ನೀಟ್​ ಮರುಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಪನ್ಶುಲ್ ಬನ್ಸಾಲ್  
ದೇಶ

ಓದಲು ಸಮಯವಿದ್ದಾಗ ಹೋರಾಟಕ್ಕೆ ಏಕೆ ಸೇರಲಿ? ನೀಟ್​ ರೀ-ಎಕ್ಸಾಂನಲ್ಲಿ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಬಿಚ್ಚುನುಡಿ​

ಪ್ರಮುಖ ಮುಖ್ಯಾಂಶಗಳು

  • ದೇಶವ್ಯಾಪಿ ನೀಟ್​ ಸೋರಿಕೆ, ಸಿಜೆಪಿ ಮೇಲಿನ ಲಾಠಿ ಚಾರ್ಚ್​ಗೆ ಭಾರಿ ಪ್ರತಿಭಟನೆ
  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗೆ ಪಟ್ಟು
  • ಇದೇ ಸಮಯದಲ್ಲಿ ನೀಟ್​ ಮರುಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಅಚ್ಚರಿ ಹೇಳಿಕೆ
ನವದೆಹಲಿ: ಜಂತರ್​ ಮಂತರ್​ನಲ್ಲಿ ನೀಟ್​ ವೈದ್ಯಕೀಯ ಪರೀಕ್ಷೆಯಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಪಕ್ಷ ಮತ್ತು ವಿದ್ಯಾರ್ಥಿಗಳ ಸಮೂಹ ಬೃಹತ್​ ಪ್ರತಿಭಟನೆ ಕೈಗೊಳ್ಳುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗೆ ಪಟ್ಟು ಹಿಡಿದಿದೆ. ಇದೇ ಸಮಯದಲ್ಲಿ ಇತ್ತೀಚೆಗೆ ನಡೆದ ಮರುಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ವಿದ್ಯಾರ್ಥಿಯೊಬ್ಬನ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಗುರಿಯಾಗಿದೆ.
ಹರಿಯಾಣ ಮೂಲದ ಪನ್ಶುಲ್ ಬನ್ಸಾಲ್ ಎಂಬ ಯುವಕ, ನೀಟ್ ಮರುಪರೀಕ್ಷೆಯಲ್ಲಿ ಶೇ.99.9999ರಷ್ಟು ಅಂಕಗಳೊಂದಿಗೆ ಎರಡನೇ ಶ್ರೇಯಾಂಕ ಗಳಿಸಿದ್ದಾನೆ. ಪ್ರಸ್ತುತ ನಡೆಯುತ್ತಿರುವ ಹೋರಾಟ, ಗೊಂದಲಗಳ ಬಗ್ಗೆ ಎಲ್ಲಿಯೂ ತುಟಿಬಿಚ್ಚದ ವಿದ್ಯಾರ್ಥಿ, ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾದಾಗ ಆರಂಭದಲ್ಲಿ ನಾನು ಬಹಳ ನಿರಾಶೆಗೊಂಡಿದ್ದೆ ಎಂದಿದ್ದಾನೆ. ಆದರೆ, ನಂತರದಲ್ಲಿ ಕುಳಿತು ಯೋಚಿಸಿದಾಗ ನನಗಿನ್ನೂ ಅವಕಾಶ ಇರುವುದನ್ನು ನೋಡಿದೆ ಎಂದು ಹೇಳಿದ್ದಾನೆ.

ಪ್ರತಿಭಟನೆಗೆ ಏಕೆ ಸೇರಲಿ?

ನನಗೆ ಓದಲು ಇನ್ನೂ ಸಮಯ ಮತ್ತು ಸಾಧ್ಯವಿರುವಾಗ ನಾನೇಕೆ ಹೋಗಿ ಪ್ರತಿಭಟನೆ ಮಾಡಲಿ? ಮನೆಯಲ್ಲಿಯೇ ಓದಿ ನನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಮೇಲೆ ನಾನು ಗಮನ ಹರಿಸಿದೆ. ನನ್ನ ಹಿಂದಿನ ಓದಿನ ವಿಧಾನವನ್ನೇ ಮುಂದುವರಿಸಿದ ಬಳಿಕ ಈ ಅದ್ಬುತ ಯಶಸ್ಸು ಗಳಿಸಲು ನನಗೆ ಸಾಧ್ಯವಾಯಿತು. ಎಲ್ಲವನ್ನೂ ಮರೆತು, ಗುರಿಯತ್ತ ಗಮನಹರಿಸಿ. ಏನೇ ಆದರೂ ಅದು ಒಳ್ಳೆಯದಕ್ಕೆ ಆಗೋದು ಎಂಬುದನ್ನು ದೃಢವಾಗಿ ನಂಬಿದ್ದೆ ಎಂದು ಪನ್ಶುಲ್ ಹೇಳಿಕೊಂಡಿದ್ದಾನೆ.
ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಪನ್ಶುಲ್​ನ ಪ್ರತಿಕ್ರಿಯೆ ಬಂದಿರುವುದು ಹಲವರನ್ನು ಕೆರಳಿಸಿದೆ. ಮತ್ತೊಂದೆಡೆ, ಈಗ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಆತ ಎಲ್ಲಿಯೂ ಹೇಳಿಕೆ ನೀಡದಿರುವುದು ಗಮನಾರ್ಹ.
ನೀಟ್​ ಮರು ಪರೀಕ್ಷೆಯಲ್ಲಿ 720 ಅಂಕಗಳಿಗೆ 715 ಅಂಕಗಳನ್ನು ಗಳಿಸುವ ಮೂಲಕ ಎರಡನೇ ಶ್ರೇಯಾಂಕ ಗಳಿಸಿರುವ ಬನ್ಸಾಲ್​, ಪ್ರಥಮ ಬಾರಿಗೆ ಪರೀಕ್ಷೆಯಲ್ಲಿ 706 ಅಂಕಗಳನ್ನು ಗಳಿಸಿದ್ದರಂತೆ. ಮೇ.3ರಂದು ನಡೆದ ಮೊದಲ ಪರೀಕ್ಷೆಯನ್ನು ಮೇ.12ರಂದು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನಲೆ ರದ್ದುಗೊಳಿಸಲಾಗಿತ್ತು. ಅದಾದ ನಂತರ ಜೂನ್ 21ರಂದು ಭಾರೀ ಭದ್ರತೆಯಲ್ಲಿ ಮರು ಪರೀಕ್ಷೆ ನಡೆಸಲಾಗಿದ್ದು, ಜುಲೈ 16ರಂದು ಫಲಿತಾಂಶ ಪ್ರಕಟವಾಯಿತು,(ಏಜೆನ್ಸೀಸ್).