Bihar Power Sharing | ಸಿಎಂ ಸಾಮ್ರಾಟ್ ಚೌಧರಿ ಮತ್ತು ನಿತೀಶ್ ಕುಮಾರ್
ಪಟನಾ: ಬಿಹಾರ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ಸಚಿವ ಸ್ಥಾನಗಳ ಹಂಚಿಕೆಯ ಕುರಿತಾದ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಹೊಸ ಸಂಪುಟದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಸಮತೋಲಿತ ಅಧಿಕಾರ ಹಂಚಿಕೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸ್ಥಾನಗಳ ಹಂಚಿಕೆ ಈ ಕೆಳಗಿನಂತಿರಲಿದೆ
ಬಿಜೆಪಿ: ಮುಖ್ಯಮಂತ್ರಿ ಸೇರಿದಂತೆ ಒಟ್ಟು 15 ಸಚಿವ ಸ್ಥಾನಗಳು ಬಿಜೆಪಿಗೆ ಲಭ್ಯವಾಗಲಿವೆ.
ಜೆಡಿಯು: ಇಬ್ಬರು ಉಪಮುಖ್ಯಮಂತ್ರಿಗಳು (ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಕುಮಾರ್ ಯಾದವ್) ಸೇರಿದಂತೆ ಒಟ್ಟು 17 ಸಚಿವ ಸ್ಥಾನಗಳನ್ನು ಜೆಡಿಯು ಪಡೆಯಲಿದೆ.
ಇತರ ಮಿತ್ರಪಕ್ಷಗಳು: ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷಕ್ಕೆ 2 ಸಚಿವ ಸ್ಥಾನಗಳು, ಹ್ಯಾಮ್ (HAM) ಪಕ್ಷಕ್ಕೆ 1 ಮತ್ತು ಆರ್‌ಎಲ್‌ಎಂ (RLM) ಪಕ್ಷಕ್ಕೆ 1 ಸಚಿವ ಸ್ಥಾನವನ್ನು ನೀಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈಗಾಗಲೇ ಆಡಳಿತಾತ್ಮಕ ಕಾರ್ಯಗಳನ್ನು ಆರಂಭಿಸಿದ್ದು, ಪ್ರಮುಖ 29 ಇಲಾಖೆಗಳು ಅವರ ಬಳಿಯೇ ಇರಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿಗಳಾದ ವಿಜಯ್ ಚೌಧರಿ ಅವರಿಗೆ 10 ಮತ್ತು ಬಿಜೇಂದ್ರ ಕುಮಾರ್ ಯಾದವ್ ಅವರಿಗೆ 8 ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ವಿಸ್ತರಣೆಯು ಮೇ 1 ರಂದು ನಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಮುಂದಿರುವ ಸವಾಲುಗಳು
ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳಿದ ಬಳಿಕ ಎನ್‌ಡಿಎ ಪಾಲುದಾರರ ನಡುವೆ ಸಮನ್ವಯ ಸಾಧಿಸುವುದು ನೂತನ ಸಿಎಂ ಸಾಮ್ರಾಟ್ ಚೌಧರಿ ಅವರಿಗೆ ಪ್ರಮುಖ ಸವಾಲಾಗಿದ್ದು, ಜೆಡಿಯು ಒಳಗಿನ ಸಣ್ಣಪುಟ್ಟ ಅಸಮಾಧಾನಗಳನ್ನು ಶಮನಗೊಳಿಸಿ, ಯಾವುದೇ ಸಂಘರ್ಷ ಇಲ್ಲದಂತೆ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಬೇಕಾದ ಜವಾಬ್ದಾರಿ ಅವರ ಮೇಲಿದೆ. ಮೋದಿ-ನಿತೀಶ್ ಮಾದರಿ ಮಾತ್ರ ಬಿಹಾರದಲ್ಲಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಚೌಧರಿ ಅವರು ಸ್ಥಿರತೆಯ ಸಂದೇಶ ನೀಡಿದ್ದಾರೆ.
ನಿಶಾಂತ್ ಕುಮಾರ್ ಕಥೆ ಏನು..?
ಇದೇ ವೇಳೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ಊಹಾಪೋಹಗಳಿದ್ದವು. ಆದರೆ, ನಿಶಾಂತ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದು, ಸಕ್ರಿಯ ರಾಜಕೀಯಕ್ಕೆ ಇತ್ತೀಚೆಗಷ್ಟೇ ಪಾದಾರ್ಪಣೆ ಮಾಡಿರುವ ಅವರಿಗೆ ಜೆಡಿಯು ಸಂಘಟನೆಯಲ್ಲಿ ಪ್ರಮುಖ ಪಾತ್ರ ನೀಡುವ ಸಾಧ್ಯತೆಗಳಿವೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ(ಏಜೆನ್ಸೀಸ್).