- ಮೇ.03ರಂದು ದೇಶಾದ್ಯಂತ ನಡೆದಿದ್ದ ನೀಟ್ ಪರೀಕ್ಷೆ 2026
- ರಾಜಸ್ಥಾನದ ಸಿಕಾರ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಕೇಂದ್ರಬಿಂದು
- ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಸಂಚಲನ ಮೂಡಿಸುವ ವಿಷಯಗಳು ಬೆಳಕಿಗೆ
- ಕೇವಲ 30 ಸಾವಿರ ರೂ.ಗೆ ಪ್ರಶ್ನೆ ಪತ್ರಿಕೆ ಲೀಕ್?
NEET Leak Case: ದೇಶಾದ್ಯಂತ ಭಾರೀ ಸಂಚಲನ ಹುಟ್ಟುಹಾಕಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸದ್ಯ ಎಕ್ಸಾಂ ರದ್ದತಿಗೆ ಕಾರಣವಾಗಿದೆ. ಕಷ್ಟಪಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇದು ಶಾಪವಾಗಿ ಪರಿಣಮಿಸಿದ್ದು, ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಮುಂದೆ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಹೊಸ ದಿನಾಂಕ ಶೀಘ್ರದಲ್ಲೇ ಪ್ರಕಟಿಸುವ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಅಭ್ಯರ್ಥಿಗಳಿಗೆ ಮೋಸವಾಗಲು ಬಿಡುವುದಿಲ್ಲ ಎಂದು ಗುಡುಗಿದೆ.
ಮತ್ತೊಂದೆಡೆ, ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಪ್ರಕರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ಆದೇಶಿಸಿದೆ. ಈ ಸೋರಿಕೆ ಕೇಸ್ ರಾಜಸ್ಥಾನದಿಂದ ಹರಿಯಾಣ, ದೆಹಲಿ, ಕೇರಳ, ಜಮ್ಮು ಮತ್ತು ಕಾಶ್ಮೀರ ಮತ್ತು ಬಿಹಾರಕ್ಕೆ ಹರಡಿದೆ ಎಂಬ ಶಂಕೆಗಳು ಬಲವಾಗಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ನಾಸಿಕ್‌ನಿಂದ ಪ್ರಾರಂಭವಾಗಿ ಹರಿಯಾಣ, ಜೈಪುರ, ಜಾಮ್‌ವರಮ್‌ಗಢ ಮತ್ತು ಸಿಕಾರ್‌ಗೆ ತಲುಪಿದೆ ಎನ್ನಲಾಗಿದೆ. ಸಿಕಾರ್‌ನಿಂದ ಜಮ್ಮು-ಕಾಶ್ಮೀರ, ಬಿಹಾರ, ಕೇರಳ ಮತ್ತು ಉತ್ತರಾಖಂಡಕ್ಕೆ ಸೋರಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ
ಪರೀಕ್ಷೆ ಬರೆದಿದ್ದ 22,05,035 ವಿದ್ಯಾರ್ಥಿಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದ್ದೇ ಆದರೂ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಿರಲಿ ಎಂಬ ನಿಟ್ಟಿನಲ್ಲಿ ಸದ್ಯ ಎನ್ಟಿಎ ಈ ನಿರ್ಧಾರವನ್ನು ಕೈಗೊಂಡಿರುವುದು ಸ್ಪಷ್ಟ. ಪರೀಕ್ಷೆಯನ್ನು ರದ್ದುಪಡಿಸಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹೆಚ್ಚಾಗಿ ರಾಜಸ್ಥಾನದ ಸಿಕಾರ್‌ನಲ್ಲಿ ನಡೆದಿದೆ ಎಂದು ತನಿಖಾ ಸಂಸ್ಥೆಗಳು ನಂಬಿವೆ. ಕೋಟಾ ನಂತರ, ಸಿಕಾರ್ ತರಬೇತಿ ಕೇಂದ್ರಗಳಿಗೆ ಮೂಲ ಕೇಂದ್ರವಾಗಿದೆ. ದೇಶದ ವಿದ್ಯಾರ್ಥಿಗಳು ಸಿಕಾರ್‌ನಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಅದೇ ಸಮಯದಲ್ಲಿ, ಅನೇಕ ಕೋಚಿಂಗ್ ಸೆಂಟರ್ಗಳು ತಮ್ಮ ವಿದ್ಯಾರ್ಥಿಗಳಿಗೆ ಸೋರಿಕೆಯಾಗಿದೆ ಎನ್ನಲಾದ ಪ್ರಶ್ನೆ ಪತ್ರಿಕೆಯನ್ನು ಕೊಟ್ಟಿವೆ ಎಂದು ಹೇಳಲಾಗಿದೆ.
