Jharkhand RajyaSabha | ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಣಿ
Jharkhand RajyaSabha: ಜಾರ್ಖಂಡ್‌ನ ಎರಡು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯು ತೀವ್ರ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗಿದ್ದು, ನಿರೀಕ್ಷಿತ ಸಂಖ್ಯೆಯ ಬಲ ಇಲ್ಲದಿದ್ದರೂ, ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಣಿ ಅವರು ಅಡ್ಡ ಮತದಾನದ (Cross-voting) ಲಾಭ ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಪ್ರಣವ್ ಝಾ ಅವರಿಗೆ ಭಾರಿ ಮುಖಭಂಗವಾಗಿದೆ. ಇನ್ನುಳಿದ ಮತ್ತೊಂದು ಸ್ಥಾನವನ್ನು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಅಭ್ಯರ್ಥಿ ಬೈದ್ಯನಾಥ್ ರಾಮ್ ಸುಲಭವಾಗಿ ಕೈವಶ ಮಾಡಿಕೊಂಡಿದ್ದಾರೆ.
ಚುನಾವಣಾ ಫಲಿತಾಂಶದ ವಿವರಗಳ ಪ್ರಕಾರ, ಗೆಲುವಿನ ದಡ ಮುಟ್ಟಲು 28 ಮತಗಳ ಅಗತ್ಯವಿದ್ದು, ಪರಿಮಳ್ ನತ್ವಾಣಿ ಅವರು ಬರೊಬ್ಬರಿ 28 ಮತಗಳನ್ನು ಪಡೆದು ವಿಜಯಶಾಲಿಯಾದರು. ಆದರೆ ಅವರ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಪ್ರಣವ್ ಝಾ ಕೇವಲ 20 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಮತ್ತೊಂದು ಸ್ಥಾನದಲ್ಲಿ ಜೆಎಂಎಂನ ಬೈದ್ಯನಾಥ್ ರಾಮ್ ಅವರು ಒಟ್ಟು 30 ಮತಗಳನ್ನು ಪಡೆದು ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಈ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು ಮೂರು ಮತಗಳು ಅಸಿಂಧುಗೊಂಡಿದ್ದು, ಇದರಲ್ಲಿ ಇಬ್ಬರು ಬಿಜೆಪಿ ಶಾಸಕರು ಹಾಗೂ ಒಬ್ಬರು ಕಾಂಗ್ರೆಸ್ ಶಾಸಕರ ಮತಗಳು ಸೇರಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಲೆಕ್ಕಾಚಾರ ಉಲ್ಟಾ ಆಗಿದ್ದು ಹೇಗೆ..?
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಹೊಂದಿದ್ದ ಸ್ವಂತ ಶಾಸಕರ ಬಲ ಕೇವಲ 24. ಅಂದರೆ, ರಾಜ್ಯಸಭಾ ಸ್ಥಾನ ಗೆಲ್ಲಲು ಬೇಕಿದ್ದ ಪ್ರಥಮ ಪ್ರಾಶಸ್ತ್ಯದ ಮತಗಳಿಗಿಂತ ಎನ್‌ಡಿಎಗೆ 4 ಮತಗಳ ಕೊರತೆಯಿತ್ತು. ಆದರೆ, ಜೆಎಂಎಂ ಮತ್ತು ಕಾಂಗ್ರೆಸ್ ಒಳಗೊಂಡ ಆಡಳಿತಾರೂಢ ಇಂಡಿಯಾ (INDIA) ಒಕ್ಕೂಟವು 56 ಶಾಸಕರ ಬೃಹತ್ ಬಲ ಹೊಂದಿತ್ತು. ಹೀಗಿದ್ದೂ ಎನ್‌ಡಿಎ ಬೆಂಬಲಿತ ನತ್ವಾಣಿ ಗೆದ್ದಿರುವುದು, ವಿರೋಧ ಪಕ್ಷದ ಪಾಳಯದಲ್ಲಿ ದೊಡ್ಡ ಮಟ್ಟದ ಒಡಕು ಮೂಡಿ ಉಭಯ ಪಕ್ಷಗಳ ಶಾಸಕರು ನತ್ವಾಣಿ ಪರವಾಗಿ ಅಡ್ಡ ಮತದಾನ ಮಾಡಿರುವುದನ್ನು ಬಹಿರಂಗಪಡಿಸಿದೆ. ವಿಧಾನಸಭೆಯ ಆವರಣದಲ್ಲೇ ನಡೆದ ಮತದಾನದಲ್ಲಿ ಎಲ್ಲಾ 81 ಶಾಸಕರು ಭಾಗವಹಿಸಿದ್ದರು.
ನಾಲ್ಕನೇ ಬಾರಿಗೆ ರಾಜ್ಯಸಭೆಗೆ: ನತ್ವಾಣಿ ಐತಿಹಾಸಿಕ ಸಾಧನೆ
ಈ ಐತಿಹಾಸಿಕ ಗೆಲುವಿನೊಂದಿಗೆ ಪರಿಮಳ್ ನತ್ವಾಣಿ ನಾಲ್ಕನೇ ಅವಧಿಗೆ ರಾಜ್ಯಸಭೆಯನ್ನು ಪ್ರತಿನಿಧಿಸುವ ಅಪರೂಪದ ದಾಖಲೆ ಬರೆದಿದ್ದಾರೆ. ದೇಶದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಕಾಲ ಪಕ್ಷೇತರ ಸದಸ್ಯರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಈ ಹಿಂದೆ 2008 ರಿಂದ 2020 ರವರೆಗೆ ಜಾರ್ಖಂಡ್‌ನಿಂದಲೇ ಸತತ ಎರಡು ಬಾರಿ ಪಕ್ಷೇತರ ಸಂಸದರಾಗಿದ್ದ ಇವರು, ಆನಂತರ ಆಂಧ್ರಪ್ರದೇಶದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು. ಇದೀಗ ಮತ್ತೆ ತಾವು ಕರ್ಮಭೂಮಿ ಎಂದು ಕರೆಯುವ ಜಾರ್ಖಂಡ್‌ಗೆ ಮರಳಿದ್ದಾರೆ.
ತಮ್ಮ ಗೆಲುವಿನ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನತ್ವಾಣಿ, 2008 ರಲ್ಲಿ ನನ್ನ ಸಂಸದೀಯ ಪಯಣ ಆರಂಭವಾದ ಜಾರ್ಖಂಡ್‌ನಿಂದಲೇ ಮೂರನೇ ಬಾರಿ ಆಯ್ಕೆಯಾಗಿರುವುದು ಅತ್ಯಂತ ಭಾವುಕ ಕ್ಷಣ ಎಂದಿದ್ದಾರೆ. ಜಾರ್ಖಂಡ್ ಅನ್ನು ತಮ್ಮ ಕರ್ಮಭೂಮಿ ಎಂದು ಬಣ್ಣಿಸಿದ ಅವರು, ತಮಗೆ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಜಾರ್ಖಂಡ್ ವಿಧಾನಸಭೆಯ ಎಲ್ಲಾ ಶಾಸಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ, ಒಂದು ದಶಕಕ್ಕೂ ಹೆಚ್ಚು ಕಾಲ ಜಾರ್ಖಂಡ್‌ನಲ್ಲಿ ಸೇವೆ ಸಲ್ಲಿಸಿರುವುದರಿಂದ ಈ ರಾಜ್ಯ ತಮಗೆ ಅಪರಿಚಿತವಲ್ಲ, ಜನರ ಸೇವೆಗೆ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ(ಏಜೆನ್ಸೀಸ್).