- ಇವರೇನು ಸುಪ್ರೀಂ ಕೋರ್ಟ್ ಲಾಯರಾಗಿದ್ರಾ?
- ಹಣಕಾಸು ಸಚಿವರನ್ನು ಮಾಡಿದ್ದು ಯಾರು?
- ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ನಾಯಕತ್ವದಲ್ಲಿ ವಿಶ್ವಾಸ ಇಟ್ಟಿದ್ದು, ಎನ್‌ಡಿಎ ಕೂಟದಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿ ಕಡಿದುಕೊಳ್ಳುವುದಿಲ್ಲ ಎಂದು ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಹೇಳಿದರು.
ಜೆಡಿಎಸ್ ಬೆಳ್ಳಿಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಮೋದಿ ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಕೇಂದ್ರದಲ್ಲಿದೆ. ಇದನ್ನು ನಮ್ಮ ಕಾರ್ಯಕರ್ತರು, ಮುಖಂಡರು ಮರೆಯಬಾರದು ಎಂದರು.
ತುರ್ತು ಪರಿಸ್ಥಿತಿ ಹೇರಿದಾಗ ಜಯಪ್ರಕಾಶ ನಾರಾಯಣ ಅವರ ಜತೆಯಲ್ಲಿ ನಾವು, ಅವತ್ತಿನ ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕು ಎಂದು ಗುಡುಗಿದರು.
ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ:
ಜೆಡಿಎಸ್ ಪಕ್ಷದಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಜೆಡಿಎಸ್ 58 ಸೀಟು ಪಡೆದಾಗ ಕಾಂಗ್ರೆಸ್ ಜೊತೆ ಸರ್ಕಾರ ಮಾಡಲು ಏನೆಲ್ಲ ನಡೆಯಿತು. ಇವರನ್ನು ಸಿಎಂ ಮಾಡಲು ಎಷ್ಟೆಲ್ಲ ಕಸರತ್ತು ನಡೆಸಿದ್ದೆ ಎನ್ನುವುದು ಹಲವರಿಗೆ ಗೊತ್ತಿದೆ. ಇವರನ್ನು ಸಿಎಂ ಮಾಡಲು ಯಾಕೆ ಅವರು ಒಪ್ಪಲಿಲ್ಲ ಎನ್ನುವುದನ್ನು ಅವರ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನೆ ಕೇಳಿ ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಗುಜರಾತಿನ ಅಹಮದ್ ಪಟೇಲ್ ಅವರಿಗೆ ತಿಳಿದಿತ್ತು. ಸಿದ್ಧರಾಮಯ್ಯ ಅವರನ್ನು ಸಿಎಂ ಮಾಡಲು ಸೋನಿಯಾ ಗಾಂಧಿ ಸುತಾರಾಂ ಒಪ್ಪಲಿಲ್ಲ. ನೀವು ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಬೇಕು, ಇಲ್ಲವಾದರೆ ನಾವು ಚುನಾವಣೆಗೆ ಹೋಗುತ್ತೇವೆ ಎಂದರು. ನಾವು ವಿಧಿ ಇಲ್ಲದೆ ಒಪ್ಪಿಕೊಂಡೆವು ಎಂದು ದೇವೇಗೌಡರು ಹಳೆಯ ವಿಷಯವನ್ನು ಮೆಲುಕು ಹಾಕಿದರು.
ಜೆಡಿಎಸ್ 58 ಸೀಟು ಗೆಲ್ಲೋಕೆ ಚನ್ನಪ್ಪ ಎನ್ನುವ ಲೇವಾದೇವಿದಾರರೊಬ್ಬರ ಮನೆಗೆ ರಾತ್ರಿ ಹನ್ನೆರಡು ಹೊತ್ತಿನಲ್ಲಿ ಹೋಗಿ ಎರಡು ಚೆಕ್ ಕೊಟ್ಟು ಎರಡು ಕೋಟಿ ಸಾಲ ತಂದಿದ್ದೆ. ಆಗ ಈ ಸಿದ್ಧರಾಮಯ್ಯ ಏನು ಮಾಡುತ್ತಿದ್ದರು? ಮಾತಾಡುವಾಗ ಕನಿಷ್ಠ ಪ್ರಮಾಣದ ಕ್ರಿಯೆ ಇರಬೇಕು, ಪ್ರಾಮಾಣಿಕತೆ ಇರಬೇಕು. ಸುಳ್ಳು ಹೇಳಬಾರದು ಎಂದು ದೇವೇಗೌಡರು ಕಿಡಿಕಾರಿದರು.
ಹಣಕಾಸು ಸಚಿವರನ್ನು ಮಾಡಿದ್ದು ಯಾರು?
ಹೆಗಡೆ ಆಗಲಿ, ಬೊಮ್ಮಾಯಿ ಆಗಲಿ ನಿಮ್ಮನ್ನು ಹಣಕಾಸು ಮಂತ್ರಿ ಮಾಡಲಿಲ್ಲ. ನೀವೇನೂ ಮಹಾ ಮೇಧಾವಿ ಆಗಿದ್ದೀರಾ? ನೀವು ಆಕ್ಸ್‌ರ್ಡ್ ವಿವಿಯಲ್ಲಿ ಹಣಕಾಸು ಪದವಿ ಪಡೆದಿದ್ರಾ? ನೀವು ಸುಪ್ರೀಂ ಕೋರ್ಟ್ ಲಾಯರ‌್ರಾ? ಏನೂ ಅಲ್ಲ, ಹೈಕೋಟ್‌ನಲ್ಲಿಯೂ ಲಾಯರ್ ಅಲ್ಲ. ಮೈಸೂರಿನಲ್ಲಿ ಎಲ್ಲೋ ಒಂದೆರಡು ಕೇಸು ವಾದ ಮಾಡಿಕೊಂಡು ಇದ್ದವರು. ನನಗೆ ಸತ್ಯ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಿರಾ? ಜೆಡಿಎಸ್ ಪಕ್ಷಕ್ಕೆ ನಿಮ್ಮ ದೇಣಿಗೆ ಹೇಳಿ? ಎಂದು ಕೇಳಿದರು.
