- ಇಶಾನ್-ವಿಶಾಲ್ ಅಭಿನಯದ 'ಹೋಮ್‌ಬೌಂಡ್' ಆಸ್ಕರ್ ಶಾರ್ಟ್‌ಲಿಸ್ಟ್‌ನಲ್ಲಿದೆ
- ಭಾರತದ ಹೋಮ್‌ಬೌಂಡ್ ಆಸ್ಕರ್‌ಗೆ ಮತಷ್ಟು ಹತ್ತಿರ..
- ಹೋಮ್‌ಬೌಂಡ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿದೆ
ಮುಂಬೈ: ನೀರಜ್ ಘಯ್ವಾನ್ ನಿರ್ದೇಶನದ ಮತ್ತು ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ ಹೋಮ್‌ಬೌಂಡ್ (Homebound) ಚಲನಚಿತ್ರವು ಭಾರತದ ಅಧಿಕೃತ ಆಯ್ಕೆಯಾಗಿ 98ನೇ ಆಸ್ಕರ್ 2026ನ (ಅಕಾಡೆಮಿ ಅವಾರ್ಡ್ಸ್)ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದ ಶಾರ್ಟ್‌ಲಿಸ್ಟ್‌ಗೆ ಆಯ್ಕೆಯಾಗಿದೆ.
ಡಿಸೆಂಬರ್ 16ರಂದು(ಮಂಗಳವಾರ)ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಪ್ರಕಟಿಸಿದ ಶಾರ್ಟ್‌ಲಿಸ್ಟ್‌ನಲ್ಲಿ 15 ಚಿತ್ರಗಳ ಪೈಕಿ ಭಾರತದ ಪ್ರತಿನಿಧಿಯಾಗಿ ಹೋಮ್‌ಬೌಂಡ್ ಸ್ಥಾನ ಪಡೆದಿದೆ. ಇದು ಇಶಾನ್ ಖಟ್ಟರ್, ವಿಶಾಲ್ ಜೇಠ್ವಾ ಮತ್ತು ಜಾಹ್ನವಿ ಕಪೂರ್ ಅಭಿನಯದ ಚಿತ್ರವಾಗಿದ್ದು, ಮಾರ್ಟಿನ್ ಸ್ಕಾರ್ಸೆಸೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದಾರೆ.
ಈ ಚಿತ್ರವು 2025ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿತ್ತು ಮತ್ತು ನವೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿದೆ. ಇದು ಆಸ್ಕರ್‌ನಲ್ಲಿ ಭಾರತಕ್ಕೆ ಬಹುದೊಡ್ಡ ಸಾಧನೆಯ ಹೆಜ್ಜೆಯಾಗಿದೆ.
ಹೋಮ್‌ಬೌಂಡ್ ಚಿತ್ರದ ಕಥಾವಸ್ತು
ಈ ಚಿತ್ರವು ಉತ್ತರ ಭಾರತದ ಸಣ್ಣ ಹಳ್ಳಿಯೊಂದರಲ್ಲಿ ಬಾಲ್ಯದಿಂದಲೇ ಸ್ನೇಹಿತರಾಗಿರುವ ಇಬ್ಬರು ಯುವಕರ ಕಥೆಯನ್ನು ಹೇಳುತ್ತದೆ. ಚಂದನ್ (ದಲಿತ ಸಮುದಾಯದವನಾಗಿ ವಿಶಾಲ್ ಜೇಠ್ವಾ ಅಭಿನಯ) ಮತ್ತು ಶೋಯಬ್ (ಮುಸ್ಲಿಂ ಸಮುದಾಯದವನಾಗಿ ಇಶಾನ್ ಖಟ್ಟರ್ ಅಭಿನಯ). ಇಬ್ಬರೂ ತಮ್ಮ ಬಡತನ, ಜಾತಿ-ಧರ್ಮದ ತಾರತಮ್ಯಗಳಿಂದಾಗಿ ನಿರಾಕರಿಸಲ್ಪಟ್ಟಿರುವ ಗೌರವಯುತ ಬದುಕು ಮತ್ತು ಸ್ಥಿರತೆಯನ್ನು ಕಾಣುವ ನಿರೀಕ್ಷೆಯಲ್ಲಿ ಪೊಲೀಸ್ ಇಲಾಖೆಯ ನೌಕರಿಗೆ ಪರೀಕ್ಷೆ ಬರೆಯಲು ನಗರಕ್ಕೆ ಹೋಗುತ್ತಾರೆ. ಆದರೆ, ಕನಸುಗಳ ಹಾದಿಯಲ್ಲಿ ಬರುವ ಸವಾಲುಗಳು, ನಿರಾಶೆಗಳು ಮತ್ತು ಸಮಾಜದ ಕಟು ಸತ್ಯಗಳು ಅವರ ಅವಿಭಾಜ್ಯ ಸ್ನೇಹವನ್ನು ಪರೀಕ್ಷೆಗೊಡುತ್ತವೆ.
ಚಿತ್ರವು 2020ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಡೆಯುವ ಮೈಗ್ರೆಂಟ್ ಕಾರ್ಮಿಕರ ಕಷ್ಟಗಳನ್ನು ಆಧರಿಸಿದ್ದು, ನ್ಯೂಯಾರ್ಕ್ ಟೈಮ್ಸ್‌ನ ಒಂದು ಲೇಖನದಿಂದ ಸ್ಫೂರ್ತಿ ಪಡೆದಿದೆ. ಇದು ಜಾತಿ, ಧರ್ಮ, ವರ್ಗ ತಾರತಮ್ಯ, ಸ್ನೇಹ ಮತ್ತು ಮಾನವೀಯತೆಯ ಬಗ್ಗೆ ಆಳವಾದ ಸಾಮಾಜಿಕ ಟೀಕೆಯನ್ನು ಮಾಡುತ್ತದೆ. ಜಾಹ್ನವಿ ಕಪೂರ್ ಅವರು ಚಂದನ್‌ನ ಪ್ರೀತಿಯಾಗಿ ಸುಧಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ, ಆದರೆ ಮುಖ್ಯ ಕಥೆ ಇಬ್ಬರು ಗೆಳೆಯರ ಸ್ನೇಹದ ಸುತ್ತಲೇ ಸಾಗುತ್ತದೆ,(ಏಜೆನ್ಸೀಸ್).