಲಿನ 45 ರಸಾಯನಶಾಸ್ತ್ರ ಪ್ರಶ್ನೆಗಳಲ್ಲಿ 43 ಪ್ರಶ್ನೆಗಳು ಆರ್‌ಸಿಸಿಯ ಊಹೆ ಪತ್ರಿಕೆಯ ಮೂಲಕ ಪ್ರಸಾರವಾದ ಪ್ರಶ್ನೆಗಳಿಗೆ ಹೊಂದಿಕೆಯಾಗುತ್ತವೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. ಪರೀಕ್ಷೆಗೆ ಹತ್ತು ದಿನಗಳ ಮೊದಲು ಅಣಕು ಪರೀಕ್ಷೆಗಳ ಸಮಯದಲ್ಲಿ ನೀಡಲಾದ ಪ್ರಶ್ನೆಗಳು ಅಂತಿಮ ಪತ್ರಿಕೆಯಲ್ಲಿ ಸಂಖ್ಯೆಗಳು ಮತ್ತು ಸ್ವರೂಪಗಳು ಸೇರಿದಂತೆ ಎಲ್ಲವೂ ಒಂದೇ ರೀತಿಯಲ್ಲಿವೆ ಎಂಬುದು ಕಂಡು ಬಂದಿದೆ. ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್).