ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ನಟರ ಪಕ್ಷ ಎಂದು ಲೇವಡಿ ಮಾಡಿದ್ದ ಟೀಕಾಕಾರರಿಗೆ ಇತ್ತೀಚಿನ ವಿಧಾನಸಭಾ ಚುನಾವಣೆಯ ಭರ್ಜರಿ ಯಶಸ್ಸನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಇಂದು ಬೆಳಿಗ್ಗೆ (ಮಂಗಳವಾರ ಜೂ.23) ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, ಕೇಂದ್ರ ಸರ್ಕಾರವು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ, ತಮಿಳುನಾಡಿನಲ್ಲಿ ತಕ್ಷಣವೇ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ನಮ್ಮ ಪಕ್ಷವು ರಾಜಕೀಯದಲ್ಲಿ ಎದುರಾದ ಎಲ್ಲಾ ಪಿತೂರಿಗಳು ಮತ್ತು ಅಡೆತಡೆಗಳನ್ನು ದಾಟಿ ಬಂದಿದೆ. ನಾವು ರಾಜಕಾರಣದಿಂದ ಸುಲಭವಾಗಿ ಮರೆಯಾಗುವವರಲ್ಲ ಎಂದು ವಿಜಯ್ ಅಸೆಂಬ್ಲಿಗೆ ನೆನಪಿಸಿದರು. ನಮಗೆ ಈ ರಾಜಕೀಯ ಅಧಿಕಾರ ಸುಲಭವಾಗಿ ಸಿಕ್ಕಿಲ್ಲ. ತಮಿಳು ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನಾವು ಎಷ್ಟು ಹೋರಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು. ಆದರೆ ಕೆಲವರು ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳದವರಂತೆ ಆಡುತ್ತಾ, ನನ್ನನ್ನು ಕೇವಲ ಒಬ್ಬ 'ನಟ' ಮತ್ತು ನಮ್ಮದೊಂದು 'ನಟರ ಪಕ್ಷ' ಎಂದು ಲೇವಡಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾವು ಅಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ರಾಜಕೀಯ ಪಾರದರ್ಶಕವಾಗಿದೆ. ನಮಗೆ ಶೇಕಡಾ 35 ರಷ್ಟು ಮತಗಳು ಸಿಕ್ಕಿವೆ. ಕೆಲವರು ನಾವು ತುಂಬಾ ಸುಲಭವಾಗಿ ಅಧಿಕಾರಕ್ಕೆ ಬಂದಿದ್ದೇವೆ ಹೇಳುತ್ತಾರೆ. ಆದರೆ, ನಾವು ಪಿತೂರಿಗಳು ಮತ್ತು ನಿರ್ಬಂಧಗಳನ್ನು ಎದುರಿಸಿ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NEET) ಕುರಿತು ಮಾತನಾಡಿದ ವಿಜಯ್, ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ತಾರತಮ್ಯ ಮತ್ತು ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಹಾಗಾಗಿ ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಕಳೆದ ಕೆಲವು ವರ್ಷಗಳಿಂದ ನೀಟ್ ಪರೀಕ್ಷೆಯು ದೇಶಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳು ಮತ್ತು ತೀವ್ರ ಮಾನಸಿಕ ಒತ್ತಡ ತಾಳಲಾರದೆ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ವೈದ್ಯಕೀಯ ಶಿಕ್ಷಣದ ವಿಶ್ವಾಸಾರ್ಹತೆಯನ್ನೇ ಹಾಳುಗೆಡವಿದೆ. ಈ ಹಿನ್ನೆಲೆಯಲ್ಲಿ, ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹಳೆಯ ಪದ್ಧತಿಯಂತೆ 12ನೇ ತರಗತಿಯ (ದ್ವಿತೀಯ ಪಿಯುಸಿ) ಅಂಕಗಳ ಆಧಾರದ ಮೇಲೆಯೇ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಬೇಕು ಎಂದು ವಿಜಯ್ ಒತ್ತಾಯಿಸಿದರು.