ನಿಮಗೆ ಅಧಿಕಾರ ಕೊಟ್ಟವರನ್ನೆ ಮರೆತಿದ್ದೀರಿ. ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡಿದ್ದಕ್ಕೆ ಕಣ್ಣಿರು ಇಟ್ಟೆ. ನಾನು ಆ ವ್ಯಕ್ತಿಯನ್ನು ಪಕ್ಷದ ರಾಜ್ಯದ ಅಧ್ಯಕ್ಷ ಮಾಡಬೇಕು ಎಂದು ಹೊರಟಾಗ ಹೆಗಡೆ ಅವರು ತಮ್ಮ ಕೋಣೆಯಲ್ಲಿ ನನ್ನ ಕೈ ಹಿಡಿದು ಯಾರನ್ನಾದರೂ ಮಾಡು, ಆತನನ್ನು ಮಾತ್ರ ಮಾಡಬೇಡ ಎಂದು ಹೇಳಿದರೂ ನಾನು ಹೆಗಡೆ ಅವರ ಮಾತು ಕೇಳಲಿಲ್ಲ. ಕೊನೆಗೆ ನಮ್ಮ ಕಚೇರಿಯನ್ನೆ ಈ ಮಹಾನುಭವ ಕಿತ್ತುಕೊಂಡರು. ಅದರ ಪರಿಣಾಮ ಎದುರಿಸುತ್ತಿದ್ದೇನೆ ಎಂದರು.
ನಾನು ಜಾಲಪ್ಪ ಅವರ ಸಮುದಾಯಕ್ಕೆ ದೇವರಾಜು ಅರಸು ಹೆಸರಿನಲ್ಲಿ ಸ್ಥಾಪನೆ ಆಗಲಿ ಎಂದು ಮೆಡಿಕಲ್ ಕಾಲೇಜು ಮಂಜೂರು ಮಾಡಿದೆ. ಇವತ್ತು ಅದು ಜಾಲಪ್ಪ ಮೆಡಿಕಲ್ ಕಾಲೇಜು ಆಗಿದೆ. ಅವರ ಕುಟುಂಬದ ಆಸ್ತಿಯಾಗಿದೆ. ಸಮುದಾಯದ ಆಸ್ತಿ ಆಗಬೇಕಿದ್ದ ಮೆಡಿಕಲ್ ಕಾಲೇಜು ಅವರ ಕುಟುಂಬದ ಆಸ್ತಿಯಾಗಿ ಬದಲಾಗಿದೆ. ಇದು ಇವರ ಸಾಮಾಜಿಕ ನ್ಯಾಯ! ಎಂದು ದೇವೇಗೌಡರು ಲೇವಡಿ ಮಾಡಿದರು.
ಅಹಿಂದ ಸಮಾವೇಶ ಮಾಡಲು ಹೊರಟಾಗ ಅದನ್ನು ಪಕ್ಷದ ವೇದಿಕೆಯಲ್ಲಿ ಮಾಡಿ ಎಂದು ಸೂಚಿಸಿದೆ. ಅದನ್ನು ಅವರು ಕೇಳಲಿಲ್ಲ. ಪ್ರತ್ಯೇಕವಾಗಿ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡುವುದಾಗಿ ಹೊರಟರು. ಕೊನೆಗೆ ಬೇರೆ ದಾರಿ ಇಲ್ಲದೆ, ಅವರನ್ನು ಪಕ್ಷದಿಂದ ಹೊರ ಹಾಕಲು ನಿರ್ಧಾರ ತೆಗೆದುಕೊಂಡೆ. ಈ ಬಗ್ಗೆ ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಇಂತಹವರು ಅನೇಕರು ಬಂದಿದ್ದಾರೆ, ಹೋಗಿದ್ದಾರೆ. ಹೆದರುವುದಿಲ್ಲ. ನಾನು ಪಕ್ಷ ಕಟ್ಟುತ್ತೇನೆ. ಎಲ್ಲಿ ಕರೆದರೂ ಹೋಗುತ್ತೇನೆ. ದೇವೇಗೌಡ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದರು.
ಉತ್ತರದಲ್ಲಿ ಜೆಡಿಯು, ದಕ್ಷಿಣದಲ್ಲಿ ಜೆಡಿಎಸ್ ಎಂದು ಘೋಷಣೆ ಮೊಳಗಿಸಿದ ದೇವೇಗೌಡರು ಅಲ್ಲಿ ನಿತೀಶ್ ಕುಮಾರ್, ಇಲ್ಲಿ ಕುಮಾರಸ್ವಾಮಿ ಎಂದು ಒತ್ತಿ ಹೇಳಿದರು. ನಿತೀಶ್ ಅವರು ಮೂವತ್ತು ವರ್ಷದಿಂದಲೂ ರಾಜಕಾರಣದಲ್ಲಿ ಇದ್ದಾರೆ. ಹತ್ತನೇ ಬಾರಿಗೆ ಪ್ರಮಾಣ ಮಾಡಿದ್ದಾರೆ. ಅವರು ಬಹಳ ಸೂಕ್ಷ್ಮವಾಗಿ ರಾಜಕಾರಣ ಮಾಡಿಕೊಂಡಿದ್ದಾರೆ. ಇದನ್ನು ನಾವು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು.
-ಹೆಚ್.ಡಿ. ದೇವೇಗೌಡರು, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು