ಮಾಜಿ ಬಿಜೆಪಿ ನಾಯಕ ಕೆ. ಅಣ್ನಾಮಲೈ
- ವಿದ್ಯಾರ್ಥಿ ಪ್ರತಿಭಟನೆಗೆ ಮಾಜಿ ನಾಯಕ ಕೆ.ಅಣ್ಣಾಮಲೈ ಬೆಂಬಲ
- 5 ವರ್ಷಗಳಲ್ಲಿ 3 ಬಾರಿ ಲೀಕ್ ಆದರೂ ಹೊಣೆ ಇಲ್ಲ
- ಪ್ರತಿಭಟನಾಕಾರರ ಜತೆ ಮಾತುಕತೆಗೆ ವಿಳಂಬ ಏಕೆ
ಚೆನ್ನೈ: ಪ್ರಸ್ತುತ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುತ್ತಿರುವ ದೇಶವ್ಯಾಪಿ ವಿದ್ಯಾರ್ಥಿಗಳ ಪ್ರತಿಭಟನೆಯ ಕೂಗಿಗೆ ಇದೀಗ ತಮಿಳುನಾಡಿನ ಮಾಜಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ದನಿಗೂಡಿಸಿದ್ದಾರೆ.
ಐದು ವರ್ಷಗಳಲ್ಲಿ 3 ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇಷ್ಟಾದರೂ ಯಾರೂ ಹೊಣೆ ಹೊತ್ತುಕೊಂಡಿಲ್ಲ. ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲು ಕೇಂದ್ರ ಸರ್ಕಾರದ ವಿಳಂಬ ನೀತಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಮಾಜಿ ಐಪಿಎಸ್ ಅಧಿಕಾರಿ, "ಕಳೆದ ಹಲವು ವರ್ಷಗಳಿಂದ ನಾನು ವೈಯಕ್ತಿಕವಾಗಿ ನೀಟ್ ಪರೀಕ್ಷೆಯನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಈ ಪರೀಕ್ಷೆಯು ದೇಶವ್ಯಾಪಿ ಮೆರಿಟ್ ಆಧಾರಿತ ಏಕರೂಪತೆಯನ್ನು ತರುತ್ತದೆ ಮತ್ತು ಬಡ ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವೈದ್ಯರಾಗುವ ಕನಸನ್ನು ನನಸಾಗಿಸಿಕೊಳ್ಳಲು ಸಮಾನ ಅವಕಾಶ ನೀಡುತ್ತದೆ ಎಂದು ನಾನು ನಂಬಿದ್ದೆ" ಎಂದಿದ್ದಾರೆ.
ವ್ಯವಸ್ಥೆಯ ವೈಫಲ್ಯಕ್ಕೆ ಕಿಡಿ
ಕಳೆದ 5 ವರ್ಷಗಳಲ್ಲಿ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಬರೋಬ್ಬರಿ 3 ಬಾರಿ ಸೋರಿಕೆಯಾಗಿದೆ. ಏಕರೂಪತೆ ತರಬೇಕಾದ ವ್ಯವಸ್ಥೆಯೇ ಪದೇ ಪದೇ ವಿಫಲವಾದಾಗ, ಮತ್ತೆ ಮತ್ತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೇಗಿರಬಹುದು ನೀವೇ ಊಹಿಸಿಕೊಳ್ಳಿ. ಇಷ್ಟೆಲ್ಲ ಅವಾಂತರ ನಡೆದರೂ ಯಾರೊಬ್ಬರೂ ಹೊಣೆಗಾರಿಕೆಯನ್ನು ಹೊತ್ತಿಲ್ಲ. ಇದೇ ವಿದ್ಯಾರ್ಥಿಗಳು ಬೀದಿಗಿಳಿದು ತಮ್ಮ ಅಳಲನ್ನು ತೋಡಿಕೊಳ್ಳಲು ಮುಖ್ಯ ಕಾರಣ ಎಂದು ದೂರಿದ್ದಾರೆ.
ಮಾತುಕತೆಗೆ ಇನ್ನೂ ವಿಳಂಬ ಏಕೆ?
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಒತ್ತಿ ಹೇಳಿರುವ ಅಣ್ಣಾಮಲೈ, ಕೇಂದ್ರದ ವಿಳಂಬ ಧೋರಣೆಯನ್ನು ಈ ಹಂತದಲ್ಲಿ ಪ್ರಶ್ನಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವವರೆಗೆ ಕೇಂದ್ರ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಏಕೆ ಕಾಯುತ್ತಿತ್ತು? ಅರ್ಥಪೂರ್ಣ ಸಂವಾದವನ್ನು ಆರಂಭಿಸಲು ಇಷ್ಟೊಂದು ವಿಳಂಬ ಆಗಿದ್ದು ಏಕೆ? ಅಷ್ಟಕ್ಕೂ, ನಿಮ್ಮನ್ನು ತಡೆದದ್ದು ಯಾರು?" ಎಂದು ಕೇಂದ್ರ ಸರ್ಕಾರಕ್ಕೆ ಕುಟುಕಿದ್ದಾರೆ.
ಪ್ರತಿಭಟನಾಕಾರರಿಗೆ ಅಣ್ಣಾಮಲೈ ಕಿವಿಮಾತು
ಒಂದೆಡೆ ಸರ್ಕಾರಕ್ಕೆ ಚಾಟಿ ಬೀಸಿದ ಅಣ್ಣಾಮಲೈ, ಇನ್ನೊಂದೆಡೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಮೂಹಕ್ಕೆ ಮತ್ತು ನಾಯಕರಿಗೆ ಪ್ರಮುಖ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ. ಪ್ರತಿಭಟನೆಗಳು ವಾರಗಟ್ಟಲೆ ಸುದೀರ್ಘವಾಗಿ ನಡೆದಾಗ, ಕೆಲವು ಸ್ವಾರ್ಥ ಹಿತಾಸಕ್ತಿಗಳು ಅಥವಾ ರಾಜಕೀಯ ದುರುದ್ದೇಶವುಳ್ಳ ವ್ಯಕ್ತಿಗಳು ನಿಮ್ಮನ್ನು ಹೈಜಾಕ್ ಮಾಡಲು ಯತ್ನಿಸುತ್ತಾರೆ. ಮೂಲ ಬೇಡಿಕೆಗಳಿಗೆ ಸಂಬಂಧವಿಲ್ಲದ ವಿಷಯಗಳನ್ನು ತಂದು ಧರಣಿಯ ದಿಕ್ಕು ತಪ್ಪಿಸಲು ಸಂಚು ರೂಪಿಸುತ್ತಾರೆ. ಇದೆಲ್ಲವೂ ನಿಮ್ಮ ಗಮನದಲ್ಲಿರಲಿ ಎಂದಿದ್ದಾರೆ,(ಏಜೆನ್ಸೀಸ್).