ದಕ್ಷಿಣ ರಾಜ್ಯದಲ್ಲಿ ಭಾವನಾತ್ಮಕ ವಿಷಯವಾಗಿರುವ ಹಿಂದಿ ಭಾಷೆಯು ಈ ಹಿಂದೆ ಹಿಂಸಾತ್ಮಕ ಗಲಭೆಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ರಾಜ್ಯದ ಭಾಷೆಯಾಗಿ 'ತಮಿಳು' ಮತ್ತು ಜಾಗತಿಕ ಸಂಪರ್ಕ ಭಾಷೆಯಾಗಿ 'ಇಂಗ್ಲಿಷ್' - ಇವೆರಡು ಭಾಷೆಗಳು ಮಾತ್ರ ತಮಿಳುನಾಡಿಗೆ ಸಾಕು ಎಂದು ಅವರು ಬಲವಾಗಿ ಒತ್ತಾಯಿಸಿದರು.
ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತದ ದುರಂತದ ನಡುವೆಯೇ ಚುನಾವಣಾ ರ್ಯಾಲಿಯಲ್ಲಿ ಮಾತನಾಡಬೇಕಾಗಿದ್ದ ಅನಿವಾರ್ಯತೆಯನ್ನು ಸ್ಮರಿಸಿದ ವಿಜಯ್, 41 ಜನರು ಪ್ರಾಣ ಕಳೆದುಕೊಂಡ ದುರಂತದ ಬಗ್ಗೆ ನನ್ನ ನೋವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಆ ನೋವು ನನ್ನನ್ನು ಎಂದಿಗೂ ಬಿಡುವುದಿಲ್ಲ. ಆದರೆ, ಆ ಸಮಯದಲ್ಲಿ ವಿರೋಧಿಗಳು ಹೊರಿಸಿದ ಆರೋಪಗಳು ಅತ್ಯಂತ ಕ್ರೂರವಾಗಿದ್ದವು. ರಾಜಕೀಯ ಇಷ್ಟೊಂದು ಕ್ರೂರವಾಗಿರುತ್ತದೆಯೇ ಎಂದರು.
ಕರೂರು ಕಾಲ್ತುಳಿತ ದುರಂತಕ್ಕೆ ಟಿವಿಕೆ ಕಾರಣ ಎಂದು ದೂಷಿಸಿದ್ದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯ್ ಪೊಲೀಸರ ನಿಯಮಗಳನ್ನು ಪಾಲಿಸಿಲ್ಲ ಎಂದು ತಮ್ಮ ಮೇಲೆ ಗೂಬೆ ಕೂರಿಸಿದ್ದ ಡಿಎಂಕೆ ನಾಯಕರಿಗೆ "1967ರಲ್ಲಿ ಅಣ್ಣಾದೊರೈ ಹಾಗೂ 1977ರಲ್ಲಿ ಎಂಜಿಆರ್ ಅವರು ತಮಿಳುನಾಡಿನಲ್ಲಿ ಸಾಮಾನ್ಯ ಜನರಿಗಾಗಿ ಸರ್ಕಾರ ರಚಿಸಿದ್ದರು. ಅದೇ ರೀತಿ ಈಗ 2026ರಲ್ಲಿ ವಿಜಯ್ ನೇತೃತ್ವದ ಸರ್ಕಾರವೂ ಸಾಮಾನ್ಯ ಜನರಿಗಾಗಿ ಅಧಿಕಾರ ನಡೆಸುತ್ತಿದೆ, ಎಂದು ಘಂಟಾಘೋಷವಾಗಿ ಹೇಳಿದರು.
ನಮ್ಮ ರಾಜಕೀಯ ಮತ್ತು ಆಡಳಿತ ಕೇವಲ ಒಂದು ನಿರ್ದಿಷ್ಟ ಕುಟುಂಬಕ್ಕೆ ಪ್ರಾಮುಖ್ಯತೆ ನೀಡುವುದಲ್ಲ. ಬದಲಿಗೆ, ತಮಿಳುನಾಡಿನ ಪ್ರತಿಯೊಂದು ಕುಟುಂಬದ ಏಳಿಗೆ ಮತ್ತು ಕಲ್ಯಾಣವೇ ನಮ್ಮ ಪಕ್ಷದ ಮುಖ್ಯ ಉದ್ದೇಶ," ಎಂದು ಅವರು ದೃಢವಾಗಿ ಪ್ರತಿಪಾದಿಸುವ ಮೂಲಕ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದರು (ಏಜೆನ್ಸೀಸ್).