Bihar Cabinet | ಬಿಹಾರದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್​ ಕುಮಾರ್​ 
ದೇಶ

Bihar Cabinet | ಬಿಹಾರದ ಸಂಪುಟ ರಚನೆಗೆ ಹೊಸ ಫಾರ್ಮುಲಾ ರೆಡಿ; ಈ ಸೂತ್ರದ ಪ್ರಕಾರ ಸಚಿವ ಸ್ಥಾನ ಹಂಚಿಕೆ

ಪಟನಾ: ಬಿಹಾರದ ನೂತನ ಎನ್‌ಡಿಎ ಸರ್ಕಾರದ ಸಂಪುಟ ರಚನೆಯ ಸ್ಥಾನ(Bihar Cabinet) ಹಂಚಿಕೆ ಕುರಿತು ಮೊದಲ ಸುತ್ತಿನ ಚರ್ಚೆಗಳನ್ನು ಪೂರ್ಣಗೊಂಡಿದ್ದು, ಪ್ರತಿ ಆರು ಶಾಸಕರಿಗೆ ಒಂದು ಸಚಿವ ಸ್ಥಾನವನ್ನು ನೀಡುವ ಸೂತ್ರಕ್ಕೆ ಎಲ್ಲ ಮಿತ್ರಪಕ್ಷಗಳಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಇಂದು ( ನವೆಂಬರ್​ 16) ಬಿಜೆಪಿಯ ಕೇಂದ್ರ ನಾಯಕರೊಂದಿಗೆ, ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ ಮಾತುಕತೆ ನಡೆಸಿ, ಪಾಟ್ನಾಗೆ ಹಿಂತಿರುಗುತ್ತಿದ್ದು, ಶಾಸಕಾಂಗ ಪಕ್ಷದ ಸಭೆಗಳಿಗೆ ಸಿದ್ಧತೆಯ ಕುರಿತಾಗಿ ಚರ್ಚಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್​ರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಯು ಶಾಸಕಾಂಗ ಪಕ್ಷದ ಸಭೆ ಸೋಮವಾರ ನಡೆಯುವ ಸಾಧ್ಯತೆಗಳಿದ್ದು, ಎನ್‌ಡಿಎ ಮೈತ್ರಿಕೂಟದ ಮುಂದಿನ ಮುಖ್ಯಮಂತ್ರಿಯನ್ನು ಎರಡ್ಮೂರು ದಿನದಲ್ಲಿ ಘೋಷಿಸುವ ನಿರೀಕ್ಷೆ ಇದೆ. ಇತ್ತ ಬಿಜೆಪಿ ಸಣ್ಣ ಪುಟ್ಟ ಮಿತ್ರಪಕ್ಷಗಳೊಂದಿಗೆ ಸಂಪುಟದ ಸ್ಥಾನ ಹಂಚಿಕೆಯ ಕುರಿತಾಗಿ ಮಾತುಕತೆಗಳು ಆರಂಭವಾಗಲಿದ್ದು, ಎಚ್‌ಎಎಂ ಮುಖ್ಯಸ್ಥ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ, ಆರ್‌ಎಲ್‌ಎಂನ ಉಪೇಂದ್ರ ಕುಶ್ವಾಹ, ಎಲ್​ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಇತರೆ ಹಿರಿಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಕೇಂದ್ರ ಚುನಾವಣಾ ಆಯೋಗವು 18 ನೇ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಇಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸುತ್ತಿದೆ, ಬಳಿಕ ಹೊಸ ವಿಧಾನಸಭೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಮತ್ತು ಮಾದರಿ ನೀತಿ ಸಂಹಿತೆಯನ್ನು ಔಪಚಾರಿಕವಾಗಿ ತೆಗೆದುಹಾಕಲಾಗುತ್ತದೆ.
ಈ ನಡುವೆ ನಿತೀಶ್ ಕುಮಾರ್ ಸೋಮವಾರ (ನ 17) 17 ನೇ ವಿಧಾನಸಭೆಯನ್ನು ವಿಸರ್ಜಿಸಲು ಸಂಪುಟ ಸಭೆ ಕರೆದಿದ್ದು, ರಾಜಭವನದಲ್ಲಿ ನಿಯಮದಂತೆ ರಾಜೀನಾಮೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲಭ್ಯತೆಯನ್ನು ನೋಡಿಕೊಂಡು ನವೆಂಬರ್ 19 ಅಥವಾ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಕೇಂದ್ರ ಸಚಿವರು, ಇತರ ರಾಜ್ಯದ ಮುಖ್ಯಮಂತ್ರಿಗಳು ಸಹ ಭಾಗವಹಿಸುವ ಸಾಧ್ಯತೆಗಳಿವೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭಾರೀ ಬಹುಮತ ಪಡೆದಿದ್ದು, ಬಿಜೆಪಿ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಇತ್ತ ಜೆಡಿಯು ಕೂಡ ಸಮಬಲದ ಹೋರಾಟ ನಡೆಸಿ 85 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಆರ್‌ಎಲ್‌ಜೆಪಿ 19, ಎಚ್‌ಎಎಂ 5 ಮತ್ತು ರಾಷ್ಟ್ರೀಯ ಲೋಕ ಮೋರ್ಚಾ 4 ಸ್ಥಾನಗಳನ್ನು ಜಯಭೇರಿ ಬಾರಿಸಿವೆ.
2020 ರಲ್ಲಿ ಭಾರೀ ಪೈಪೋಟಿಯೊಡ್ಡಿದ್ದ ಮಹಾಘಟಬಂಧನ್, ಈ ಸಲ ಕೇವಲ 35 ಸ್ಥಾನಗಳಿಗೆ ಇಳಿದಿದೆ(ಏಜೆನ್ಸೀಸ್​).