ಕೇರಳದಲ್ಲಿ ಕೇವಲ ಒಂದೇ ದಿನದಲ್ಲಿ ಸೆಲೆಬ್ರಿಟಿಯಾದ ಪೊಲೀಸ್ ಕಾನ್ಸ್‌ಟೆಬಲ್! ಇವರು ಮಾಡಿದ್ದಾದರೂ ಏನು? Viral Policeman
- ಗುರುವಾಯೂರು ದೇವಸ್ಥಾನದಲ್ಲಿ ಕರ್ತವ್ಯದ ವೇಳೆ ವೈರಲ್ ಆದ ಯುವ ಪೊಲೀಸ್ ಕಾನ್ಸ್‌ಟೆಬಲ್ ಅರ್ಜುನ್
- ಸೌಮ್ಯ ಸ್ವಭಾವ ಹಾಗೂ ವಿನಯದ ವರ್ತನೆಯ ಮೂಲಕ ಭಕ್ತರ ಹಾಗೂ ಜನರ ಮನಗೆದ್ದ ಪ್ರತಿಭಾವಂತ ಪೇದೆ
- ಕೇರಳ ಪಿಎಸ್‌ಸಿ ಪರೀಕ್ಷೆಯಲ್ಲಿ 35ನೇ ರ್ಯಾಂಕ್ ಗಳಿಸಿ ಕನಸಿನ ಪೊಲೀಸ್ ವೃತ್ತಿಯನ್ನು ಪಡೆದುಕೊಂಡ ಸಾಧಕ
- ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಯಾದ ಯುವಕ
ತಿರುವನಂತಪುರಂ: ಕೇರಳದ ಗುರುವಾಯೂರು ಶ್ರೀಕೃಷ್ಣ ಜಯಂತಿ ಉತ್ಸವದ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣ ಕರ್ತವ್ಯದಲ್ಲಿದ್ದ 27 ವರ್ಷದ ಪೊಲೀಸ್ ಕಾನ್ಸ್‌ಟೆಬಲ್ ಅರ್ಜುನ್ ( Viral Policeman ), ತಮ್ಮ ಸೌಮ್ಯ ಸ್ವಭಾವ ಮತ್ತು ವಿನಯದ ವರ್ತನೆಯಿಂದಲೇ ಜನರ ಮನಗೆದ್ದಿದ್ದಾರೆ. ಕರ್ತವ್ಯದ ನಡುವೆಯೂ ಅರ್ಜುನ್ ಅವರು ಜನರಿಗೆ ನೀಡಿದ ಮೃದುವಾದ ಗೌರವ ಹಾಗೂ ಅವರ ವ್ಯಕ್ತಿತ್ವ ಅಲ್ಲಿಗೆ ಆಗಮಿಸಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಕೆಲವರು ಇದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ, ಕ್ಷಣ ಮಾತ್ರದಲ್ಲೇ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿತು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೂಟನಾಡ್ ಮೂಲದವರಾದ ಅರ್ಜುನ್, ರಾಜ್ಯದ ಪ್ರಸಿದ್ಧ ತುಳ್ಳಾಲ್ ಕಲಾವಿದ ಕಲಾಮಂಡಲಂ ನಂದಕುಮಾರ್ ಹಾಗೂ ಕಿರುಚಿತ್ರ ನಟ ಗೋಕುಲ್‌ದಾಸ್ ಅವರ ಕಿರಿಯ ಸಹೋದರ. ತಂದೆ ರಾಮಚಂದ್ರನ್ ಮತ್ತು ದಿವಂಗತ ತಾಯಿ ಗಿರಿಜಾ ಅವರ ನಾಲ್ಕು ಮಕ್ಕಳ ಪೈಕಿ ಅರ್ಜುನ್ ಅತ್ಯಂತ ಕಿರಿಯವರು. ಆರಂಭದಲ್ಲಿ ಅರ್ಜುನ್ ಅವರನ್ನು ಪ್ರಸಿದ್ಧ ಕಲಾವಿದರ ತಮ್ಮ ಎಂದೇ ಗುರುತಿಸಲಾಗುತ್ತಿತ್ತು, ಆದರೆ ಇಂದು ಇಡೀ ಕೇರಳದಲ್ಲಿ ಅವರನ್ನು "ಗುರುವಾಯೂರಿನ ವೈರಲ್ ಪೊಲೀಸ್" ಎಂದೇ ಕೊಂಡಾಡಲಾಗುತ್ತಿದ್ದು, ಅವರ ಕುಟುಂಬಕ್ಕೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