ಈ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬರುತ್ತದೆ ಎಂದು ಹೇಳಿಕೊಡುತ್ತಾ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿತ್ತು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಯಾವ ಪ್ರಶ್ನೆಗಳು ಬರಲಿದೆ ಎಂದು ಹೇಳಿದ್ದರೋ, ಅಂತಹ ಹಲವಾರು ಪ್ರಶ್ನೆಗಳೇ ನೀಟ್ ಪರೀಕ್ಷೆಗಳಲ್ಲಿ ಕಾಣಿಸಿಕೊಂಡಿರುವುದು ಪ್ರಶ್ನೆ ಪತ್ರಿಕೆಯ ಸೋರಿಕೆಯನ್ನು ಖಚಿತಪಡಿಸಿದೆ. ಜೀವಶಾಸ್ತ್ರದ 90, ರಸಾಯನಶಾಸ್ತ್ರದ 45 ಪ್ರಶ್ನೆಗಳನ್ನು ಆಯ್ದ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಊಹಿಸುವ ಪತ್ರಿಕೆ ಎಂದು ಹೇಳಲಾದ ಸುಮಾರು 140 ಪ್ರಶ್ನೆಗಳು ನೀಟ್ ಪತ್ರಿಕೆಯಲ್ಲಿ ಕಾಣಿಸಿಕೊಂಡಿವೆ. ಈ ಇಡೀ ಪ್ರಕರಣದ ಬಗ್ಗೆ ಮತ್ತೊಂದು ಆಘಾತಕಾರಿ ವಿಷಯವೆಂದರೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೂ ಮೊದಲು ಪ್ರಶ್ನೆ ಪತ್ರಿಕೆಯನ್ನು ಸ್ವೀಕರಿಸಿದ್ದೇವೆ ಎಂದು ಹೇಳುವ ಕರೆಯನ್ನು ಸ್ವೀಕರಿಸಿದ್ದಾರೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ, ಕೆಲವು ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ 5000ದಿಂದ 30,000 ರೂ.ಗೆ ಮಾರಾಟ ಮಾಡಲಾಗಿದೆ ಎಂಬ ಸ್ಫೋಟಕ ಸಂಗತಿಯೂ ಬೆಳಕಿಗೆ ಬಂದಿದೆ.
ಕೋಚಿಂಗ್ ಸೆಂಟರ್, ಹಾಸ್ಟೆಲ್ಗಳ ಕೈವಾಡ
ಈ ಸಮಸ್ಯೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಲವಾರು ಕೋಚಿಂಗ್ ಸೆಂಟರ್ಗಳು ಮತ್ತು ಹಾಸ್ಟೆಲ್ ಜಾಲಗಳು ಸಹ ಭಾಗಿಯಾಗಿವೆ ಎನ್ನಲಾಗಿದೆ. ಸದ್ಯ ಇದರಲ್ಲಿ ಶಾಮೀಲಾಗಿರುವುದು ಖಚಿತವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಕಾರ್‌ನ ತರಬೇತಿ ಕೇಂದ್ರ ವ್ಯವಸ್ಥಾಪಕನನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಕೇರಳದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರಿಗೆ 30,000 ರೂ.ಗೆ ಮಾದರಿ ಪತ್ರಿಕೆಯನ್ನು ಮಾರಾಟ ಮಾಡಿದ ಆರೋಪ ಈತನ ಮೇಲಿದೆ.
ವಾಟ್ಸ್ಆ್ಯಪ್, ಟೆಲಿಗ್ರಾಮ್ನಲ್ಲಿ ಹಂಚಿಕೆ
ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದ ಇನ್ನೊಂದು ವಿಷಯವೆಂದರೆ, ಈ ಪ್ರಶ್ನೆ ಪತ್ರಿಕೆ ಕೇವಲ ವಾಟ್ಸ್ಆ್ಯಪ್ನಲ್ಲಿ ಮಾತ್ರ ಶೇರ್ ಆಗಿಲ್ಲ. ಇದನ್ನು ಅನೇಕ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕವೂ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಇದನ್ನು ಹಲವು ಬಾರಿ ಫಾರ್ವರ್ಡ್ ಮಾಡಲಾಗಿದೆ. ಇದರ ಆಧಾರದ ಮೇಲೆ, ಲೀಕ್ ಪ್ರಶ್ನೆಗಳು ಅನೇಕ ಜನರನ್ನು ತಲುಪಿರುವುದು ಸ್ಪಷ್ಟವಾಗಿದೆ,(ಏಜೆನ್ಸೀಸ್).