ಕೇವಲ ಆಕರ್ಷಕ ಮೈಕಟ್ಟು ಮತ್ತು ರೂಪವಷ್ಟೇ ಅಲ್ಲದೆ, ಅರ್ಜುನ್ ಅವರ ಶ್ರಮ ಮತ್ತು ಸಾಧನೆ ಕೂಡ ಪ್ರಶಂಸನಾರ್ಹವಾಗಿದೆ. ಸುಮಾರು 35,000 ಅಭ್ಯರ್ಥಿಗಳು ಬರೆದ ಕೇರಳ ಪಿಎಸ್‌ಸಿ (PSC) ಪರೀಕ್ಷೆಯಲ್ಲಿ 35ನೇ ರ್ಯಾಂಕ್ ಪಡೆಯುವ ಮೂಲಕ ಅವರು ಪೊಲೀಸ್ ವೃತ್ತಿಯನ್ನು ತಮ್ಮದಾಗಿಸಿಕೊಂಡರು. 2025ರ ಜನವರಿಯಲ್ಲಿ ಮುಟ್ಟಿಕುಳಂಗರ ಟ್ರೈನಿಂಗ್ ಅಕಾಡೆಮಿಗೆ ಸೇರಿ, ಅದೇ ವರ್ಷದ ನವೆಂಬರ್‌ನಲ್ಲಿ ಕಣ್ಣೂರಿನಲ್ಲಿ ತರಬೇತಿ ಪೂರ್ಣಗೊಳಿಸಿ ಪಾಸ್ ಔಟ್ ಆದರು. ಸದ್ಯ ಅವರು ತ್ರಿಶೂರ್‌ನ ರಾಮವರ್ಮಪುರಂನಲ್ಲಿರುವ ಕೆಎಪಿ 2 (KAP 2) ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಜನರಿಗೆ ಸೇವೆ ಸಲ್ಲಿಸಬೇಕೆಂಬ ತನ್ನ ಬಾಲ್ಯದ ಕನಸನ್ನು ನೇರವೇರಿಸಿಕೊಂಡಿರುವ ಅರ್ಜುನ್, ಗುರುವಾಯೂರು ದೇವಸ್ಥಾನದಂತಹ ಪುಣ್ಯಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಸಿಕ್ಕ ಅವಕಾಶವೇ ತಮಗೆ ಸಿಕ್ಕ ದೊಡ್ಡ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸುತ್ತಾರೆ. ಪೊಲೀಸ್ ವೃತ್ತಿಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅರ್ಜುನ್ ಅವರ ಸರಳತೆ ಮತ್ತು ವ್ಯಕ್ತಿತ್ವಕ್ಕೆ ಯುವಜನತೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 55,000ಕ್ಕೂ ಅಧಿಕ ಹೊಸ ಫಾಲೋವರ್ಸ್‌ಗಳು ಸೇರ್ಪಡೆಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಈ ಜನಪ್ರಿಯತೆಯು ಅರ್ಜುನ್ ಅವರನ್ನು ರಾತ್ರೋರಾತ್ರಿ ಸೆಲೆಬ್ರಿಟಿಯನ್ನಾಗಿ ಮಾಡಿದೆ. ಸೌಮ್ಯ ಸ್ವಭಾವದಿಂದ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ಹೃದಯ ಗೆದ್ದಿದ್ದ ಈ ಯುವ ಪೇದೆ, ಇಂದು ಇಡೀ ದಕ್ಷಿಣ ಭಾರತದ ಯುವಕರಿಗೆ ಸ್ಪೆಷಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಪ್ರಚಾರದ ಆಸೆ ಇಲ್ಲದೆ ಪ್ರಾಮಾಣಿಕವಾಗಿ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂಬುದಕ್ಕೆ ಅರ್ಜುನ್ ಅವರ ಈ ವೈರಲ್ ಯಶಸ್ಸೇ ಅತ್ಯುತ್ತಮ ಉದಾಹರಣೆಯಾಗಿದೆ, (ಏಜೆನ್ಸೀಸ್).